‘ತೆನೆ ಇಳಿಸಿ ಕೈ ಪಾಳಯ’ ಸೇರಿಕೊಂಡ ಮಂಡ್ಯ ಜಿಲ್ಲೆ ಪ್ರಮುಖ ಮುಖಂಡರು..!

| Published : Mar 23 2024, 01:09 AM IST

‘ತೆನೆ ಇಳಿಸಿ ಕೈ ಪಾಳಯ’ ಸೇರಿಕೊಂಡ ಮಂಡ್ಯ ಜಿಲ್ಲೆ ಪ್ರಮುಖ ಮುಖಂಡರು..!
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಪಕ್ಷಾಂತರ ಪರ್ವವೂ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಚುನಾವಣಾ ಸಮಯದಲ್ಲಿ ಜೆಡಿಎಸ್‌ನ ಪ್ರಮುಖರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದರೊಂದಿಗೆ ಜಿಲ್ಲೆಯೊಳಗೆ ಪಕ್ಷದ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಚುನಾವಣಾ ಸಂಗ್ರಾಮಕ್ಕೆ ಹೊಸ ಅಸ್ತ್ರಗಳನ್ನು ಬತ್ತಳಿಕೆಗೆ ಸೇರಿಸಿಕೊಂಡು ದಳಪತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಪಕ್ಷಾಂತರ ಪರ್ವವೂ ನಡೆದಿದೆ. ಜೆಡಿಎಸ್‌ನ ಪ್ರಮುಖರು ತೆನೆ ಇಳಿಸಿ ಕೈ ಪಾಳಯ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿರುವುದು ದಳಕ್ಕೆ ಕೊಂಚ ಹಿನ್ನಡೆ ಉಂಟುಮಾಡಿದಂತೆ ಕಂಡುಬರುತ್ತಿದೆ.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಎನ್.ಅಪ್ಪಾಜಿಗೌಡ, ಜಿಪಂ ಮಾಜಿ ಸದಸ್ಯ ಹಾಗೂ ಮಾಜಿ ಶಾಸಕ ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್ ಕಾಂಗ್ರೆಸ್ ಸೇರಿದ ಪ್ರಮುಖರಾಗಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವ ಎನ್.ಚಲುವರಾಯಸ್ವಾಮಿ, ಬಿ.ಕೆ.ಹರಿಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಪಕ್ಷ ಸೇರ್ಪಡೆಯಾದರು.

ಮೂರು ಬಾರಿ ಜೆಡಿಎಸ್ ಪಕ್ಷದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಮರಿತಿಬ್ಬೇಗೌಡ ಅವರು ಜೆಡಿಎಸ್ ವರಿಷ್ಠರ ನಡೆಯಿಂದ ಬೇಸತ್ತು ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಮಯದಲ್ಲಿ ತಮ್ಮ ಬೆಂಬಲಿಗ ಕೀಲಾರ ಜಯರಾಂ ಅವರಿಗೆ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೆ ವರಿಷ್ಠರ ಬೇಸರಗೊಂಡಿದ್ದರು. ಆ ವೇಳೆ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡರ ಆಪ್ತ ಎಚ್.ಕೆ.ರಾಮು ಅವರಿಗೆ ಟಿಕೆಟ್ ನೀಡಿದ್ದರು. ದಳದೊಳಗಿನ ಒಡಕಿನಿಂದಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಧು ಜಿ.ಮಾದೇಗೌಡರು ವಿಜಯಿಯಾಗಿದ್ದರು. ಆ ಸಮಯದಿಂದಲೇ ಜೆಡಿಎಸ್ ಪಕ್ಷ ಹಾಗೂ ನಾಯಕರೊಂದಿಗಿನ ಒಡನಾಟದಿಂದ ಮರಿತಿಬ್ಬೇಗೌಡರು ದೂರ ಉಳಿದಿದ್ದರಲ್ಲದೇ, ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರದಿದ್ದರೂ ಆ ಪಕ್ಷದ ಸಭೆ-ಸಮಾರಂಭಗಳ ವೇದಿಕೆಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದರು.

೨೦೧೪ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಎನ್.ಅಪ್ಪಾಜಿಗೌಡ ಅವರು, ೨೦೨೦ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ವಿರುದ್ಧ ಸೋಲನುಭವಿಸಿದ್ದರು. ಆ ನಂತರದಲ್ಲಿ ಅವರು ೨೦೨೩ರ ವಿಧಾನಸಭೆ ಚುನಾವಣೆ ವೇಳೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ದಳಪತಿಗಳು ಶಾಸಕರಾಗಿದ್ದ ಕೆ.ಸುರೇಶ್‌ಗೌಡ ಅವರಿಗೆ ಟಿಕೆಟ್ ನೀಡಿದ್ದರಿಂದ ಅಸಮಾಧಾನಗೊಂಡಿದ್ದರು. ಅಂದಿನಿಂದ ಜೆಡಿಎಸ್ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಸಚಿವ ಚಲುವರಾಯಸ್ವಾಮಿ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದರಿಂದ ಕಾಂಗ್ರೆಸ್ ಸೇರ್ಪಡೆಗೊಂಡರು.

