ಬೆಂಗಳೂರು/ದೆಹಲಿ : ಪಂಚರಾಜ್ಯಗಳ ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಕೂಗು ಜೋರಾಗಿದ್ದು, ಮೇ ಮಾಸಾಂತ್ಯಕ್ಕೆ ಸಂಪುಟ ಪುನಾರಚನೆ ಆಗಲಿದೆ ಎಂದು ಬಹಿರಂಗವಾಗಿ ಆಕಾಂಕ್ಷಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ, ಕೇರಳ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಲಿದ್ದಾರೆ. ಬಳಿಕ ನಾವೆಲ್ಲಾ ಹೋಗಿ ಸಂಪುಟ ಪುನಾರಚನೆಗೆ ಒತ್ತಾಯಿಸಲಿದ್ದೇವೆ ಎಂದು ಸಚಿವ ಸ್ಥಾನದ ಆಕಾಂಕ್ಷಿಗಳು ಅಭಿಪ್ರಾಯ ತಿಳಿಸಿದ್ದಾರೆ.

ಮತ್ತೊಂದೆಡೆ, ಈಗಾಗಲೇ ರಾಜ್ಯದ ಕಾಂಗ್ರೆಸ್ ಪರಿಷತ್‌ನ ಸದಸ್ಯರ ನಿಯೋಗವೊಂದು ದೆಹಲಿಗೆ ತೆರಳಿದ್ದು, ಮಂಗಳವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಪರಿಷತ್‌ ಸದಸ್ಯರಿಗೂ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.


ಜತೆಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಗೊಂದಲ ಮುಂದುವರಿದಿದೆ. ಈ ಗೊಂದಲ ಆದಷ್ಟು ಶೀಘ್ರ ಇತ್ಯರ್ಥಪಡಿಸಬೇಕು. ನಿಗಮ ಮಂಡಳಿ ಸದಸ್ಯರು, ನಿರ್ದೇಶಕರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ ಎಂದು ಪರಿಷತ್‌ ಸದಸ್ಯರ ನಿಯೋಗ ಒತ್ತಾಯಿಸಿದೆ.

ಸಿದ್ದು ಸ್ಥಾನಕ್ಕೆ ಕುತ್ತಿಲ್ಲ-ರಾಜಣ್ಣ:

ರಾಜ್ಯದಲ್ಲಿರುವ ಗೊಂದಲ ಬಗೆಹರಿಯಬೇಕಾದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಮುಂದುವರೆಯಬೇಕು. ಸಂಪುಟ ಪುನಾರಚನೆಯಾದರೆ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಆತಂಕ ಇಲ್ಲ. ಹೀಗಾಗಿ ಆಕಾಂಕ್ಷಿಗಳಿಂದ ಸಂಪುಟ ಪುನಾರಚನೆಗೆ ಹೈಕಮಾಂಡ್‌ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮೇ ತಿಂಗಳಲ್ಲಿ ಬೆಳವಣಿಗೆಗಳು ನಡೆಯಲಿವೆ ಎಂದಿದ್ದೇನೆ. ಆದರೆ ಮೇ 20ಕ್ಕೆ ಡೆಡ್‌ಲೈನ್‌ ನೀಡಿಲ್ಲ. ಪಂಚ ರಾಜ್ಯಗಳ ಫಲಿತಾಂಶ ಬಂದರೂ ಸರ್ಕಾರ ರಚನೆ ಪ್ರಕ್ರಿಯೆಗಳು ಇನ್ನೂ ಪೂರ್ಣವಾಗಿಲ್ಲ. ಹೀಗಾಗಿ ಎಲ್ಲಾ ಬೆಳವಣಿಗೆಗಳು ಮುಗಿದ ಬೆನ್ನಲ್ಲೇ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಗಮನ ಹರಿಸಲಿದೆ ಎಂದರು.

