ಸಾರಾಂಶ
ಮುಸ್ಲಿಮರ ಕೈಯಲ್ಲಿರುವ ಪೆಟ್ರೋಲ್ ಬಾಂಬ್, ತಲ್ವಾರ್‌ಗಳನ್ನು ಸರ್ಕಾರ ಕಿತ್ತುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ಗಣೇಶ ಮೆರವಣಿಗೆಗಳಲ್ಲಿ ನಾವು ಅವುಗಳನ್ನು ಹಿಡಿದುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ
ಮೈಸೂರು: ಮುಸ್ಲಿಮರ ಕೈಯಲ್ಲಿರುವ ಪೆಟ್ರೋಲ್ ಬಾಂಬ್, ತಲ್ವಾರ್‌ಗಳನ್ನು ಸರ್ಕಾರ ಕಿತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಗಣೇಶ ಮೆರವಣಿಗೆಗಳಲ್ಲಿ ನಾವು ಕೈಯಲ್ಲಿ ಪೆಟ್ರೋಲ್ ಬಾಂಬ್ ಹಾಗೂ ತಲ್ವಾರ್‌ಗಳನ್ನು ಹಿಡಿದುಕೊಳ್ಳಬೇಕಾಗುತ್ತದೆ. ಆಗ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಇನ್ನೂ ಅದ್ದೂರಿಯಾಗಿ ಗಣೇಶ ಮೆರವಣಿಗೆ ನಡೆಯುತ್ತದೆ. ಅಷ್ಟರಲ್ಲಿ ಸರ್ಕಾರ ಮುಸ್ಲಿಂ ಪುಂಡರ ಮೇಲೆ ನಿಯಂತ್ರಣ ಹೇರಬೇಕು. ಇಲ್ಲದಿದ್ದರೆ ನಮ್ಮ ರಕ್ಷಣೆಯ ಜವಾಬ್ದಾರಿ ನಮಗೆ ಗೊತ್ತಿದೆ. ನಾಗಮಂಗಲ ಗಲಭೆ ಪ್ರಕರಣದಲ್ಲಿ ಅಮಾಯಕ ಹಿಂದೂಗಳ ಬಂಧನವಾದರೆ ನಾವು ಮತ್ತೆ ನಾಗಮಂಗಲ ಪೊಲೀಸ್ ಠಾಣೆಗೂ ಬರುತ್ತೇವೆ ಎಂದರು.
ಗಲಾಟೆ ಶುರು ಮಾಡಿದವರ ಮೇಲೆ ಕಠಿಣ ಕ್ರಮ ಆಗಬೇಕು. ಪೊಲೀಸರಿಗೆ ಸರ್ಕಾರ ಸ್ವತಂತ್ರವೇ ನೀಡಿಲ್ಲ. ಆಳುವವನು ಮೊದಲು ನೆಟ್ಟಗಿರಬೇಕು. ಅವರೇ ಮುಸ್ಲೀಂ ಓಲೈಕೆಗಿಳಿದರೆ ಇಂತಹ ಸ್ಥಿತಿ ಬರುತ್ತದೆ ಎಂದು ಅವರು ಕಿಡಿಕಾರಿದರು.
ಮಹಿಷಾ ದಸರಾ ಆಚರಣೆಗೆ ಬಿಡಲ್ಲ:ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ನಡೆಸಲು ಬಿಡುವುದಿಲ್ಲ. ನಾನು ಸಂಸದನಾಗಿದ್ದರು ಆಗದಿದ್ದರೂ ತಾಯಿ ಚಾಮುಂಡೇಶ್ವರಿಗೆ ಅವಮಾನವಾಗುವುದಕ್ಕೆ ಬಿಡುವುದಿಲ್ಲ. ಯಾರ ನಿಲುವುಗಳು ಏನೇ ಇರಲಿ. ನನ್ನ ನಿಲುವು ಮಾತ್ರ ಯಾವತ್ತಿಗೂ ಒಂದೇ. ಮಹಿಷಾ ದಸರಾ ನಡೆಸುವವರು ಅವರ ಮನೆಗಳಲ್ಲಿ ನಡೆಸಲಿ. ನಮಗೆ ಮಹಿಷನಂಥ ಮಕ್ಕಳೇ ಹುಟ್ಟಲ್ಲಿ ಎಂದು ದಿನವೂ ಪೂಜೆ ಮಾಡಲಿ. ಅದಕ್ಕೆ ನಮ್ಮದೇನು ವಿರೋಧ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.