ಮೋದಿ ಆಡಳಿತದಲ್ಲಿ ಬಡತನ, ನಿರುದ್ಯೋಗ ಹೆಚ್ಚಳ: ಎಸ್.ಎನ್. ನಾರಾಯಣಸ್ವಾಮಿ

| Published : Feb 12 2024, 01:31 AM IST / Updated: Feb 12 2024, 04:21 PM IST

ಸಾರಾಂಶ

ನರೇಂದ್ರ ಮೋದಿ ಪ್ರಧಾನಿಯಾಗಿ ಹತ್ತು ವರ್ಷಗಳಾದರೂ ದೇಶದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇನ್ನೂ ಬಡತನ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೇಂದ್ರ ಸರ್ಕಾರದ ಕಾರ‍್ಯವೈಖರಿಯನ್ನು ಟೀಕಿಸಿದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ನರೇಂದ್ರ ಮೋದಿ ಪ್ರಧಾನಿಯಾಗಿ ಹತ್ತು ವರ್ಷಗಳಾದರೂ ದೇಶದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇನ್ನೂ ಬಡತನ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೇಂದ್ರ ಸರ್ಕಾರದ ಕಾರ‍್ಯವೈಖರಿಯನ್ನು ಟೀಕಿಸಿದರು.

ತಾಲೂಕಿನ ಎಳೇಸಂದ್ರದಲ್ಲಿರುವ ಎಸ್.ಎನ್. ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಹಲ ತಲೆಮಾರುಗಳ ಕನಸು ಕಳೆದ ೧೦ ವರ್ಷಗಳಲ್ಲಿ ನನಸಾಗಿದೆ ನಮ್ಮದು ಪರಿವರ್ತನೆಯ ಪರ್ವವಾಗಿದ್ದು ದೇಶವು ಬದಲಾವಣೆಯತ್ತ ದಾಪುಗಾಲು ಹಾಕುವ ಕಾಲವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.

ದೇಶದಲ್ಲಿ ಬಡತನ, ನಿರುದ್ಯೋಗ: ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಪ್ರಧಾನಿ ಮೋದಿ ಹೇಳಿದಂತೆ ಬದಲಾವಣೆಯಾಗಿಲ್ಲ.

ಬದಲಾಗಿ ಸಮಸ್ಯೆಗಳ ಸುಳಿಯಲ್ಲಿ ದೇಶವು ಸಿಲುಕಿಕೊಂಡಿದೆ, ಎಲ್ಲಿ ನೋಡಿದರೂ ನಿರುದ್ಯೋಗ, ಬಡತನ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗುವಂತಾಗಿದೆ. ಇದೇನಾ ಬದಲಾವಣೆ ಪರ್ವವೆಂದರೆ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಯವರು ಶ್ರೀರಾಮನ ಜಪ ಮಾಡುತ್ತಿದ್ದಾರೆ, ರಾಮನ ಹೆಸರಲ್ಲಿ ರಾಜಕೀಯ ಮಾಡಲಾಗುತ್ತಿದೆ, ಜನರು ಜೈಶ್ರೀರಾಮ್ ಎಂದು ಹೇಳಿ ಮತ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗೆ ಹಾಕಿ ಎಂದು ಕಾರ್ಯಕರ್ತರಿಗೆ ಹೇಳಿದರು. ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ, ಆದರೆ ಬಿಜೆಪಿ ವಿರುದ್ದವಾಗಿ ನಡೆಯುತ್ತಿದೆ ಎಂದು ಟೀಕಿಸಿದರು.

ಕ್ಷೇತ್ರಕ್ಕೆ ಸಂಸದರ ಕೊಡುಗೆ ಶೂನ್ಯ: ನನಗೆ ಜನಸೇವೆ ಬಿಟ್ಟರೆ ಬೇರೇನೂ ಗೊತ್ತಿಲ್ಲ, ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಬಿಜೆಪಿ, ಜೆಡಿಎಸ್ ಒಂದಾದರೂ ಮತದಾರರು ನನ್ನ ಕೈಬಿಡಲಿಲ್ಲ, ಬರುವ ಲೋಕಸಭೆ ಚುನಾವಣೆಯಲ್ಲಿಯೂ ಕೋಲಾರ ಕ್ಷೇತ್ರಕ್ಕೆ ಏನೇನೂ ಕೊಡುಗೆ ನೀಡದೆ ಸಂಸದ ಎಸ್. ಮುನಿಸ್ವಾಮಿಯವರನ್ನು ಮನೆಗೆ ಕಳುಹಿಸಿ ಜನಪರ ಚಿಂತನೆ ಮಾಡುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ವಿಧಾನಸಭೆಯಲ್ಲಿ ನಿಮ್ಮ ಪರ ಮಾತನಾಡಲು ನನಗೆ ಹೆಚ್ಚಿನ ರಾಜಕೀಯ ಶಕ್ತಿ ನೀಡಬೇಕೆಂದು ಹೇಳಿದರು.

ಪಕ್ಷ ಮುಖ್ಯ, ವ್ಯಕ್ತಿಯಲ್ಲಕ್ಷೇತ್ರದಲ್ಲಿ ಹಲ ಕಾಂಗ್ರೆಸ್ ಮುಖಂಡರು ಎಲ್ಲಾ ಸ್ಥಾನಮಾನಗಳನ್ನು ಪಡೆದು ಅಧಿಕಾರದ ಆಸೆಗಾಗಿ ಬಿಜೆಪಿ, ಜೆಡಿಎಸ್ ಸೇರಿದ ಕೆ. ಚಂದ್ರಾರೆಡ್ಡಿ, ಎಂ. ರಾಮಚಂದ್ರಪ್ಪರನ್ನು ಟೀಕಿಸಿದರು. 

ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯವೆಂಬ ಸಂದೇಶವನ್ನು ಕಾರ್ಯಕರ್ತರು ಈಗಾಗಲೇ ನೀಡಿದ್ದಾರೆ, ಪಕ್ಷ ಸಂಘಟನೆಗೆ ಕಾರ್ಯಕರ್ತರು ಮುಂದಾಗಿ ಪಕ್ಷ ಬಿಟ್ಟಿ ಹೋಗಿರುವವರನ್ನು ಮರಳಿ ಕರೆ ತರುವ ಕೆಲಸ ಮಾಡಿ ಎಂದರು ಹೇಳಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ. ನಾಗರಾಜ್,ಪಿಚ್ಚಹಳ್ಳಿ ಗೋವಿಂದರಾಜು,ಎ. ಬಾಬು, ಭೂ ಬ್ಯಾಂಕಿನ ಅಧ್ಯಕ್ಷ ನಾರಾಯಣಸ್ವಾಮಿ, ಮಂಜುನಾಥಗೌಡ, ಭೀಮಣ್ಣ, ಮುನಿಸ್ವಾಮಿ, ಗ್ರಾಪಂ ಅಧ್ಯಕ್ಷ ಮಂಜುನಾಥ್, ವಿಜಯಕುಮಾರ್ ಮತ್ತಿತರರು ಇದ್ದರು.