ರಾಹುಲ್‌ ಗಾಂಧಿಗೆ ಮತ್ತೊಂದು ಸಂಕಷ್ಟ

| Published : May 29 2024, 12:49 AM IST

ಸಾರಾಂಶ

2023ರಲ್ಲಿ ಲಂಡನ್‌ನ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರು ವೀರ ಸಾರ್ವಕರ್‌ ಅವರನ್ನು ಅವಮಾನಿಸುವ ರೀತಿಯಲ್ಲಿ ಸುಳ್ಳು ಹೇಳಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಪುಣೆ: 2023ರಲ್ಲಿ ಲಂಡನ್‌ನ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರು ವೀರ ಸಾರ್ವಕರ್‌ ಅವರನ್ನು ಅವಮಾನಿಸುವ ರೀತಿಯಲ್ಲಿ ಸುಳ್ಳು ಹೇಳಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ಗೆ ಕೋರ್ಟ್‌ ಸೂಚಿಸುವ ಸಾಧ್ಯತೆ ಇದೆ. ಇದು ಈಗಾಗಲೇ ಮೋದಿ ಉಪನಾಮ ಟೀಕೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್‌ಗೆ ಮತ್ತೊಂದು ಸಂಕಷ್ಟ ತಂದಿಡುವ ಸಾಧ್ಯತೆ ಇದೆ.

ರಾಹುಲ್‌ ತಮ್ಮ ಲಂಡನ್‌ ಭಾಷಣದ ವೇಳೆ, ‘ನಾನು ಮತ್ತು ನನ್ನ ಸ್ನೇಹಿತರು ಒಮ್ಮೆ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದೆವು. ಇದರಿಂದ ನನಗೆ ಬಹಳ ಸಂತಸವಾಗಿತ್ತು ಎಂದು ಸಾರ್ವಕರ್‌ ಪುಸ್ತಕವೊಂದರಲ್ಲಿ ಬರೆದಿದ್ದಾರೆ’ ಎಂದು ಆರೋಪಿಸಿದ್ದರು.

ಇದು ಸುಳ್ಳು ಆರೋಪ ಎಂದು ಸಾವರ್ಕರ್ ಮೊಮ್ಮಗ ಸತ್ಯಕಿ ಅಶೋಕ್ ಸಾವರ್ಕರ್ ಮಾನನಷ್ಟ ಮೊಕದ್ದಮೆ ಕೇಸ್‌ ದಾಖಲಿಸಿದ್ದರು. ಅಂತಹ ಘಟನೆ ನಡೆದಿಲ್ಲ. ಸಾವರ್ಕರ್ ಈ ಬಗ್ಗೆ ಎಲ್ಲಿಯೂ ಬರೆದಿಲ್ಲ. ಅವರ ಆರೋಪ ಕಾಲ್ಪನಿಕ, ಸುಳ್ಳು ಮತ್ತು ದುರುದ್ದೇಶ ಪೂರ್ವಕ ಎಂದು ಸತ್ಯಕಿ ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಆರೋಪದ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಕೋರ್ಟ್‌ ವಿಶ್ರಾಂಬಾಗ್‌ ಪೊಲೀಸರಿಗೆ ಸೂಚಿಸಿತ್ತು. ಅದರಂತೆ ತನಿಖೆ ನಡೆಸಿರುವ ಪೊಲೀಸರು, ‘ಸಾವರ್ಕರ್ ತಮ್ಮ ಪುಸ್ತಕದಲ್ಲಿ ಎಲ್ಲೂ ರಾಹುಲ್‌ ಹೇಳಿದ ರೀತಿ ಬರೆದಿಲ್ಲ. ಸತ್ಯಕಿ ದೂರಿನಲ್ಲಿ ಸತ್ಯವಿದೆ’ ಎಂದು ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ.