ಸಾರಾಂಶ
ಜಮೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯರ ಸೂಚನೆ ಮೇರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ಶಾಲೆ ಮಠಮಾನ್ಯ, ಸ್ಮಶಾನಗಳು ರೈತರ ಪಿತೃರ್ಜಿತವಾಗಿ ಬಂದಿರುವಂತ ಜಮೀನುಗಳನ್ನೂ ಬಿಡದಂತೆ ವಕ್ಫ್ ಸಮಿತಿ ಹೆಸರಿಗೆ ದಾಖಲಿಸುತ್ತಿರುವುದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ ಮುನಿಸ್ವಾಮಿ
ಕೋಲಾರ : ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಜಾಗಗಳು, ಶಾಲೆಗಳು, ಮಂದಿರಗಳು, ಕಲ್ಯಾಣಿಗಳು ಸೇರಿದಂತೆ ರೈತರ ಪಿತೃರ್ಜಿತ ಆಸ್ತಿಗಳನ್ನು ಯಾವುದೇ ದಾಖಲಾತಿಗಳು ಇಲ್ಲದೆ ವಕ್ಫ್ ಸಮಿತಿಗೆ ಪರಾಭಾರೆ ಮಾಡುತ್ತಿರುವುದನ್ನು ವಿರೋಧಿಸಿ ಬಿಜೆಪಿ ಪಕ್ಷವು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನ.೪ರಂದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ವಕ್ಫ್ ಸಚಿವ ಜಮೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯರ ಸೂಚನೆ ಮೇರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ಶಾಲೆ ಮಠಮಾನ್ಯ, ಸ್ಮಶಾನಗಳು ರೈತರ ಪಿತೃರ್ಜಿತವಾಗಿ ಬಂದಿರುವಂತ ಜಮೀನುಗಳನ್ನೂ ಬಿಡದಂತೆ ವಕ್ಫ್ ಸಮಿತಿ ಹೆಸರಿಗೆ ದಾಖಲಿಸುತ್ತಿರುವುದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ ಎಂದರು. ಸಾರ್ವಜನಿಕರ ಆಸ್ತಿ ಕಬಳಿಕೆ
ಸಚಿವ ಜಮೀರ್ ಅಹ್ಮದ್ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರನ್ನು ಮುಂದಿಟ್ಟುಕೊಂಡು ಸಾರ್ವಜನಿಕರ ಆಸ್ತಿಗಳನ್ನು ಲೂಟಿ ಮಾಡಲು ಮುಂದಾಗಿದ್ದಾರೆ, ಮುಂಬರುವ ಚಳಿಗಾಲ ಅಧಿವೇಶನದಲ್ಲಿ ವಕ್ಫ್ ಸಮಿತಿ ಕಾಯ್ದೆಗಳಿಗೆ ಕೇಂದ್ರ ಸರ್ಕಾರವು ತಿದ್ದುಪಡಿ ಮಾಡುತ್ತಿರುವುದರಿಂದ ವಕ್ಫ್ ಸಮಿತಿಗೆ ಸರ್ಕಾರಿ ಹಾಗೂ ಸಾರ್ವಜನಿಕರ ಆಸ್ತಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಳ್ಳುವ ಕಾಂಗ್ರೆಸ್ ಮುಂದಾಗಿದೆ ಎಂದು ಖಂಡಿಸಿದರು.
ಜಿಲ್ಲೆಯಲ್ಲೂ ವಕ್ಫ್ ಹಸ್ತಕ್ಷೇಪ
ಕೋಲಾರ ನಗರದಲ್ಲಿ ನಾಗರಕುಂಟೆ ಕೆಳಭಾಗದ ಜಾಗವು ದೇವಾಲಯಕ್ಕೆ ಸೇರಿರುವುದನ್ನು ನಕಲಿ ದಾಖಲೆಗಳು ಸೃಷ್ಠಿಸಿಕೊಂಡು ವಕ್ಫ್ ಸಮಿತಿಗೆ ಸೇರ್ಪಡೆ ಮಾಡಲು ವಿಫಲ ಯತ್ನಗಳು ನಡೆಯುತ್ತಿದೆ, ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಸಂಗೊಂಡಹಳ್ಳಿಯ ಗಣೇಶ ಕಿಂಡಿಗೆ ಸೇರಿದ ಜಾಗ ಈದ್ಗಾ ಮೈದಾನಕ್ಕೆ ಸೇರ್ಪಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಅಂತರಗಂಗೆ ತಪಲಿನ ಜಾಗದಲ್ಲಿ ಮದರಸವನ್ನು ನಿರ್ಮಿಸಿಕೊಂಡು ದಿನೇ ದಿನೇ ಅರಣ್ಯ ಇಲಾಖೆ ಹಾಗೂ ಸರ್ಕಾರಿ ಜಾಗವನ್ನು ಕಬಳಿಸಲಾಗಿದೆ. ಜಮೀರ್ ಅಹ್ಮದ್ ಸಹೋದರನ ಮಾದರಿಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಏಕಪಕ್ಷಿಯವಾಗಿ ತಮ್ಮ ಸಮುದಾಯಕ್ಕೆ ಅಕ್ರಮವಾಗಿ, ಕಾನೂನ ಬಾಹಿರವಾಗಿ ಪಾಕಿಸ್ತಾನ ಏಜೆಂಟ್‌ರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಮಾತನಾಡಿ, ಒಂದು ಸಮುದಾಯವನ್ನು ತುಷ್ಠೀಕರಣ ಮಾಡಲು ರೈತರ ಪಿತೃರ್ಜಿತ ಜಮೀನುಗಳಿಗೊ ನೋಟಿಸ್ ಜಾರಿ ಮಾಡಿದ್ದಾರೆ ಎಂದು ದೂರಿದ ಅವರು, ಜೆಡಿಎಸ್ ಬೆಂಬಲ ಸೂಚಿಸಿದ್ದು ಪ್ರತಿಭಟನೆಯಲ್ಲಿ ಭಾಗವಹಿಸಲಿದೆ ಎಂದರು.
ಪಿಡಿಒಗಳ ಮೇಲೆ ಒತ್ತಡ
ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ಮಾತನಾಡಿ, ಜಿಲ್ಲಾಧಿಕಾರಿ ಕಾರ್ಯಲಯದಿಂದ ಪಿ.ಡಿ.ಓ.ಗಳ ಮೇಲೆ ಅಕ್ರಮವಾಗಿ ವಕ್ಫ್ ಸಮಿತಿಗಳಿಗೆ ಖಾತೆ ಪಹಣಿಗಳು ಮಾಡಿಕೊಡಲು ಒತ್ತಡ ಹೇರಿರುವ ಆಡಿಯೋ ದಾಖಲಾತಿಗಳು ಸಿಕ್ಕಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ಎಸ್.ಬಿ.ಮುನಿವೆಂಕಟಪ್ಪ, ಚಂದ್ರಶೇಖರ್, ಮಾಗೇರಿ ನಾರಾಯಣಸ್ವಾಮಿ, ಶಿಳ್ಳಂಗೆರೆ ಮಹೇಶ್, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್ ಇದ್ದರು.