ಇದೇ ಮೊದಲ ಬಾರಿ ಮತದಾರರಿಗೆ ಕ್ಯೂ ಆರ್‌ ಕೋಡ್‌ ವೋಟರ್‌ ಸ್ಲಿಪ್‌

| Published : Apr 16 2024, 09:28 AM IST

Voting

ಸಾರಾಂಶ

ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮತಗಟ್ಟೆಯನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುವಂತೆ ಮನೆ ಮನೆಗೆ ಹಂಚುವ ವೋಟರ್‌ ಸ್ಲಿಪ್‌ಗಳಲ್ಲಿ ಇದೇ ಮೊದಲ ಬಾರಿಗೆ ಮತಗಟ್ಟೆಯ ಕ್ಯೂಆರ್‌ ಕೋಡ್‌ ಮುದ್ರಿಸಲಾಗಿದೆ.

ಬೆಂಗಳೂರು :  ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮತಗಟ್ಟೆಯನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುವಂತೆ ಮನೆ ಮನೆಗೆ ಹಂಚುವ ವೋಟರ್‌ ಸ್ಲಿಪ್‌ಗಳಲ್ಲಿ ಇದೇ ಮೊದಲ ಬಾರಿಗೆ ಮತಗಟ್ಟೆಯ ಕ್ಯೂಆರ್‌ ಕೋಡ್‌ ಮುದ್ರಿಸಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ದೇಶದಲ್ಲಿ ಇದೇ ಮೊದಲ ಬಾರಿಗೆ ಮಾಡಿರುವ ಪ್ರಯೋಗ ಇದಾಗಿದೆ. ರಾಜ್ಯದಲ್ಲಿ ನಗರ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸೌಲಭ್ಯ ಜಾರಿಯಾಗಿದೆ. ನಗರದ ನಿವಾಸಿಗಳು ಕ್ಯೂಆರ್‌ ಕೋಡ್‌ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ತಲುಪಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲ ಮತದಾರರಿಗೆ ಒದಗಿಸಲಾಗುತ್ತದೆ.

ಮತದಾನ ಕೇಂದ್ರ, ದಿನಾಂಕ, ಸಮಯ ಮುಂತಾದ ಮಾಹಿತಿಯನ್ನು ಕ್ಯೂಆರ್‌ ಕೋಡ್‌ ಒಳಗೊಂಡಿರುತ್ತದೆ. ಆದರೆ ಮತದಾರರ ಭಾವಚಿತ್ರ ಇರುವುದಿಲ್ಲ. ಮತದಾರರ ಮಾಹಿತಿ ಚೀಟಿಯನ್ನು ಮತದಾರರ ಗುರುತಿನ ಪುರಾವೆ ಎಂದು ಪರಿಗಣಿಸುವುದಿಲ್ಲ. ಕೇಂದ್ರ ಚುನಾವಣಾ ಆಯೋಗ ನಿಗದಿ ಪಡಿಸಿದ ಮತದಾರರ ಗುರುತಿನ ಚೀಟಿ ಅಥವಾ ಕೇಂದ್ರ, ರಾಜ್ಯ ಸರ್ಕಾರ ನೀಡಿರುವ ಯಾವುದೇ ಇತರ ಗುರುತಿನ ಚೀಟಿಯನ್ನು ಬಳಸಬಹುದಾಗಿದೆ.