ಶಾಲೆಗೆ ಎಲ್ಲ ಸೌಕರ್ಯ ನೀಡಲು ಸರ್ಕಾರ ಬದ್ಧ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ

| N/A | Published : Mar 16 2025, 01:51 AM IST / Updated: Mar 16 2025, 12:54 PM IST

ಶಾಲೆಗೆ ಎಲ್ಲ ಸೌಕರ್ಯ ನೀಡಲು ಸರ್ಕಾರ ಬದ್ಧ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಎಂದಿಗೂ ಮಾರಾಟದ ವಸ್ತುವಾಗಬಾರದು, ಹಣ ಕೊಟ್ಟು ಸರ್ಟಿಫಿಕೆಟ್ ಪಡೆಯುವ ಸಂಸ್ಕೃತಿ ನಿಲ್ಲಬೇಕು. ಹೀಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕಳೆದೆರಡು ವರ್ಷಗಳಿಂದ ಸಾಕಷ್ಟು ಬಿಗಿಗೊಳಿಸಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಬ್ಯಾಡಗಿ: ಬಜೆಟ್‌ನಲ್ಲಿ ₹45 ಸಾವಿರ ಕೋಟಿ ಶಿಕ್ಷಣಕ್ಕೆ ಲಭಿಸಿದೆ. ಮಕ್ಕಳ ಭವಿಷ್ಯಕ್ಕೋಸ್ಕರ ಶಾಲೆಗಳಿಗೆ ಬೇಕಾಗಿರುವ ಎಲ್ಲ ಸೌಕರ್ಯ ನೀಡಲು ಸರ್ಕಾರ ಬದ್ಧವಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶನಿವಾರ ತಾಲೂಕಿನ ಕೆರವಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇವರ ಮೇಲೆ ಭಕ್ತಿ ತೋರಿಸಿದಷ್ಟೇ ಮಕ್ಕಳಿಗೆ ಶಿಕ್ಷಣ ನೀಡುವ ವಿಷಯದಲ್ಲೂ ಶಿಕ್ಷಕರು ನಿಷ್ಠೆ ತೋರಿಸುವ ಮೂಲಕ ಮಕ್ಕಳನ್ನು ಸದೃಢ ಪ್ರಜೆಗಳನ್ನಾಗಿ ಮಾಡಬೇಕು ಎಂದು ಹೇಳಿದರು.

ಶಿಕ್ಷಣ ಎಂದಿಗೂ ಮಾರಾಟದ ವಸ್ತುವಾಗಬಾರದು, ಹಣ ಕೊಟ್ಟು ಸರ್ಟಿಫಿಕೆಟ್ ಪಡೆಯುವ ಸಂಸ್ಕೃತಿ ನಿಲ್ಲಬೇಕು. ಹೀಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕಳೆದೆರಡು ವರ್ಷಗಳಿಂದ ಸಾಕಷ್ಟು ಬಿಗಿಗೊಳಿಸಿದ್ದೇವೆ. ಇದೊಂದು ಶಿಕ್ಷಣ ಸುಧಾರಣಾ ಕ್ರಮವೆಂದು ಭಾವಿಸಿದ್ದೇನೆ ಎಂದರು.

ಇಲ್ಲಿನ ಎಲ್ಲ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಈಗಾಗಲೇ 14 ಸಾವಿರ ಶಿಕ್ಷಕರ ನೇಮಕವಾಗಿದೆ. ಇನ್ನೂ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇತ್ತೀಚೆಗೆ ಹಳ್ಳಿಯಲ್ಲಿ ಓದಿದ ಮಕ್ಕಳೇ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಕೃಪಾಂಕ ನೀಡುವ ಕುರಿತು ಸದ್ಯ ಚರ್ಚೆಯಲ್ಲಿಲ್ಲ ಎಂದರು.

ತಂದೆಯನ್ನು ಸ್ಮರಿಸಿಕೊಂಡ ಸಚಿವ:  ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅಧಿಕಾರದ ಅವಧಿಯಲ್ಲಿ ಶಿಕ್ಷಣ ವಂಚಿತ ಮಕ್ಕಳಿಗೆ ₹1 ನೀಡಿ ಶಾಲೆಗಳಿಗೆ ಕರೆ ತರಲಾಗುತ್ತಿತ್ತು. ಇದರಿಂದ ಕೂಲಿಕಾರ್ಮಿಕರ ಮಕ್ಕಳು ಶಿಕ್ಷಣವಂತರಾದರು. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ ಅವರು, ರೈತರ ಮೊಗದಲ್ಲಿ ನಗು ಮೂಡಿಸಿದರು. ಆಶ್ರಯ ಯೋಜನೆ ಜಾರಿಗೊಳಿಸಿ ಬಡವರಿಗೆ ಸೂರು ನೀಡಿದರು. ಬಗರ್‌ಹುಕುಂ ಸಾಗುವಳಿ ಕಾನೂನು ಜಾರಿಗೊಳಿಸಿ ಜಮೀನು ಮಂಜೂರು ಮಾಡಿದ್ದು, ಆರ್ಥಿಕವಾಗಿ ಸದೃಢರಾಗಲು ಕಾರಣವಾಗಿದ್ದಾರೆ ಎಂದರು.

ಬ್ಯಾಡಗಿ ಮತಕ್ಷೇತ್ರಕ್ಕೆ ಶಾಸಕರು 100 ಕೊಠಡಿ ಕೇಳಿದ್ದಾರೆ. ಅದಕ್ಕಿಂತಲೂ ಹೆಚ್ಚಿಗೆ ಕೊಠಡಿ ನೀಡಲಿದ್ದೇನೆ. ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿದೆ. ಹಳೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳು ₹1.20 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಿದ್ದು, ರಾಜ್ಯಕ್ಕೆ ಇದು ಮಾದರಿಯಾಗಿದೆ. ಹೀಗಾಗಿ ನನ್ನ ತಂದೆಯವರು ಓದಿದ ಶಾಲೆಗೆ ₹20 ಲಕ್ಷ ನೀಡಿದ್ದೇನೆ ಎಂದರು.

ಅಗಡಿ ಶಾಲೆಗೆ ₹5 ಲಕ್ಷ: ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಶತಮಾನೋತ್ಸವ ಆಚರಿಸುತ್ತಿರುವ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಗ್ರಾಮದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿ ಉಳಿಯಲು ಸಾಧ್ಯವಾಗಿದೆ. ಸಾವಿರಾರು ಮಕ್ಕಳಿಗೆ ಶಿಕ್ಷಣ ದಾಸೋಹ ನೀಡಲಾಗಿದೆ. ಇದರಿಂದ ಪ್ರೇರಣೆಯಾಗಿರುವ ನಾನು ಸಹ ನಾನು ಓದಿದ ಶಾಲೆಗೆ ₹5 ಲಕ್ಷ ನೀಡಲಿದ್ದೇನೆ ಎಂದರು.

ರಟ್ಟೀಹಳ್ಳಿ ಕಬ್ಬಿಣಕಂತಿಮಠ ಮಠದ ಶಿವಾಚಾರ್ಯಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಭೂ ದಾನಿಗಳಾದ ರುದ್ರಪ್ಪ ಮಲ್ಲಾಡದ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಗ್ರಾಪಂ ಅಧ್ಯಕ್ಷೆ ವಿನೋದಮ್ಮ ಓಲೇಕಾರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತಿ, ಹಾವೇಮುಲ್ ಸದಸ್ಯ ಪ್ರಕಾಶ ಬನ್ನಿಹಟ್ಟಿ, ಕಾಂಗ್ರೆಸ್ ತಾಲೂಕಾಧಕ್ಷ ದಾನಪ್ಪ ಚೂರಿ, ಮುಖಂಡರಾದ ಶಂಭನಗೌಡ ಪಾಟೀಲ, ಶಿವನಾಗಪ್ಪ ದೊಡ್ಮನಿ, ಖಾದರಸಾಬ್ ದೊಡ್ಡಮನಿ, ನಾಗರಾಜ ಆನವೇರಿ, ರಮೇಶ ಸುತ್ತಕೋಟಿ, ಲಕ್ಷ್ಮೀ ಜಿಂಗಾಡೆ, ಮಾರುತಿ ಕೆಂಪಗೊಂಡರ, ಜಗದೀಶ ಪೂಜಾರ, ವೀರನಗೌಡ ಪೊಲೀಸಗೌಡ್ರು, ವೀರನಗೌಡ್ರ ಪಾಟೀಲ, ಡಾ. ಸೌದಾಗರ, ಲಿಂಗಯ್ಯ ಹಿರೇಮಠ, ಡಿಡಿಪಿಐ ಸುರೇಶ ಹುಗ್ಗಿ, ತಹಸೀಲ್ದಾರ್‌ ಫಿರೋಜ್ ಸೋಮನಕಟ್ಟಿ ಇನ್ನಿತರರಿದ್ದರು. ಬಿಇಒ ಎಸ್.ಜಿ. ಕೋಟಿ ಸ್ವಾಗತಿಸಿದರು.