ವಯನಾಡ್‌, ಅಮೇಠಿಯಿಂದ ಮತ್ತೆ ರಾಹುಲ್‌ಗಾಂಧಿ ಸ್ಪರ್ಧೆ?

| Published : Mar 07 2024, 01:52 AM IST / Updated: Mar 07 2024, 08:16 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಸೇರಲು ಸಜ್ಜಾಗಿರುವಾಗಲೇ, ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ದೇಶದ ಉತ್ತರ ಮತ್ತು ದಕ್ಷಿಣದ ರಾಜ್ಯಗಳಿಂದ ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

ನವದೆಹಲಿ: ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಸಮಿತಿ ಗುರುವಾರ ಇಲ್ಲಿ ಸಭೆ ಸೇರಲು ಸಜ್ಜಾಗಿರುವಾಗಲೇ, ಪಕ್ಷದ ಅತ್ಯುನ್ನತ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ದೇಶದ ಉತ್ತರ ಮತ್ತು ದಕ್ಷಿಣದ ರಾಜ್ಯಗಳಿಂದ ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಕೇರಳದ ವಯನಾಡಿನಲ್ಲಿ ಗೆದ್ದಿದ್ದರಾದರೂ, ಉತ್ತರಪ್ರದೇಶದ ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. 

ಆದರೆ ಈ ಬಾರಿ ವಯನಾಡಿನಲ್ಲಿ ಇಂಡಿಯಾ ಮೈತ್ರಿಕೂಟದ ಸಿಪಿಎಂ ತನ್ನ ಅಭ್ಯರ್ಥಿ ಕಣಕ್ಕೆ ಇಳಿಯುವುದಾಗಿ ಘೋಷಿಸಿರುವ ಕಾರಣ ರಾಹುಲ್‌ ಕಣಕ್ಕೆ ಇಳಿಯುವ ಸಾಧ್ಯತೆ ಇಲ್ಲ ಎನ್ನಲಾಗಿತ್ತು. 

ಇನ್ನೊಂದೆಡೆ ಅಮೇಠಿಯಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆ ಇರುವ ಕಾರಣ ಅಲ್ಲಿಂದಲೂ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎನ್ನಲಾಗಿತ್ತು. ಆದರೆ ಇದೀಗ ಮರಳಿ ಈ ಎರಡು ಕ್ಷೇತ್ರಗಳಿಂದಲೇ ರಾಹುಲ್‌ ಅವರೇ ಕಣಕ್ಕೆ ಇಳಿಯಬಹುದು ಎಂದು ವರದಿಗಳು ಹೇಳಿವೆ.

ಇನ್ನೊಂದೆಡೆ ತಮ್ಮ ತಾಯಿ ಸೋನಿಯಾ ಗಾಂಧಿ ಹಲವು ದಶಕಗಳಿಂದ ಸ್ಪರ್ಧಿಸುತ್ತಿದ್ದ ಉತ್ತರಪ್ರದೇಶದ ರಾಯ್‌ಬರೇಲಿಯಿಂದ ಈ ಬಾರಿ ಪ್ರಿಯಾಂಕಾ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. 

ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ರಾಯ್‌ಬರೇಲಿಯಿಂದ ಸತತ ಮೂರು ಬಾರಿ, ಸೋನಿಯಾ 5 ಬಾರಿ ಗೆದ್ದು ಲೋಕಸಭೆ ಪ್ರವೇಶಿಸಿದ್ದರು. ಈ ಬಾರಿ ಸೋನಿಯಾ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದ ಕಾರಣ ರಾಯ್‌ಬರೇಲಿ ಕ್ಷೇತ್ರ ತೆರವಾಗಲಿದೆ.

ಪ್ರಿಯಾಂಕಾ ಕರ್ನಾಟಕ ಅಥವಾ ತೆಲಂಗಾಣದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಹೀಗಾಗಿ ರಾಯ್‌ಬರೇಲಿ ಜೊತೆಗೆ ಈ ಎರಡು ರಾಜ್ಯಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರವನ್ನು 2ನೇ ಆಯ್ಕೆಯಾಗಿ ಬಳಸಿಕೊಂಡರೂ ಅಚ್ಚರಿ ಇಲ್ಲ ಎನ್ನಲಾಗಿದೆ.