ಜನರು ಕೇಂದ್ರ ಸಚಿವ ಎಚ್ಡಿಕೆ ಮಾತಿಗೆ ಮರುಳಾಗುವುದಿಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ

| Published : Oct 31 2024, 12:48 AM IST

ಸಾರಾಂಶ

ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಅಂದ ಮೇಲೆ ಕುಮಾರಸ್ವಾಮಿ ಎಲ್ಲಿ ಬೇಕಾದರೂ ನಿಲ್ಲಲಿ. ರಾಮನಗರಕ್ಕೆ ಬಂದರು, ಲೋಕಸಭೆ ಚುನಾವಣೆ ವೇಳೆ ಮಂಡ್ಯದಲ್ಲಿ ನಿಂತು ಗೆದ್ದರು, ಈಗ ಅವರ ಮಗ ಚನ್ನಪಟ್ಟಣದಿಂದ ಸ್ಪರ್ಧಿಸಿದ್ದಾರೆ. ರಾಮನಗರ ನನ್ನ ಕರ್ಮಭೂಮಿ ಅಂತಾರೆ. ನಾನು ಆ ವಿಷಯ ಬಗ್ಗೆ ಚರ್ಚೆ ಮಾಡುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಎಚ್‌.ಡಿ.ಕುಮಾರಸ್ವಾಮಿ ಅವರ ಕೊನೆಯ ದಿನದ ಬಗ್ಗೆ ಚರ್ಚಿಸುವ ಅವಶ್ಯಕತೆ ನನಗಿಲ್ಲ. ಅವರು ಎಲ್ಲಿ ಮಣ್ಣಾಗುವರೋ ನನಗೆ ಸಂಬಂಧವಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಸನ ನನ್ನ ಜನ್ಮಭೂಮಿ, ರಾಮನಗರದಲ್ಲಿ ಮಣ್ಣಾಗುತ್ತೇನೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಣ್ಣಾಗುವುದರಲ್ಲಿ ಎರಡೂ ಪದ್ಧತಿ ಇದೆ. ಸಾವಿಗೆ ಮೊದಲೇ ಜಾಗ ತಿಳಿಸಿರುತ್ತಾರೆ, ಎರಡನೆಯದು ಸತ್ತ ಬಳಿಕ ಎಲ್ಲಿ ಮಣ್ಣಾಗಬೇಕೆಂದು ಮನೆಯವರು ನಿರ್ಧಾರ ಮಾಡುತ್ತಾರೆ. ಈ ಎರಡೂ ವಿಷಯಗಳು ನನಗೆ ಸಂಬಂಧ ಇಲ್ಲ ಎಂದು ಉತ್ತರಿಸಿದರು.

ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಅಂದ ಮೇಲೆ ಕುಮಾರಸ್ವಾಮಿ ಎಲ್ಲಿ ಬೇಕಾದರೂ ನಿಲ್ಲಲಿ. ರಾಮನಗರಕ್ಕೆ ಬಂದರು, ಲೋಕಸಭೆ ಚುನಾವಣೆ ವೇಳೆ ಮಂಡ್ಯದಲ್ಲಿ ನಿಂತು ಗೆದ್ದರು, ಈಗ ಅವರ ಮಗ ಚನ್ನಪಟ್ಟಣದಿಂದ ಸ್ಪರ್ಧಿಸಿದ್ದಾರೆ. ರಾಮನಗರ ನನ್ನ ಕರ್ಮಭೂಮಿ ಅಂತಾರೆ. ನಾನು ಆ ವಿಷಯ ಬಗ್ಗೆ ಚರ್ಚೆ ಮಾಡುವುದಿಲ್ಲ. ಚುನಾವಣಾ ಸಮಯದಲ್ಲಿ ಅಲ್ಲಿ ಮಣ್ಣಾಗುತ್ತೇನೆ, ಇಲ್ಲಿ ಮಣ್ಣಾಗುತ್ತೇನೆ ಎನ್ನುವುದೇಕೆ. ಜನರು ಇದಕ್ಕೆಲ್ಲಾ ಮರುಳಾಗುವುದಿಲ್ಲ ಎಂದರು.

ಮೂರು ಕ್ಷೇತ್ರದಲ್ಲಿ ಗೆಲ್ಲುವುದು ನಮ್ಮ ಮುಖ್ಯ ಗುರಿ. ಚುನಾವಣೆ ನನ್ನ ನೇತೃತ್ವದಲ್ಲಿ ನಡೆಯುವುದಿಲ್ಲ. ಡಿ.ಕೆ.ಶಿವಕುಮಾರ್‌ ಅದರ ನೇತೃತ್ವ ವಹಿಸುತ್ತಾರೆ. ಚುನಾವಣೆ ಜವಾಬ್ದಾರಿ ನಿರ್ವಹಿಸುತ್ತಿರುವ ಸಚಿವರಲ್ಲಿ ನಾನೂ ಒಬ್ಬ. ಅವರು ಕೊಟ್ಟ ಜಾಗದಲ್ಲಿ ಕೆಲಸ ಮಾಡುತ್ತೇನೆ. ನ.3 ರಿಂದ 11ರ ವರೆಗೆ ಪ್ರಚಾರ ಮಾಡುವೆ ಎಂದು ನುಡಿದರು.

