ಸಾರಾಂಶ
ಚಿಕ್ಕಬಳ್ಳಾಪುರ ; ಹಾಲು ಖರೀದಿ ದರ ಕಡಿತಗೊಳಿಸಿರುವ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ( ಕೋಚಿಮುಲ್) ಧೋರಣೆ ಖಂಡಿಸಿ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಬುಧವಾರ ಇಲ್ಲಿಯ ಜಿಲ್ಲಾಡಳಿತ ಭವನದ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಸುಗಳೊಂದಿಗೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಡೆಸಿದರು.
ಕೈಗೆ ಕಪ್ಪು ಪಟ್ಟಿ ಧರಿಸಿ ಸತ್ಯಾಗ್ರಹ ಆರಂಭಿಸಿದ ಜೆಡಿಎಸ್- ಬಿಜೆಪಿ ಕಾರ್ಯಕರ್ತರು, ಮೊದಲು ಗೋ ಪೂಜೆ ನೆರವೇರಿಸಿ, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಬಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಕಡಿತಗೊಳಿಸಿರುವ ಹಾಲಿನ ದರ ಆದೇಶವನ್ನು ಹಿಂಪಡೆಯುವಂತೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕವಾಗಿದ್ದ ಹಾಲು ಒಕ್ಕೂಟವನ್ನು ಮತ್ತೆ ಜಿಲ್ಲೆಗೆ ವಾಪಸ್ಸು ನೀಡಬೇಕೆಂದು ಪ್ರತಿಭಟನೆ ವೇಳೆ ಒತ್ತಾಯಿಸಿದರು.ಪ್ರತಿ ಲೀಟರ್‌ಗೆ ₹5 ಹೆಚ್ಚಿಸಿ
ಈ ವೇಳೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಕೋಚಿಮುಲ್‌ನಲ್ಲಿ ರೈತರಿಗೆ ನೀಡುತ್ತಿದ್ದ ಹಣದಲ್ಲಿ 2 ರೂ. ಕಡಿತ ಮಾಡಿದ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಂದು ಕೇವಲ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ. ಆದೇಶ ವಾಪಸ್ ಪಡೆದು ರೈತರಿಗೆ ಲೀಟರ್ ಹಾಲಿಗೆ ಐದು ರುಗಳನ್ನು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ನಿತ್ಯಾವಶ್ಯಕ ವಸ್ತುಗಳ ದರಗಳನ್ನು ಏರಿಸಿದ್ದಾರೆ. ಹಾಲಿನ ದರವನ್ನು ಮೊದಲಿಗೆ 3 ರು.. ಏರಿಸಿ, ನಂತರ ಮತ್ತೆ 2 ರು. ಏರಿಕೆ ಮಾಡಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರೈತರಿಗೆ ನೀಡುವ ಹಣದಲ್ಲಿ 2 ರೂ. ಕಡಿತ ಮಾಡಿದೆ. ನ್ಯಾಯವಾಗಿ ರೈತರಿಗೆ ಹೆಚ್ಚು ಹಣ ನೀಡಬೇಕಿತ್ತು ಎಂದರು.
ಮಾರುಕಟ್ಟೆ ವಿಸ್ತರಿಸುವಲ್ಲಿ ವಿಫಲ
ಹಾಲು ಹೆಚ್ಚುವರಿ ಉತ್ಪಾದನೆಯಾಗುತ್ತಿದೆ. ಆದುದರಿಂದ ದರ ಇಳಿಕೆ ಮಾಡಿರುವುದಾಗಿ ಕೋಚಿಮುಲ್ ಅಧ್ಯಕ್ಷರು ಹೇಳುತ್ತಾರೆ. ಹೆಚ್ಚುವರಿಯಾಗಿ ಹಾಲು ಬಂದರೆ ಅದಕ್ಕೆ ಮಾರುಕಟ್ಟೆ ಒದಗಿಸಲು ತಾನೇ ಒಕ್ಕೂಟಕ್ಕೆ ನಿರ್ದೇಶಕರು ಮತ್ತು ಅಧ್ಯಕ್ಷರನ್ನು ಮಾಡಿರುವುದು. ಹಾಲಿನಿಂದ ಪನ್ನೀರ್, ಐಸ್ ಕ್ರೀಂ, ಹಾಲಿನ ಪೌಡರ್ ಸೇರಿದಂತೆ ಮತ್ತಿತರ ಉತ್ಪನ್ನಗಳನ್ನು ಮಾಡಿ ಮಾರುಕಟ್ಟೆ ಒದಗಿಸಬೇಕು. ಅದು ಬಿಟ್ಟು ನೇಮಕಾತಿ ಹಗರಣ ಮಾಡಲು ಅಲ್ಲಾ ಎಂದರು.
ತಾವು ಹತ್ತು ವರ್ಷಗಳ ಕಾಲ ಶಾಸಕ ಹಾಗೂ ಮಂತ್ರಿಯಯಾಗಿದ್ದ ಅವಧಿಯಲ್ಲಿ ಯಾವತ್ತೂ ಸರ್ಕಾರದ ಹಣದಲ್ಲಿ ವಿದೇಶ ಯಾತ್ರೆ ಮಾಡಿಲ್ಲ, ಆದರೆ ಒಕ್ಕೂಟದ ನಿರ್ದೇಶಕರುಗಳು ಐದು ವರ್ಷದಲ್ಲಿ ಹತ್ತು ಬಾರಿ ವಿದೇಶ ಪ್ರಯಾಣವನ್ನು ರೈತರ ಹಣದಲ್ಲಿ ಮಾಡಿದ್ದಾರೆ. ಇವರನ್ನು ಒಕ್ಕೂಟ ರಕ್ಷಣೆಗೆ ನೇಮಿಸಿದ್ದರೆ ಭಕ್ಷಣೆ ಮಾಡಿದ್ದಾರೆ ಎಂದು ಆಕ್ರೋಷ ಹೊರ ಹಾಕಿದರು.
ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟಈ ಹಿಂದೆ ನಾನು ಸಚಿವನಾಗಿದ್ದಾಗ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ರಚಿಸಲಾಗಿತ್ತು. ಆಗ 5 ಎಕರೆ ಜಾಗ ಮತ್ತು 50 ಕೋಟಿ ರೂ. ಅನುದಾನಕ್ಕೆ ನಮ್ಮ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಇಷ್ಟೆಲ್ಲ ಮಾಡಿದರೂ ಹಾಲು ಒಕ್ಕೂಟವನ್ನು ರದ್ದು ಮಾಡಲಾಗಿತ್ತು. ಈಗ ಸರ್ಕಾರ ಮತ್ತೆ ಪ್ರತ್ಯೇಕ ಒಕ್ಕೂಟ ಮಾಡಲು ಪ್ರಯತ್ನ ಆರಂಭಿಸಿದೆ. ಇದನ್ನು ಸುಸಜ್ಜಿತವಾಗಿ ಮಾಡಲಿ ಎಂದರು. ಸಚಿವ ಲೇವಡಿಗೆ ತಿರುಗೇಟುಹಾಲಿನ ದರ ಕಡಿತ ವಾಪಾಸ್ ಪಡೆಯುವಂತೆ ಸಂಸದ ಡಾ.ಕೆ.ಸುಧಾಕರ್ ಉಪವಾಸ ಸತ್ಯಾಗ್ರಹ ಆರಂಭಿಸಿದಕ್ಕೆ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ ,ಉಪವಾಸ ಸತ್ಯಾಗ್ರಹ ಅಂದ್ರೆ ಸಾಯಂಕಲದವರೆಗೂ 3 ಗಂಟೆಯವರೆಗೂ ಮಾಡೋದಾ, ಉಪವಾಸ ಸತ್ಯಾಗ್ರಹದ ಅರ್ಥ ಸಂಸದ ಸುಧಾಕರ್‌ಗೆ ಗೊತ್ತಿದ್ಯಾ ಎಂದು ಲೇವಡಿ ಮಾಡಿದ್ದರು.
ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಸಂಸದ ಡಾ.ಕೆ.ಸುಧಾಕರ್ ಉತ್ತರಿಸಿ, ಸಚಿವ ಡಾ.ಎಂ.ಸಿ.ಸುಧಾಕರ್ ಎಂದಾದರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದರಾ, ನನಗೆ ಯಾವ ರೀತಿ ಹೋರಾಟ ಮಾಡಬೇಕು ಅಂತ ಗೊತ್ತಿದೆ. ರೈತರಿಗೆ ಅನ್ಯಾಯ ಆಗಿರೋದಕ್ಕೆ ನ್ಯಾಯ ಕೊಡಿಸೋದು ಗೊತ್ತಿದೆ.ಇವರ ತಾತನ ಕಾಲದಿಂದ ಅಧಿಕಾರದಲ್ಲಿದ್ದವರು ಜಿಲ್ಲೆಗೆ ಇವರ ಕೊಡುಗೆ ಏನು, ಇವರ ಹತ್ರ ನಾನು ಹೇಳಿಸಿಕೊಳ್ಳಬೇಕಾದ ದರಿದ್ರ‍್ಯಾ ಬಂದಿಲ್ಲ ಎಂದು ಕಟುಕಿದರು.
ಸಚಿವರಿಗೆ ಸದ್ಯದಲ್ಲೇ ಪೂಜೆ ಮಾಡ್ತಾರೆ
ಕ್ಷೇತ್ರಕ್ಕೆ ನಾನು ಮಾಡಿವುದಕ್ಕೆ ಸಾಕ್ಷಿ ಗುಡ್ಡೆ ಆಗಿದೆ. ಸಚಿವ ಡಾ.ಸುಧಾಕರ್ ಸರ್ಕಾರಿ ಜಮೀನು ಹೊಡ್ಕೊಂಡಿರೋದು ಬಿಟ್ರೆ ಬೇರೆ ಏನು ಮಾಡಿಲ್ಲ. ಕೋಚಿಮುಲ್‌ನಲ್ಲಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ. ಹೀಗಿದ್ದರೂ ಈತ ಸಮರ್ಥ ನಾಯಕನಾ, ರೈತರು ಸಚಿವ ಸುಧಾಕರ್ ಗೆ ಸದ್ಯದಲ್ಲಿ ಪೂಜೆ ಮಾಡ್ತಾರೆ ಅಂತ ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಪ್ರಕೋಷ್ಠ ರಾಜ್ಯ ಸಂಚಾಲಕ ಬೇಲೂರು ಶ್ರೀ. ರಾಘವೇಂದ್ರ ಶೆಟ್ಟಿ , ಮಾಜಿ ಶಾಸಕರಾದ ಜೆ.ಕೆ.ಕೃಷ್ಣಾರೆಡ್ಡಿ, ಎಂ.ಶಿವಾನಂದ್, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ಜೆಡಿ ಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್. ಮುರಳೀಧರ್ , ಕೆ.ಬಿ. ಮುರಳಿ, ಮಾಜಿ ಜಿ.ಪಂ.ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ,ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಕೆ.ವಿ.ನಾಗರಾಜ್, ಸೀಕಲ್ ರಾಮಚಂದ್ರಗೌಡ, ಮರಳುಕುಂಟೆ ಕೃಷ್ಣಮೂರ್ತಿ, ಆರ್.ಮಟಮಪ್ಪ, ಕಾಳೇಗೌಡ, ರವಿನಾರಾಯಣರೆಡ್ಡಿ, ಹರಿನಾಥ್ ರೆಡ್ಡಿ, ನರಸಿಂಹಮೂರ್ತಿ, ಮತ್ತಿತರರು ಇದ್ದರು.ಸಿಕೆಬಿ-1ಕೋಚಿಮುಲ್ ವಿರುದ್ದ ಜಿಲ್ಲಾಡಳಿತ ಭವನದ ಮುಂದೆ ಬಿಜೆಪಿ ಮತ್ತು ಜೆಡಿ ಎಸ್ ನಿಂದ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಹಸುಗಳೊಂದಿಗೆ ಸಂಸದ ಡಾ.ಕೆ. ಸುಧಾಕರ್.
ಸಿಕೆಬಿ-2 ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಸಂಸದ ಡಾ.ಕೆ. ಸುಧಾಕರ್ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಬಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದರು.