ಸಾರಾಂಶ
ಹೈದರಾಬಾದ್: ಶಿಕ್ಷಣ, ಉದ್ಯೋಗ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲು ಪ್ರಮಾಣವನ್ನು ಹಾಲಿ ಇರುವ ಶೇ.23ರಿಂದ ಶೇ.42ಕ್ಕೆ ಹೆಚ್ಚಿಸಲು ತೆಲಂಗಾಣದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ, ‘ರಾಜ್ಯದಲ್ಲಿ ನಡೆಸಿದ ಜಾತಿ ಸಮೀಕ್ಷೆ ಅನ್ವಯ, ಒಟ್ಟು ಜನಸಂಖ್ಯೆಯಲ್ಲಿ ಒಬಿಸಿ ಪ್ರಮಾಣ ಶೇ.56.36ರಷ್ಟಿದೆ. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದ ಎಲ್ಲ ಹಂತಗಳಲ್ಲಿ ಹಿಂದುಳಿದ ವರ್ಗಕ್ಕೆ ಶೇ.42 ಮೀಸಲಾತಿಯನ್ನು ಖಚಿತಪಡಿಸಲು ನಾವು ಸಂಕಲ್ಪ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.
ಆದರೆ ಹಾಲಿ ಸುಪ್ರೀಂಕೋರ್ಟ್‌ನ ನಿಯಮಗಳ ಅನ್ವಯ ಮೀಸಲಿನ ಒಟ್ಟಾರೆ ಮಿತಿ ಶೇ.50ರ ಗಡಿ ದಾಟುವಂತಿಲ್ಲ. ಇದೇ ರೀತಿಯ ಮೀಸಲು ಹೆಚ್ಚಿಸಿದ್ದ ಹಲವು ರಾಜ್ಯಗಳ ನಿರ್ಧಾರವನ್ನು ಆಯಾ ರಾಜ್ಯಗಳ ಹೈಕೋರ್ಟ್‌ಗಳು ವಜಾ ಮಾಡಿದ್ದವು. ಅದರ ಬೆನ್ನಲ್ಲೇ ಇದೀಗ ಒಬಿಸಿ ಮೀಸಲನ್ನು ಶೇ.42ಕ್ಕೆ ಹಚ್ಚಿಸುವ ನಿರ್ಧಾರಕ್ಕೆ ತೆಲಂಗಾಣ ಸರ್ಕಾರ ಬಂದಿದೆ. ಇದು ಜಾರಿಯಾದರೆ ಒಟ್ಟು ಮೀಸಲು ಶೇ.67ಕ್ಕೆ ತಲುಪಲಿದೆ. ಇದು ಸುಪ್ರೀಂ ಆದೇಶಕ್ಕೆ ವಿರುದ್ಧ. ಹೀಗಾಗಿಯೇ ಈ ಮೀಸಲು ಜಾರಿ ಸಾಧ್ಯ ಮಾಡಲು ಇದನ್ನು ಸಂವಿಧಾನದ 9ನೇ ಪರಿಚ್ಛೇದಲ್ಲಿ ಕೇಂದ್ರ ಸರ್ಕಾರ ಸೇರಿಸಬೇಕು. ಇಲ್ಲದೇ ಹಲ್ಲ್ಲಿ ಇದರ ಜಾರಿ ಅಸಾಧ್ಯ.