ಚನ್ನಪಟ್ಟಣ ಚುನಾವಣೆಯ ಜವಾಬ್ದಾರಿ ನನಗೆ ಕೊಟ್ಟಿಲ್ಲ. ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮ ಎದುರಾಳಿಯವರು ನಮ್ಮ ಕೇಳಿ ಚುನಾವಣೆ, ಸ್ಟ್ಯಾಟಜಿ ಮಾಡುವುದಿಲ್ಲ. ಅವರು ಯಾವ ಸ್ಟ್ಯಾಟರ್ಜಿ ಬೇಕಾದರೂ ಬಳಸಲಿ. ನಮ್ಮ ಚುನಾವಣೆ ನಾವು ಮಾಡುತ್ತೇವೆ ಎಂದರು.

ರಾಮನಗರ ನಗರ ಸಭೆಯನ್ನು ಮಹಾನಗರ ಪಾಲಿಕೆ ಮಾಡುವ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಕೇಳಿದಾಗ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇದ್ದಾರೆ. ಮಹಾನಗರ ಪಾಲಿಕೆ ಮಾಡುವುದು ರಾಜ್ಯ ಸರ್ಕಾರ. ಕೇಂದ್ರ ಸರ್ಕಾರ ಅಲ್ಲ, ರಾಜ್ಯದಲ್ಲಿ ಅವರು (ಕುಮಾರಸ್ವಾಮಿ) ಮುಖ್ಯಮಂತ್ರಿ ಆದಾಗ ಮಾಡಲಿಲ್ಲ. ಎರಡು ಬಾರಿ ಸಿಎಂ ಆಗಿದ್ದರೂ ಮಾಡಲಿಲ್ಲ. ಈಗ ಮಾಡುತ್ತೇನೆ ಎನ್ನುವುದು ಎಷ್ಟರ ಮಟ್ಟಿಗೆ ಸತ್ಯ?, ಮಹಾನಗರ ಪಾಲಿಕೆ ಮಾಡುವುದಕ್ಕೂ ಮುನ್ನ ರಾಜ್ಯದ ಕ್ಯಾಬಿನೆಟ್ ಮುಂದೆ ಚರ್ಚೆಯಾಗಬೇಕು ಎಂದರು.

ರೈತರ ಜಮೀನನ್ನು ವಕ್ಫ್ ಬೋರ್ಡ್ ಕಬಳಿಸುತ್ತಿರುವ ವಿಚಾರವಾಗಿ ಸಿಎಂ ನೋಟಿಸ್ ವಾಪಸ್ ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಈಗ ಹೊಸದಾಗೇನೂ ನೋಟಿಸ್ ಕೊಡುತ್ತಿಲ್ಲ. ಎಲ್ಲಾ ಸರ್ಕಾರ ಇದ್ದಾಗಲೂ ವಕ್ಫ್ ಕಮಿಟಿ ನೋಟಿಸ್ ಕೊಟ್ಟಿದ್ದಾರೆ. ಯಾವುದೂ ಸಹ ಕಾರ್ಯರೂಪಕ್ಕೆ ಬಂದಿಲ್ಲ. ಬಿಜೆಪಿ-ಜೆಡಿಎಸ್‌ಗೆ ನಮ್ಮಂತೆ ಜನಪರ ಕೆಲಸ ಮಾಡಲು ಸಾಧ್ಯವಾಗಿಲ್ಲ, ಸಾರ್ವಜನಿಕರ ಕಾರ್ಯಕ್ರಮ, ಅಭಿವೃದ್ಧಿ ಕಡೆ ಗಮನಕೊಡಲಿಲ್ಲ. ಕಮ್ಯುನಲ್ ವಿಚಾರ ಕೆದಕಿ ಕಿತಾಪತಿ ಮಾಡೋದೆ ಅವರ ಕೆಲಸ ಎಂದು ಟೀಕಿಸಿದರು.

ನಾಗಮಂಗಲದಲ್ಲಿ ವಕ್ಫ್ ಕಮಿಟಿ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಕೆಲವು ಸಮಸ್ಯೆ ಇದೆ. ಪುರಾತತ್ವ ಇಲಾಖೆಯಿಂದ ನಾಗಮಂಗಲದಲ್ಲಿ ಅರ್ಧ ಪಟ್ಟಣವನ್ನೇ ಖಾಲಿ ಮಾಡಬೇಕು ಅಂತ ನೋಟಿಸ್ ಬಂದಿದೆ. ಬೆಳ್ಳೂರಿನಲ್ಲೂ ಸಹ ಈ ವಿಷಯ ಬಂದಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಲಯದಲ್ಲಿ ಹಕ್ಕು ಪಡೆಯುತ್ತೇವೆ. ಜಿಲ್ಲೆಯ ಏಳು ಕ್ಷೇತ್ರದಲ್ಲಿ ಯಾವುದೇ ವಕ್ಫ್ ನೋಟಿಸ್ ಜಾರಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮಾಜಿ ಶಾಸಕ ಎಚ್‌.ಬಿ.ರಾಮು, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್‌, ಅಂಜನಾ ಶ್ರೀಕಾಂತ್‌ ಇದ್ದರು.