ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ. ತಾವು ಮುಸ್ಲಿಮರ ಪರ ಎಂದು ಹೇಳಿಕೊಳ್ಳುವ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ವಕ್ಫ್‌ ಬಿಲ್ ಮಂಡನೆ ವೇಳೆ ಸಂಸತ್‌ನಿಂದ ಹೊರಗೆ ಹೋದರು.

ಹುಬ್ಬಳ್ಳಿ : ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ. ತಾವು ಮುಸ್ಲಿಮರ ಪರ ಎಂದು ಹೇಳಿಕೊಳ್ಳುವ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ವಕ್ಫ್‌ ಬಿಲ್ ಮಂಡನೆ ವೇಳೆ ಸಂಸತ್‌ನಿಂದ ಹೊರಗೆ ಹೋದರು. ಅವರಿಗೆ ದೇಶದ ಜನರ ಬಗ್ಗೆ ನಿಜವಾದ ಕಾಳಜಿಯಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವ್ಯಂಗವಾಡಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಎಸ್‌ಎಸ್‌ ಕ್ರಿಶ್ಚಿಯನ್‌ರ ಆಸ್ತಿ ನುಂಗಲು ಯತ್ನಿಸುತ್ತಿದೆ ಎಂಬ ರಾಹುಲ್‌ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದರು. ಕೆಲವರು ಕ್ರಿಶ್ಚಿಯನ್ನರ ಆಸ್ತಿಯನ್ನು ವಕ್ಫ್‌ ಆಸ್ತಿಯನ್ನಾಗಿಸಲು ಹೊರಟಿದ್ದರು. ನಾವು ಈಗ ಬದಲಾವಣೆ ತಂದಿದ್ದೇವೆ. ಹೀಗಾಗಿ ಕೇರಳದಲ್ಲಿ ಕ್ರಿಶ್ಚಿಯನ್ನರು ಸಹ ಈ ತಿದ್ದುಪಡಿಯನ್ನು ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದರು.

ಲೋಕಸಭೆಯಲ್ಲಿ ವಕ್ಫ್‌ ಚರ್ಚೆ ಮಧ್ಯಾಹ್ನ12 ರಿಂದ ರಾತ್ರಿ 2ರವರೆಗೆ ನಡೆದರೂ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕ್‌ ಲೋಕಸಭೆಗೆ ಬರಲೇ‌ ಇಲ್ಲ. ಆದರೆ, ಹೊರಗಡೆ ಮಾತ್ರ ವಿನಾಕಾರಣ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಇದು ಜನರಿಗೆ ತಿಳಿಯುತ್ತಿಲ್ಲ. ಇನ್ನು ಹಲವು ವರ್ಷಗಳ ಕಾಲ ಬಿಜೆಪಿ ದೇಶದಲ್ಲಿ ಆಡಳಿತ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.