ಜಿಪಂ ಮಾಜಿ ಸದಸ್ಯ ಹಾಗೂ ಮಾಜಿ ಶಾಸಕ ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್ ಕೂಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಶಾಸಕರಾಗಿದ್ದ ಎಂ.ಶ್ರೀನಿವಾಸ್ ಅವರಿಗೆ ದಳಪತಿಗಳು ಟಿಕೆಟ್ ಕೊಡಲಿಲ್ಲ. ಜೊತೆಗೆ ಶ್ರೀನಿವಾಸ್ ಶಿಫಾರಸು ಮಾಡಿದ್ದ ಅಳಿಯ ಎಚ್.ಎನ್.ಯೋಗೇಶ್ ಅವರಿಗೂ ಟಿಕೆಟ್ ನೀಡದೆ ನಿರಾಕರಿಸಿದ್ದರು.

ದಳಪತಿಗಳ ನಡೆಯಿಂದ ಆಕ್ರೋಶಗೊಂಡಿದ್ದ ಎಂ.ಶ್ರೀನಿವಾಸ್ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಮೊಮ್ಮಗ ಕೆ.ಎಸ್.ವಿಜಯ್ ಆನಂದ್ ಅವರನ್ನು ಕಣಕ್ಕಿಳಿಸಿ ಜೆಡಿಎಸ್ ಪರಾಭವಗೊಳ್ಳುವುದಕ್ಕೆ ಕಾರಣಕರ್ತರಾಗಿದ್ದರು. ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಉತ್ತಮ ಒಡನಾಟ, ವಿಶ್ವಾಸದಿಂದ ಇದ್ದ ಎಂ.ಶ್ರೀನಿವಾಸ್ ಸಲಹೆ ಮೇರೆಗೆ ಎಚ್.ಎನ್.ಯೋಗೇಶ್ ಕೈ ಪಾಳಯಕ್ಕೆ ಜಿಗಿದಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಗ್ಗಹಳ್ಳಿ ವೆಂಕಟೇಶ್ ಜೆಡಿಎಸ್‌ನಿಂದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ೨೦೧೮ರ ಚುನಾವಣಾ ಸಮಯದಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕೊತ್ತತ್ತಿ-೨ನೇ ಸರ್ಕಲ್‌ನಲ್ಲಿ ಪ್ರಭಾವಿ ಜೆಡಿಎಸ್ ನಾಯಕರೆಂದೇ ಗುರುತಿಸಿಕೊಂಡಿದ್ದ ತಗ್ಗಹಳ್ಳಿ ವೆಂಕಟೇಶ್, ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಆಗ ಶಾಸಕರಾಗಿದ್ದ ರವೀಂದ್ರ ಶ್ರೀಕಂಠಯ್ಯನವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವೆಂದು ಜೆಡಿಎಸ್ ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರಲ್ಲದೆ, ಕುಮಾರಸ್ವಾಮಿ ಅವರಿಗೂ ತಮ್ಮ ಅಸಮಾಧಾನವನ್ನು ತಿಳಿಸಿದ್ದರು. ಇದಕ್ಕೆ ದಳಪತಿಗಳಿಂದ ಸೂಕ್ತ ಪ್ರತಿಕ್ರಿಯೆ ಬಾರದಿದ್ದರಿಂದ ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದರು. ಅದೂ ಕೂಡ ಜೆಡಿಎಸ್ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಇದೀಗ ಜೆಡಿಎಸ್ ತೊರೆದಿರುವ ತಗ್ಗಹಳ್ಳಿ ವೆಂಕಟೇಶ್ ಕಾಂಗ್ರೆಸ್ ಕೈ ಹಿಡಿದಿದ್ದಾರೆ.

ಸಚಿವ ಎನ್.ಚಲುವರಾಯಸ್ವಾಮಿ ಅವರು ಚುನಾವಣಾ ಸಮಯದಲ್ಲಿ ಜೆಡಿಎಸ್‌ನ ಪ್ರಮುಖರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದರೊಂದಿಗೆ ಜಿಲ್ಲೆಯೊಳಗೆ ಪಕ್ಷದ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಚುನಾವಣಾ ಸಂಗ್ರಾಮಕ್ಕೆ ಹೊಸ ಅಸ್ತ್ರಗಳನ್ನು ಬತ್ತಳಿಕೆಗೆ ಸೇರಿಸಿಕೊಂಡು ದಳಪತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.