ಅಭ್ಯರ್ಥಿ ಆಯ್ಕೆ ವೇಳೆ ಬಿಜೆಪಿಗರಿಗೆ ನರೇಂದ್ರ ಮೋದಿ ಕ್ಲಾಸ್‌

| Published : Mar 26 2024, 01:46 AM IST / Updated: Mar 26 2024, 08:17 AM IST

Narendra Modi
ಅಭ್ಯರ್ಥಿ ಆಯ್ಕೆ ವೇಳೆ ಬಿಜೆಪಿಗರಿಗೆ ನರೇಂದ್ರ ಮೋದಿ ಕ್ಲಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಹಟ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಅಭ್ಯರ್ಥಿಗಳ ಆಯ್ಕೆಗೆ ನಡೆದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಹಟ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಅಭ್ಯರ್ಥಿಗಳ ಆಯ್ಕೆಗೆ ನಡೆದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. 

ಪ್ರತಿ ಅಭ್ಯರ್ಥಿಯ ಆಯ್ಕೆಯಲ್ಲೂ ಸಕ್ರಿಯ ಪಾತ್ರ ವಹಿಸಿ, ಅವರ ಶಕ್ತಿ ಹಾಗೂ ದೌರ್ಬಲ್ಯಗಳ ಬಗ್ಗೆ ಮೋದಿ ಚರ್ಚಿಸಿದರು ಎನ್ನಲಾಗಿದೆ. ಇದೇ ವೇಳೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹಾಗೂ ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತನವಾಡೆ ಅವರನ್ನು ತರಾಟೆ ತೆಗೆದುಕೊಂಡರು ಎಂದೂ ತಿಳಿದುಬಂದಿದೆ.

ಇಂದೋರ್‌ ಕ್ಷೇತ್ರದ ಬಗ್ಗೆ ಚರ್ಚೆ ನಡೆದಾಗ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅಭ್ಯರ್ಥಿಯೊಬ್ಬರ ಹೆಸರು ಸೂಚಿಸಿದರು. ಆ ಅಭ್ಯರ್ಥಿಯೇ ಏಕೆ ಎಂದು ಮೋದಿ ಕೇಳಿದರು. 

ಆಗ ಮೋಹನ್‌ ಯಾದವ್‌, ‘ನಾನು ಭೋಪಾಲದಲ್ಲಿರುತ್ತೇನೆ. ಈ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ ಇಂದೋರ್‌ ಹಾಗೂ ಉಜ್ಜಯಿನಿ ಎರಡನ್ನೂ ನೋಡಿಕೊಳ್ಳುತ್ತಾರೆ’ ಎಂದರು. 

ಅದಕ್ಕೆ ಮೋದಿ, ‘ನೀವು ಭೋಪಾಲದಲ್ಲಿ (ರಾಜಧಾನಿ) ಹೆಚ್ಚು ಸಮಯ ಇರುವುದೇ ಇಲ್ಲವಂತೆ? ಪದೇಪದೇ ಉಜ್ಜಯಿನಿಗೆ (ಸ್ವಕ್ಷೇತ್ರ) ಹೋಗುತ್ತೀರಂತೆ? ನಿಮಗೆ ಕೊಟ್ಟಿರುವ ಜವಾಬ್ದಾರಿ ಸರಿಯಾಗಿ ನಿಭಾಯಿಸಿ’ ಎಂದು ಹೇಳಿದರು ಎನ್ನಲಾಗಿದೆ.

ಅದೇ ರೀತಿ, ದಕ್ಷಿಣ ಗೋವಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯೊಬ್ಬರನ್ನು ಹುಡುಕಿ ಎಂದು ಮೋದಿ ಹೇಳಿದ್ದರು. ಅದಕ್ಕೆ ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತನವಾಡೆ ಆ ಕ್ಷೇತ್ರದಲ್ಲಿ ‘ಗಟ್ಟಿ ಮಹಿಳಾ ಅಭ್ಯರ್ಥಿ’ ಇಲ್ಲ ಎಂದರು. 

ಆಗ ಮೋದಿ, ‘ಹಾಗಿದ್ದರೆ ನೀವು ರಾಜ್ಯಸಭೆಗೆ ರಾಜೀನಾಮೆ ನೀಡಿ ದಕ್ಷಿಣ ಗೋವಾದಿಂದ ಸ್ಪರ್ಧಿಸಿ. ನಿಮ್ಮ ರಾಜ್ಯಸಭೆ ಸೀಟಿಗೆ ನಾನು ಮಹಿಳೆಯೊಬ್ಬರನ್ನು ತರುತ್ತೇನೆ’ ಎಂದು ಕ್ಲಾಸ್‌ ತೆಗೆದುಕೊಂಡರು. ಕೊನೆಗೆ ದಕ್ಷಿಣ ಗೋವಾದಲ್ಲಿ ಉದ್ಯಮಿ ಪಲ್ಲವಿ ಡೆಂಪೋ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿದೆ.