ದೈಹಿಕ ಶಿಕ್ಷಕರನ್ನು ಮುಖ್ಯ ಶಿಕ್ಷಕರಾಗಿ ಮಾಡಲು ಸಾಧ್ಯವಿಲ್ಲ : ಶಿಕ್ಷಣ ಸಚಿವ ಮಧು ಬಂಗಾರಪ್ಪ

| N/A | Published : Mar 18 2025, 12:36 AM IST / Updated: Mar 18 2025, 04:34 AM IST

Madhu bangarappa

ಸಾರಾಂಶ

ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ನೀಡಲು ನಿಯಮದ ಪ್ರಕಾರ ಸಾಧ್ಯವಿಲ್ಲ. ಆದರೂ, ಪ್ರೊ. ಎಲ್‌.ಆರ್‌. ವೈದ್ಯನಾಥನ್‌ ವರದಿ ಆಧರಿಸಿ ಮುಂಬಡ್ತಿ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಧಾನ ಪರಿಷತ್‌: ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ನೀಡಲು ನಿಯಮದ ಪ್ರಕಾರ ಸಾಧ್ಯವಿಲ್ಲ. ಆದರೂ, ಪ್ರೊ. ಎಲ್‌.ಆರ್‌. ವೈದ್ಯನಾಥನ್‌ ವರದಿ ಆಧರಿಸಿ ಮುಂಬಡ್ತಿ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕಾಂಗ್ರೆಸ್‌ನ ರಾಮೋಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿಗಳು ಬೇರೆ ಬೇರೆ ಆಗಿರುತ್ತವೆ. ಜೊತೆಗೆ ಶಿಕ್ಷಕರಿಗೆ ಬಿಎಡ್‌ ಪದವಿ ನಿಗದಿಪಡಿಸಲಾಗಿದ್ದರೆ, ದೈಹಿಕ ಶಿಕ್ಷಣ ಶಿಕ್ಷಕರು ಬಿಎಡ್‌ ಪದವಿ ಹೊಂದಿರುವುದಿಲ್ಲ. ಜೊತೆಗೆ ಶಿಕ್ಷಕರು ಬೋಧನೆಯಲ್ಲಿ ಪ್ರಾವೀಣ್ಯತೆ ಮತ್ತು ಅನುಭವ ಹೊಂದಿರುತ್ತಾರೆ. ಹೀಗಾಗಿ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡಲು ಈಗಿನ ನಿಯಮಾವಳಿ ಪ್ರಕಾರ ಸಾಧ್ಯವಿಲ್ಲ. ಆದರೂ ವೈದ್ಯನಾಥನ್‌ ವರದಿ ಶಿಫಾರಸು ಆಧರಿಸಿ ಮುಂಬಡ್ತಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಇದಕ್ಕೂ ಮುನ್ನ ಮಾತನಾಡಿದ ರಾಮೋಜಿಗೌಡ ಅವರು, 30-35 ವರ್ಷ ಸೇವೆ ಸಲ್ಲಿಸಿದರೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಂಬಡ್ತಿ ಇಲ್ಲ ಎಂದರೆ ಹೇಗೆ? ಅವರಿಗೆ ಸಹ ಶಿಕ್ಷಕರೆಂದಾದರೂ ಬಡ್ತಿ ನೀಡಿ ಎಂದು ಆಗ್ರಹಿಸಿದರು.