ಈಗ ರಾಜ್ಯದಲ್ಲಿ ಒಂದು ಗೊಂದಲದ ಪರಿಸ್ಥಿತಿ ಇದೆ. ಅದನ್ನು ಮಾಧ್ಯಮಗಳು ನೋಡುತ್ತಿವೆ ಹಾಗೂ ಜನರೂ ಗಮನಿಸುತ್ತಿದ್ದಾರೆ. ಆ ಗೊಂದಲದ ಪರಿಸ್ಥಿತಿ ನಿವಾರಣೆ ಮಾಡಬೇಕು ಎಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಬೇಕು. ಜೊತೆಗೆ ಅವರಿಗೆ ಸಂಪುಟ ಪುನಾರಚನೆ ಮಾಡಲು ಅವಕಾಶ ಕೊಡಬೇಕು. ಆಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂಬುದು ಸಷ್ಟವಾಗಲಿದೆ ಎಂದು ರಾಜಣ್ಣ ಸ್ಪಷ್ಟಪಡಿಸಿದರು.

ಡೋಲಾಯಮಾನ:

ಸಿದ್ದರಾಮಯ್ಯ ಅವರಿಗೆ ಎಲ್ಲಿಯವರೆಗೆ ಸಂಪುಟ ಪುನಾರಚನೆಗೆ ಅವಕಾಶ ನೀಡುವುದಿಲ್ಲ, ಅಲ್ಲಿವರೆಗೂ ಮುಖ್ಯಮಂತ್ರಿ ಸ್ಥಾನ ಮುಂದುವರಿಕೆ ಬಗ್ಗೆ ಡೋಲಾಯಮಾನ ಸ್ಥಿತಿ ಇರಲಿದೆ. ಹೀಗಾಗಿ ಸಂಪುಟ ಪುನಾರಚನೆಗೆ ಅವಕಾಶ ಕೊಡಿ ಅಂತ ಅನೇಕರು ಒತ್ತಡ ಹಾಕಿದ್ದಾರೆ. ಬಹಳಷ್ಟು ಶಾಸಕರು ದೆಹಲಿಗೆ ಹೋಗಿ ಎಲ್ಲಾ ಮುಖಂಡರನ್ನು ಭೇಟಿ ಮಾಡಿ ಅವರಿಗೂ ಒತ್ತಡ ತಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಂಪುಟ ಪುನಾರಚನೆಗೆ ಅವಕಾಶ ನೀಡುತ್ತಾರೆಂಬ ಆಶಾಭಾವನೆ ಇದೆ ಎಂದು ಹೇಳಿದರು.

ತಿಂಗಳಾಂತ್ಯಕ್ಕೆ ತೀರ್ಮಾನ ಸಾಧ್ಯತೆ-ಸತೀಶ್‌:

ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ತೀರ್ಮಾನಿಸಲು ತಿಂಗಳ ಅಂತ್ಯದವರೆಗೆ ಸಮಯ ಇದೆ. ಈ ವೇಳೆಗೆ ತೀರ್ಮಾನ ಆಗಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.

ಮೊದಲು ಕೇರಳ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಇತ್ಯರ್ಥ ಆಗಬೇಕು. ಬಳಿಕ ನಾಯಕತ್ವ ಗೊಂದಲ ಹಾಗೂ ಸಂಪುಟ ಪುನಾರಚನೆಯ ಹಳೆಯ ಬೇಡಿಕೆ ಬಗ್ಗೆ ಸ್ಪಂದಿಸಬಹುದು. ಕೇರಳದ ಬೆಳವಣಿಗೆಗಳು ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ ಎಂದರು.

ಸಿದ್ದು ಗಾಡಿ ಎನರ್ಜಿಯಿಂದ ಓಡುತ್ತಿದೆ:

ಸಿದ್ದರಾಮಯ್ಯ ಅವರು ವೀಕ್‌ ಆಗಿದ್ದಾರೆಯೇ ಎಂಬ ಪ್ರಶ್ನೆಗೆ, ಗಾಡಿ ಎನರ್ಜಿಯಿಂದ ಓಡುತ್ತಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಹೈಕಮಾಂಡ್ ಹಾಗೂ ಶಾಸಕರು. ಹೈಕಮಾಂಡ್‌ ಶೀಘ್ರ ಒಂದು ತೀರ್ಮಾನ ಮಾಡುವ ನಿರೀಕ್ಷೆಯಿದೆ ಎಂದು ಜಾರಕಿಹೊಳಿ ಹೇಳಿದರು.

ಕೇರಳ ಸರ್ಕಾರ ರಚನೆ ಬಳಿಕ ಪ್ರಕ್ರಿಯೆ-ಬಾಲಕೃಷ್ಣ:

ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, ಕೇರಳ ಸರ್ಕಾರ ರಚನೆಯಾದ ನಂತರ ನಮ್ಮಲ್ಲಿ ಸಚಿವ ಸಂಪುಟ ಪುನಾರಚನೆ ಸೇರಿ ಇನ್ನಿತರ ಪ್ರಕ್ರಿಯೆ ಆರಂಭವಾಗಲಿದೆ. ಹೈಕಮಾಂಡ್‌ಗೆ ಯಾವುದು ತುರ್ತು ಎನಿಸುತ್ತದೆಯೋ ಅದರ ಮೇಲೆ ಕ್ರಮ ಕೈಗೊಳ್ಳಲಿದೆ. ಮೇ ತಿಂಗಳ ಅಂತ್ಯದೊಳಗೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಸದ್ಯದಲ್ಲೇ ಸಿಎಂ ದೆಹಲಿಗೆ-ನಾರಾಯಣಸ್ವಾಮಿ:

ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಮಾತನಾಡಿ, ಮುಂದಿನ ಮೂರು ದಿನಗಳಲ್ಲಿ ಕೇರಳ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಯಲಿದ್ದು, ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಲಿದ್ದಾರೆ. ಈಗಿನ ಮಾಹಿತಿಯಂತೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಯಾವುದೇ ಸೂಚನೆಯಿಲ್ಲ ಎಂದರು.

ಪುನಾರಚನೆ ಆದ್ರೆ ಗೊಂದಲ ಅಂತ್ಯ

ಸಿದ್ದುಗೆ ಎಲ್ಲಿಯವರೆಗೆ ಸಂಪುಟ ಪುನಾರಚನೆಗೆ ಅವಕಾಶ ನೀಡುವುದಿಲ್ಲವೋ ಅಲ್ಲಿವರೆಗೂ ಸಿಎಂ ಸ್ಥಾನದ ಬಗ್ಗೆ ಗೊಂದಲ ಇರಲಿದೆ. ಹೀಗಾಗಿ ಪುನಾರಚನೆಗೆ ಅನೇಕರು ಒತ್ತಡ ಹಾಕಿದ್ದಾರೆ. ಕೇರಳ ಸಿಎಂ ಆಯ್ಕೆ ಬಳಿಕ ಇದರತ್ತ ವರಿಷ್ಠರು ಗಮನ ಹರಿಸುತ್ತಾರೆ.

- ಕೆ.ಎನ್‌. ರಾಜಣ್ಣ, ಮಾಜಿ ಸಚಿವ

- ಪಂಚರಾಜ್ಯ ಫಲಿತಾಂಶ ಬೆನ್ನಲ್ಲೇ ಪುನಾರಚನೆ ಕೂಗು ಜೋರು

- ಪುನಾರಚನೆಗಾಗಿ ಸಚಿವ ಆಕಾಂಕ್ಷಿಗಳಿಂದ ಹೆಚ್ಚಿದ ಒತ್ತಾಯ

- ಶೀಘ್ರ ಸಿದ್ದರಾಮಯ್ಯ ದೆಹಲಿಗೆ, ಮೇ ಅಂತ್ಯಕ್ಕೆ ಪುನಾರಚನೆ?

- ಸಂಪುಟ ಪುನಾರಚನೆ ಆದರೆ ಎಲ್ಲ ಗೊಂದಲಕ್ಕೆ ಪರಿಹಾರ

- ಸಂಪುಟ ಪುನಾರಚನೆಗೆ ಕಾಯುತ್ತಿರುವ ಶಾಸಕರ ವಿಶ್ವಾಸ