ಟಿಎಪಿಸಿಎಂಎಸ್ ಚುನಾವಣೆ ಮುಂದೂಡಿಕೆ ಖಂಡಿಸಿ ಪ್ರತಿಭಟನೆ

| Published : Dec 06 2023, 01:15 AM IST

ಟಿಎಪಿಸಿಎಂಎಸ್ ಚುನಾವಣೆ ಮುಂದೂಡಿಕೆ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಯನ್ನು ಹಠಾತ್ತಾಗಿ ಮುಂದೂಡಿದ ಕ್ರಮ ಖಂಡಿಸಿ ಹಾಗೂ ಇದಕ್ಕೆ ಕಾರಣಕರ್ತ ಅಧಿಕಾರಿಗಳ ಅಮಾನತುಗೊಳಿಸುವಂತೆ ಆಗ್ರಹಿಸಿ ನಗರದ ಡಿವೈಎಸ್‌ಪಿ ಕಚೇರಿ ಎದುರು ಜೆಡಿಎಸ್ ತಾಲೂಕು ಘಟಕದಿಂದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.ನಗರದ ಡಿವೈಎಸ್‌ಪಿ ಕಚೇರಿ ಮಂದೆ ಜಮಾಯಿಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಟಿಎಪಿಸಿಎಂಎಸ್ ಚುನಾವಣೆ ನಡೆದರೆ ಕಾನೂನು ವ್ಯವಸ್ಥೆಗೆ ಧಕ್ಕೆಯಾಗುವ ಕುರಿತು ವರದಿ ನೀಡಿದ ಪೊಲೀಸ್ ಇಲಾಖೆ ಹಾಗೂ ಚುನಾವಣೆಯನ್ನು ಮುಂದೂಡಿದ ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಮುಂದೂಡಿಕೆಗೆ ಕಾರಣರಾದ ಅಧಿಕಾರಿಗಳ ಅಮಾನತಿಗೆ ಜೆಡಿಎಸ್‌ ಆಗ್ರಹ । ಡಿವೈಎಸ್‌ಪಿ ಕಚೇರಿ ಮುಂದೆ ಧರಣಿ

ಕನ್ನಡಪ್ರಭವಾರ್ತೆ ಚನ್ನಪಟ್ಟಣ

ಚನ್ನಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಯನ್ನು ಹಠಾತ್ತಾಗಿ ಮುಂದೂಡಿದ ಕ್ರಮ ಖಂಡಿಸಿ ಹಾಗೂ ಇದಕ್ಕೆ ಕಾರಣಕರ್ತ ಅಧಿಕಾರಿಗಳ ಅಮಾನತುಗೊಳಿಸುವಂತೆ ಆಗ್ರಹಿಸಿ ನಗರದ ಡಿವೈಎಸ್‌ಪಿ ಕಚೇರಿ ಎದುರು ಜೆಡಿಎಸ್ ತಾಲೂಕು ಘಟಕದಿಂದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ಡಿವೈಎಸ್‌ಪಿ ಕಚೇರಿ ಮಂದೆ ಜಮಾಯಿಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಟಿಎಪಿಸಿಎಂಎಸ್ ಚುನಾವಣೆ ನಡೆದರೆ ಕಾನೂನು ವ್ಯವಸ್ಥೆಗೆ ಧಕ್ಕೆಯಾಗುವ ಕುರಿತು ವರದಿ ನೀಡಿದ ಪೊಲೀಸ್ ಇಲಾಖೆ ಹಾಗೂ ಚುನಾವಣೆಯನ್ನು ಮುಂದೂಡಿದ ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಆಯ್ಕೆಗೆ ಡಿ.೩ರಂದು ಚುನಾವಣೆ ನಿಗದಿಯಾಗಿತ್ತು. ಆದರೆ, ಶನಿವಾರ ರಾತ್ರಿ ಸುಮಾರು ೧೦ ಗಂಟೆ ವೇಳೆಗೆ ಚುನಾವಣೆ ಮುಂದೂಡಿಕೆಯಾಗಿರುವ ನೋಟಿಸ್ ಅನ್ನು ಸಂಘದ ಗೋಡೆಗೆ ಚುನಾವಣಾಧಿಕಾರಿಗಳು ಅಂಟಿಸಿ ಹೋಗಿದ್ದಾರೆ. ವಿನಾಕರಣ ಚುನಾವಣೆ ಮುಂದೂಡಿಕೆ ಮಾಡಿರುವುದು ಖಂಡನೀಯ. ಇಂದೇ ಟಿಎಪಿಸಿಎಂಎಸ್ ಚುನಾವಣೆಗೆ ದಿನಾಂಕ ಘೋಷಿಸಬೇಕು ಎಂದು ಆಗ್ರಹಿಸಿದರು.

ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ತಯಾರಿ ನಡೆಸಲಾಗಿತ್ತು. ಚುನಾವಣೆಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆ ಮುಂಚಿತವಾಗಿಯೇ ಮನವಿ ಸಲ್ಲಿಸಲಾಗಿತ್ತು. ಪೊಲೀಸ್ ಇಲಾಖೆಯ ಸೂಚನೆಯಂತೆ ಚುನಾವಣೆ ನಡೆಯುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಇಲ್ಲಸಲ್ಲದ ಕಾರಣ ಸೃಷ್ಟಿಸಿ ಚುನಾವಣೆ ಮುಂದೂಡಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿನಾಂಕ ಘೋಷಣೆಗೆ ಪಟ್ಟು:

ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಚುನಾವಣಾಧಿಕಾರಿ ಆಗಮಿಸಿ ಇಂದೇ ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಚುನಾವಣೆಯ ದಿನಾಂಕ ಘೋಷಿಸಬೇಕು. ಅಲ್ಲಿಯವರೆಗೆ ಈ ಜಾಗದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರದೊಡ್ಡಿ ಜಯರಾಮು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಮುಖಂಡರಾದ ಇ.ತಿ. ಶ್ರೀನಿವಾಸ್, ಮೆಹರೀಶ್, ಮಾಗನೂರು ಗಂಗರಾಜು ಇತರರು ಉಪಸ್ಥಿತರಿದ್ದರು.

ಬಾಕ್ಸ್....

ಡಿವೈಎಸ್‌ಪಿ ಕಚೇರಿ ಎದುರು ಹೈಡ್ರಾಮಾ!

ಟಿಎಪಿಸಿಎಂಎಸ್ ಚುನಾವಣೆ ಮುಂದೂಡಿಕೆ ಸಂಬಂಧ ಡಿವೈಎಸ್‌ಪಿ ಕಚೇರಿ ಮುಂದೆ ಸಾಕಷ್ಟು ಹೈಡ್ರಾಮ ನಡೆಯಿತು.

ಪ್ರತಿಭಟನಾನಿರತರು ಚುನಾವಣಾಧಿಕಾರಿ ಬಂದು ಚುನಾವಣಾ ದಿನಾಂಕ ಘೋಷಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಈ ಹಂತದಲ್ಲಿ ಡಿವೈಎಸ್‌ಪಿ ಗಿರಿ ಬಂದು ಮನವೊಲಿಸಲು ಯತ್ನಿಸಿದರಾದರೂ ಚುನಾವಣಾಧಿಕಾರಿ ಬರುವವರಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರ ಪಟ್ಟು ಹಿಡಿದರು.

ಚುನಾವಣಾಧಿಕಾರಿ ವಿರುದ್ಧ ಗರಂ: ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿ ಉಮೇಶ್, ಟಿಎಪಿಸಿಎಂಎಸ್ ಚುನಾವಣೆಯ ಕುರಿತಂತೆ ಪೊಲೀಸ್ ಇಲಾಖೆ ವರದಿಯನ್ನು ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರ ಗಮನಕ್ಕೆ ತಂದು, ಅವರ ಸೂಚನೆಯಂತೆ ಚುನಾವಣೆ ಮುಂದೂಡಿದೆ. ಈಗಾಗಲೇ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಅವರ ಸೂಚನೆಯಂತೆ ನೂತನ ಚುನಾವಣಾ ದಿನಾಂಕ ಘೋಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಒಪ್ಪದ ಪ್ರತಿಭಟನಾನಿರತರು ಚುನಾವಣಾಧಿಕಾರಿ ವಿರುದ್ಧ ಗರಂ ಆದರು. ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ಹಂತದಲ್ಲಿ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. ಆದರೆ, ಮಧ್ಯೆ ಪ್ರವೇಶಿಸಿದ ಡಿವೈಎಸ್‌ಪಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ನಂತರ ಡಿವೈಎಸ್‌ಪಿ ಕಚೇರಿ ಒಳಗೆ ಜೆಡಿಎಸ್ ಮುಖಂಡರಾದ ಎಚ್.ಸಿ.ಜಯಮುತ್ತು, ಕುಕ್ಕೂರುದೊಡ್ಡಿ ಜಯರಾಮು, ಚುನಾವಣಾಧಿಕಾರಿ ಉಮೇಶ್ ಕೆಲಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಉಮೇಶ್ ಸಂಜೆಯೊಳಗೆ ಚುನಾವಣಾ ದಿನಾಂಕ ಘೋಷಣೆ ಮಾಡುವ ಭರವಸೆ ನೀಡಿದ ಬಳಿಕ ಜೆಡಿಎಸ್ ಮುಖಂಡರು ಪ್ರತಿಭಟನೆಯನ್ನು ಹಿಂಪಡೆದರು.

---