ಗ್ಯಾರಂಟಿ ಯೋಜನೆಗಳಿಂದ ಜನತೆ ಸಂತುಷ್ಟ

| Published : Feb 18 2024, 01:34 AM IST / Updated: Feb 18 2024, 07:52 AM IST

ಸಾರಾಂಶ

ಶೇ. ತೊಂಬತ್ತರಷ್ಟು ಜನರು ತೆರಿಗೆ ಪಾವತಿ ಮಾಡಿದರೆ, ಶೇ. ಹತ್ತರಷ್ಟು ಜನರು ತೆರಿಗೆಯ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಆದರೆ ಸಂಪನ್ಮೂಲಗಳ ಮರುಹಂಚಿಕೆ ನ್ಯಾಯಯುತವಾಗಿ ಆಗಬೇಕೆಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಕುರಿತು ಜನ ಸಂತುಷ್ಟರಾಗಿದ್ದಾರೆ, ಈ ವರ್ಷ ಈ ಯೋಜನೆಗೆ ೩೫೪೧೦ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮೀಸಲಿಟ್ಟಿರುವುದಾಗಿ ಶಾಸಕಿ ರೂಪಕಲಾಶಶಿಧರ್ ತಿಳಿಸಿದರು.

ನಗರದ ಹೊರವಲಯದ ಸುಂದಪಾಳ್ಯ ಗ್ರಾ.ಪಂ ವ್ಯಾಪ್ತಿಯಲ್ಲಿ ಸರ್ಕಾರ ಗ್ಯಾರಂಟಿಗಳ ಅನುಷ್ಠಾನ ಮತ್ತು ಗ್ರಾಮಸಭೆಯಲ್ಲಿ ಅವರು ಮಾತನಾಡಿ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಜೇಬಿಗೆ ಹಣ ಹಾಕುವ ಈ ಗ್ಯಾರಂಟಿ ಯೋಜನೆಗಳು, ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಮೂಲ ಆದಾಯ ಕಾರ್‍ಯಕ್ರಮಗಳಿಗೆ ಪ್ರೇರಿತವಾಗಿವೆ ಎಂದರು.

ಸಂಪನ್ಮೂಲ ಮರುಹಂಚಿಕೆ ಆಗಲಿ: ಶೇ.೯೦ರಷ್ಟು ಜನರು ತೆರಿಗೆ ಪಾವತಿ ಮಾಡಿದರೆ, ಶೇ.೧೦ರಷ್ಟು ಜನರು ತೆರಿಗೆಯ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಆದರೆ ಸಂಪನ್ಮೂಲಗಳ ಮರುಹಂಚಿಕೆ ನ್ಯಾಯಯುತವಾಗಿ ಆಗಬೇಕೆಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಶಾಸಕರು ತಿಳಿಸಿದರು.

ಶಕ್ತಿ ಯೋಜನೆಯಡಿ ಪ್ರತಿದಿನ ಸರಾಸರಿ ೫೦ ಲಕ್ಷ ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ, ಒಟ್ಟಾರೆ ೨೩ ಕೋಟಿ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆತಿದೆ, ಗೃಹಜ್ಯೋತಿ ಯೋಜನೆಯಡಿ ೧.೧೬ ಕೋಟಿ ಕುಟುಂಬಗಳು ಈಗಾಗಲೇ ನೋಂಧಣಿ ಮಾಡಿಕೊಂಡಿದ್ದಾರೆ, ಜುಲೈ ಒಂದರಿಂದ ಗೃಹ ಬಳಕೆ ೨೦೦ ಯೂನಿಟ್ ವಿದ್ಯುತ್ ಉಚಿತ ಸೌಲಭ್ಯ ಫಲಾನುಭವಿಗಳು ಪಡೆಯುತ್ತಿದ್ದಾರೆ ಎಂದರು.

ಕೇಂದ್ರದ ಅಕ್ಕಿ ರಾಜಕೀಯ: ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರದ ಅಕ್ಕಿ ರಾಜಕೀಯದಿಂದಾಗಿ ಹೆಚ್ಚುವರಿ ಆಹಾರಧಾನ್ಯ ನೀಡಲು ಸಾದ್ಯವಾಗಿಲ್ಲ, ಬದಲಿಗೆ ಪ್ರತಿ ಫಲಾನುಭವಿಗೆ ತಲಾ ೧೭೦ ರೂ ನಂತೆ ೪.೪೨ ಕೋಟಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಲು ಚಾಲನೆ ನೀಡಲಾಗಿದೆ.

ಈವರೆಗೂ ೫೭.೫೧ ಕುಟುಂಬಗಳಿಗೆ ೩೩೭.೦೮ ಕೋಟಿ ರೂ. ವರ್ಗಾವಣೆ ಮಾಡಲಾಗಿದೆ, ಭಾಗ್ಯ ಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಎರಡು ಸಾವಿರ ರೂ.ಗಳು ಬ್ಯಾಂಕ್ ಖಾತೆಗೆ ಬರುತ್ತಿರುವುದಾಗಿ ಸರಕಾರದ ಗ್ಯಾರಂಟಿ ಯೋಜನೆಗಳು ಕುರಿತು ಶಾಸಕರು ಸಭೆಗೆ ಮನವರಿಕೆ ಮಾಡಿಕೊಟ್ಟರು.

ಆರ್ಥಿಕಾಭಿವೃದ್ಧಿಗೆ ಯೋಜನೆ: ಸರ್ಕಾರದ ಸೌಲತ್ತುಗಳಾದ ರೇಷನ್ ಕಾರ್ಡ್, ಗೃಹಲಕ್ಷ್ಮಿ ಗೃಹಭಾಗ್ಯ ಯೋಜನೆಗಳಲ್ಲಿ ಕಂಡು ಬಂದಿರುವ ಲೋಪ ದೋಷಗಳನ್ನು ಪರಿಹರಿಸಿಕೊಂಡು ಪ್ರತಿ ತಿಂಗಳು ಸರಕಾರದ ಸೌಲತ್ತುನ್ನು ಪಡೆಯರಿ, ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು.

ಹೆಣ್ಣು ಮಕ್ಕಳ ಬದುಕು ಸುಧಾರಿಸಬೇಕು ಎಂದರೆ ನಿಮಗೆ ಶಕ್ತಿ ತುಂಬಬೇಕು ಸಹಾಯ ಮಾಡಬೇಕು ಎಂಬ ದೃಷ್ಟಿಯಿಂದ ಕೆಲವೊಂದು ಯೋಜನೆಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ ಎಂದರು.

ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಕಟ್ಟಕಡೆಯ ಕುಟುಂಬಗಳಿಗೆ ಯೋಜನೆಗಳು ತಲುಪಿದೆಯೇ, ಯೋಜನೆಗಳಿಂದ ಆಗಿರುವ ಲೋಪ ದೋಷ ಏನೆಂಬುದರ ಬಗ್ಗೆ ಅರಿತುಕೊಳ್ಳುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ಆಯೋಜನೆ ಮಾಡಲಾಗುತ್ತಿದೆ. 

ತಾಲೂಕಿಗೆ ೧೨೦೦ ಮನೆಗಳುಕಳೆದ ೫ ವರ್ಷಗಳ ಹಿಂದೆ ನನಗೆ ಮತ ನೀಡಿ ಶಾಸಕ ಸ್ಥಾನ ನೀಡಿದಿರಿ ನಂತರ ಇದೀಗ ಮರಳಿ ನನಗೆ ಮತ ನೀಡಿ ಅಧಿಕಾರ ನೀಡಿದ್ದಿರೀ, ಆದ್ದರಿಂದ ಸರಕಾರದಲ್ಲಿ ಸತತವಾಗಿ ಹೋರಾಟ ಮಾಡುವ ಮೂಲಕ ೧೨೦೦ ಮನೆಗಳನ್ನು ತಂದಿದ್ದೇನೆ, ಪ್ರತಿ ವರ್ಷ ನಿಮ್ಮ ಪಂಚಾಯ್ತಿಗೆ ೧ ಅಥವಾ ೨ ಮನೆಗಳು ಬರಲಿದೆ ಅದನ್ನು ಬಿಟ್ಟು ಇದು ವಿಶೇಷವಾಗಿ ನಾನು ಪ್ರಯತ್ನಪಟ್ಟಿದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ನೀಡಿದೆ.

ಗ್ರಾಮಗಳಲ್ಲಿ ಕಡು ಬಡವರು ಇದ್ದರೆ ಅವರಿಗೆ ಪ್ರಥಮ ಆಧ್ಯತೆಯಾಗಿ ಮನೆಗಳನ್ನು ನೀಡಲಾಗುವುದು ಮನೆ ನಿರ್ಮಿಸಿಕೊಳ್ಳಲು ೪ ಹಂತಗಳಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ ಅವುಗಳನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು. ಈ ವೇಳೆ ತಹಸೀಲ್ದಾರ್ ನಾಗವೇಣಿ, ಇ.ಒ ಮಂಜುನಾಥ ಹರ್ತಿ, ಸಿಡಿಪಿಓ ರಾಜೇಶ್, ಸಮಾಜ ಕಲ್ಯಾಣ ಇಲಾಖೆ ಶಿವಾರೆಡ್ಡಿ ಇದ್ದರು.