ಕರ್ನಾಟಕದಲ್ಲಿ ಚುನಾವಣಾ ಅಕ್ರಮ : ರಾಹುಲ್‌ ಆರೋಪ

| N/A | Published : Jul 24 2025, 01:45 AM IST / Updated: Jul 24 2025, 05:02 AM IST

ಸಾರಾಂಶ

ಭಾರತದಲ್ಲಿ ಚುನಾವಣೆಯನ್ನೇ ಕದಿಯಲಾಗುತ್ತಿದೆ. ಭಾರೀ ಮತಗಳ್ಳತನ ನಡೆಯುತ್ತಿದೆ. ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರ ಅಧ್ಯಯನ ನಡೆಸಿ ನಾವು ‘ಭಯಂಕರ ಮತಗಳ್ಳತನ’ವನ್ನು ಪತ್ತೆ ಹಚ್ಚಿದ್ದೇವೆ ಎಂದು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್‌ ನೇತಾರ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

 ನವದೆಹಲಿ :  ಭಾರತದಲ್ಲಿ ಚುನಾವಣೆಯನ್ನೇ ಕದಿಯಲಾಗುತ್ತಿದೆ. ಭಾರೀ ಮತಗಳ್ಳತನ ನಡೆಯುತ್ತಿದೆ. ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರ ಅಧ್ಯಯನ ನಡೆಸಿ ನಾವು ‘ಭಯಂಕರ ಮತಗಳ್ಳತನ’ವನ್ನು ಪತ್ತೆ ಹಚ್ಚಿದ್ದೇವೆ ಎಂದು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್‌ ನೇತಾರ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, ‘ಯಾವ ರೀತಿ ಮತಗಳನ್ನು ಕಳ್ಳತನ ಮಾಡಲಾಗುತ್ತಿದೆ ಎಂಬುದನ್ನು ನಾವು ಶೀಘ್ರವೇ ದೇಶದ ಜನತೆ ಹಾಗೂ ಚುನಾವಣಾ ಆಯೋಗಕ್ಕೂ ತೋರಿಸಿಕೊಡಲಿದ್ದೇವೆ. ಈ ವಿಚಾರದಲ್ಲಿ ನಾವು ಸುಮ್ಮನೆ ಕೂರಲ್ಲ, ಬೀದಿಯಿಂದ ಸಂಸತ್ತಿನವರೆಗೂ ಜನರ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ’ ಎಂದು ಘೋಷಿಸಿದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿ ಸಂಸತ್ತಿನಲ್ಲಿ ಬಿರುಸಿನ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ರಾಹುಲ್‌ ಈ ಆರೋಪ ಮಾಡಿದ್ದಾರೆ. ಬಿಹಾರ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 52 ಲಕ್ಷ ಮತದಾರರು ತಾವು ನೀಡಿರುವ ವಿಳಾಸದಲ್ಲಿಲ್ಲದಿರುವುದು ಮತ್ತು 18 ಲಕ್ಷ ಮಂದಿ ಮೃತಪಟ್ಟಿರುವುದು ಪತ್ತೆಯಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ರಾಹುಲ್‌, ಇದು 52 ಲಕ್ಷ ಮತದಾರರಿಗೆ, ಬಿಹಾರಕ್ಕೆ ಸಂಬಂಧಿಸಿದ ವಿಚಾರವಷ್ಟೇ ಅಲ್ಲ. ಮಹಾರಾಷ್ಟ್ರದಲ್ಲೂ ಅವರು ಇದೇ ರೀತಿ ವಂಚನೆ ಮಾಡಿದ್ದಾರೆ. ನಾವು ಈ ಕುರಿತು ಚುನಾವಣಾ ಆಯೋಗವನ್ನು ಪ್ರಶ್ನಿಸಿದೆವು. ಮತದಾರರ ಪಟ್ಟಿ ತೋರಿಸುವಂತೆಯೂ ಕೇಳಿದೆವು. ಆದರೆ ಅವರು ಪಟ್ಟಿ ನೀಡಲು ನಿರಾಕರಿಸಿದರು. ನಾವು ವಿಡಿಯೋ ದಾಖಲೆ ಕೇಳಿದೆವೆಂದು ಕಾನೂನನ್ನೇ ಬದಲಾಯಿಸಿದರು. ಮಹಾರಾಷ್ಟ್ರದಲ್ಲಿ ಒಂದು ಕೋಟಿ ಹೊಸ ಮತದಾರರನ್ನು ವೋಟರ್‌ ಲಿಸ್ಟ್‌ಗೆ ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಅಲ್ಲಿ ಚುನಾವಣೆಯನ್ನೇ ಕದಿಯಲಾಗಿದೆ ಎಂದು ಕಿಡಿಕಾರಿದರು.

ಕರ್ನಾಟಕದಲ್ಲಿ ಭಯಂಕರ:

ನಾವು ಕರ್ನಾಟಕದಲ್ಲಿ ಭಯಂಕರ ಕಳ್ಳತನ ಪತ್ತೆಹಚ್ಚಿದ್ದೇವೆ. ನಾವು ಬ್ಲ್ಯಾಕ್‌ ಆ್ಯಂಡ್‌ ವೈಟ್‌ ರೂಪದಲ್ಲಿ ಇದರ ಸಾಕ್ಷ್ಯ ಸಂಗ್ರಹಿಸಿದ್ದೇವೆ. ಸಾರ್ವಜನಿಕರು ಗೂ ಚುನಾವಣಾ ಆಯೋಗಕ್ಕೆ ನಾವು ಎಲ್ಲವನ್ನೂ ಬ್ಲ್ಯಾಕ್‌ ಆ್ಯಂಡ್‌ ವೈಟ್‌ (ಸ್ಪಷ್ಟವಾಗಿ) ನಲ್ಲೇ ತೋರಿಸುತ್ತೇವೆ. ಎಲ್ಲಿಂದ?, ಹೇಗೆ ಮತ ಕಳ್ಳತನ ಮಾಡಲಾಗಿದೆ ಎಂದು ಪ್ರರದರ್ಶಿಸುತ್ತೇವೆ ಎಂದರು.

ವೋಟರ್‌ ಲಿಸ್ಟ್‌ ಅನ್ನು ಕಾಗದದಲ್ಲಿ ನೀಡಲಾಗುತ್ತದೆ. ಆ ಪೇಪರ್‌ ಲಿಸ್ಟ್‌ನ ವಿಶ್ಲೇಷಣೆ ಕಷ್ಟ. ಹೀಗಾಗಿ ನಾವು ಕರ್ನಾಟಕದಲ್ಲಿ ನಾವು ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ತೀವ್ರ ಅಧ್ಯಯನ ನಡೆಸಿದೆವು. ಆ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಡಿಜಿಟಲ್‌ ಫಾರ್ಮ್ಯಾಟ್‌ಗೆ ಅಳವಡಿಸಿದೆವು. ಇದಕ್ಕಾಗಿ ನಮಗೆ ಆರು ತಿಂಗಳು ಬೇಕಾಯಿತು. ಆದರೆ ವಿಶ್ಲೇಷಣೆ ಬಳಿಕ ಅವರ ಇಡೀ ವ್ಯವಸ್ಥೆಯೇ ಬಯಲಾಗಿದೆ. ಅವರು ಹೇಗೆ ಈ ಮತ ಕಳ್ಳತನ ಮಾಡುತ್ತಾರೆ, ಯಾರು ಮತಹಾಕುತ್ತಾರೆ, ಎಲ್ಲಿಂದ ಹೊಸ ಮತದಾರರನ್ನು ಕರೆತರುತ್ತಾರೆ ಎಲ್ಲವೂ ಸ್ಪಷ್ಟವಾಗಿದೆ ಎಂದು ಗಾಂಧಿ ಹೇಳಿದರು. 

ನಾವು ಅವರ ಆಟವನ್ನು ಅರ್ಥಮಾಡಿಕೊಂಡಿದ್ದೇವೆ. ಈ ವಿಚಾರ ಅವರ ಅರಿವಿಗೂ ಬಂದಿದೆ. ಇದೇ ಕಾರಣಕ್ಕೆ ಚುನಾವಣಾ ಆಯೋಗವು ಬಿಹಾರದಲ್ಲಿ ಅವರು ಮತದಾರರನ್ನು ಅಳಿಸಿಹಾಕಲು ಹೊಸ ವ್ಯವಸ್ಥೆ ಜಾರಿಗೆ ತಂದಿದೆ ಎಂದು ಆರೋಪಿಸಿದ ಅವರು, ಭಾರತದಲ್ಲಿ ಚುನಾವಣೆಯನ್ನೇ ಕದಿಯಲಾಗುತ್ತಿದೆ, ಇದು ಸತ್ಯ ಎಂದರು.

ರಾಹುಲ್‌ ಆರೋಪವೇನು?

- ಮಹಾರಾಷ್ಟ್ರ ಚುನಾವಣೆ ರೀತಿ ಕರ್ನಾಟಕದಲ್ಲೂ ಅಕ್ರಮ ಆಗಿದೆ

- ರಾಜ್ಯದಲ್ಲಿ ‘ಭಯಂಕರ ಮತಗಳ್ಳತನ’ವನ್ನು ಪತ್ತೆ ಹಚ್ಚಿದ್ದೇವೆ

- ಭಾರತದ ದೇಶದಲ್ಲಿ ಚುನಾವಣೆಯನ್ನೇ ಕದಿಯುವ ಚಾಳಿ ಇದೆ

- ಎಲ್ಲವೂ ಬ್ಲ್ಯಾಕ್‌ ಆ್ಯಂಡ್‌ ವೈಟ್‌ನಲ್ಲಿ ಇದನ್ನು ಬಹಿರಂಗಪಡಿಸುವೆ

- ಚು.ಆಯೋಗ, ಬಿಜೆಪಿ ವಿರುದ್ಧ ಕೈ ನಾಯಕ ಕೆಂಡಾಮಂಡಲ

Read more Articles on