ಸಾರಾಂಶ
ಹುಬ್ಬಳ್ಳಿ : ಗಣಪತಿ ಮೆರವಣಿಗೆ ಹೋಗುವ ರಸ್ತೆ ಬದಿಯಲ್ಲಿ ಮಸೀದಿ ಇದ್ದರೆ ವಾದ್ಯ ಬಾರಿಸಬಾರದು ಎಂದರೆ ಏನರ್ಥ? ಮಂಡ್ಯ ಜಿಲ್ಲೆ ಪಾಕಿಸ್ತಾನದಲ್ಲಿದೆಯೇ ಅಥವಾ ರಾಜ್ಯ ಸರ್ಕಾರವೇ ಪಾಕಿಸ್ತಾನ ಮಾಡಲು ಹೊರಟಿದೆಯೇ? ಕಾಂಗ್ರೆಸ್ ಎಂದಿಗೂ ಹಿಂದೂ ವಿರೋಧಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗಮಂಗಲದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಹಾಗೂ ವಿಸರ್ಜನಾ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಆದರೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಹಿಂದೂ ಯುವಕನನ್ನು ಮೊದಲ ಆರೋಪಿಯಾಗಿ ಬಂಧಿಸಿರುವುದು ಖಂಡನೀಯ. ಪಕ್ಷದ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಬಂದಿದ್ದಾರೆ. ರಾಜಕೀಯ ಒತ್ತಡಕ್ಕೆ ಒಳಗಾಗಿ ಅಲ್ಲಿಯ ಪೊಲೀಸ್ ವರಿಷ್ಠಾಧಿಕಾರಿ ಹುಚ್ಚರಂತೆ ವರ್ತಿಸಬಾರದು. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಖರ್ಗೆ ಹೆಸರಿಗೆ ಮಾತ್ರ ಅಧ್ಯಕ್ಷ:
ಮಲ್ಲಿಕಾರ್ಜುನ ಖರ್ಗೆ ಅವರು ಹೆಸರಿಗೆ ಮಾತ್ರ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ರಾಹುಲ್ ಗಾಂಧಿ ಅವರ ಅಣತಿಯಂತೆ ನಡೆದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿ ಬದಲಿಗೆ ಖರ್ಗೆ ಅವರನ್ನೇ ಪ್ರಧಾನಿಯನ್ನಾಗಿ ಮಾಡುತ್ತೇವೆಂದು ಕೈ ವರಿಷ್ಠರು ಘೋಷಿಸಲಿ ಎಂದು ಜೋಶಿ ಸವಾಲು ಹಾಕಿದರು.