ಚುನಾವಣಾ ಆಯೋಗಕ್ಕೆ ರಾಹುಲ್‌ 5 ಪ್ರಶ್ನೆ

| N/A | Published : Aug 09 2025, 12:00 AM IST / Updated: Aug 09 2025, 05:55 AM IST

ಸಾರಾಂಶ

ಕಳೆದ ಲೋಕಸಭಾ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಸಂಬಂಧ ದಾಖಲೆ ಬಿಡುಗಡೆ ಮಾಡಿದ ಮರುದಿನವೇ ಕಾಂಗ್ರೆಸ್‌ ಪಕ್ಷವು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್‌ ಬಹಿರಂಗ ಸಮಾವೇಶ ಮೂಲಕ ಮತಗಳವು ವಿರುದ್ಧ ಹೋರಾಟದ ರಣಕಹಳೆ ಮೊಳಗಿಸಿದೆ. 

  ಬೆಂಗಳೂರು :  ಕಳೆದ ಲೋಕಸಭಾ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಸಂಬಂಧ ದಾಖಲೆ ಬಿಡುಗಡೆ ಮಾಡಿದ ಮರುದಿನವೇ ಕಾಂಗ್ರೆಸ್‌ ಪಕ್ಷವು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್‌ ಬಹಿರಂಗ ಸಮಾವೇಶ ಮೂಲಕ ಮತಗಳವು ವಿರುದ್ಧ ಹೋರಾಟದ ರಣಕಹಳೆ ಮೊಳಗಿಸಿದೆ. ಮತಗಳವು ಕುರಿತು ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನೂ ಆಗ್ರಹಿಸಿದೆ.

ಜತೆಗೆ, ದೇಶಾದ್ಯಂತ ಇದೇ ರೀತಿಯ ಮತಗಳವು ನಡೆಸಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಚುನಾವಣಾ ಆಯೋಗದ ಧೋರಣೆಯಿಂದ ಆಪತ್ತಿನಲ್ಲಿರುವ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಲು ಜನತೆ ಮಾಡು ಇಲ್ಲವೇ ಮಡಿ ಹೋರಾಟ ನಡೆಸಬೇಕು ಎಂದು ಕರೆ ನೀಡಲಾಗಿದೆ.

ಈ ಹೋರಾಟವನ್ನು ಮತ್ತೊಂದು ಹಂತಕ್ಕೆ ಒಯ್ಯಲು ಸೋಮವಾರ ದೆಹಲಿಯ ಕೇಂದ್ರ ಚುನಾವಣಾ ಆಯೋಗದ ಮುಂದೆ ಇಂಡಿಯಾ ಮೈತ್ರಿ ಕೂಟದ ಸಂಸದರ ಪರೇಡ್‌ ಸೇರಿ ಬರುವ ದಿನಗಳಲ್ಲಿ ಮತಗಳವು ಸಂಬಂಧ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಹೋರಾಟ ತೀವ್ರಗೊಳಿಸುವ ಮುನ್ಸೂಚನೆ ನೀಡಲಾಗಿದೆ.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ‘ವೋಟ್‌ ಅಧಿಕಾರ್‌ ರ್‍ಯಾಲಿ’ ಹೆಸರಿನಲ್ಲಿ ನಡೆದ ಬೃಹತ್‌ ಪ್ರತಿಭಟನಾ ಸಮಾವೇಶದಲ್ಲಿ ಚುನಾವಣಾ ಆಯೋಗ, ಪ್ರಧಾನಿ ಮೋದಿ, ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರು ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೆ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆಗಳನ್ನೂ ಕೇಳಿದರು.

ಆದರೆ, ಮತಗಳವು ಆರೋಪ ಕುರಿತು ಅಫಿಡವಿಟ್ ಸಲ್ಲಿಸಬೇಕು ಎಂಬ ಚುನಾವಣಾ ಆಯೋಗದ ಬೇಡಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದ ರಾಹುಲ್‌ ಅವರು, ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ತಮಗೆ ಇಂತಹ ಯಾವ ಅಫಿಡವಿಟ್ ಸಲ್ಲಿಸುವ ಅಗತ್ಯವಿಲ್ಲ ಎಂದರು.

ಇನ್ನು ಚುನಾವಣಾ ಆಯೋಗವು ಲೋಕಸಭಾ ಚುನಾವಣೆಗೆ ಸಂಬಂಧಿಸಿ ನಾವು ಕೇಳುವ ದಾಖಲೆಗಳನ್ನು ನೀಡಿದರೆ ಈಗ ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಬಹಿರಂಗಪಡಿಸಿರುವಂತೆ ದೇಶದ ಇನ್ನಷ್ಟು ಕ್ಷೇತ್ರಗಳಲ್ಲಿ ಮತಗಳವು ಅಕ್ರಮವನ್ನು ಬಯಲಿಗೆಳೆಯಲು ಸಿದ್ಧ ಎಂದು ಸಾರಿದರು. ಒಂದು ವೇಳೆ ಆಯೋಗ ಮಾಹಿತಿ ನೀಡದಿದ್ದರೂ ನಾವು ಸುಮ್ಮನೆ ಕೂರುವುದಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಕೇವಲ 20, 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿರುವ 25ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳ ದಾಖಲೆಗಳನ್ನು ಜಾಲಾಡಿ ಬಹಿರಂಗಪಡಿಸುವ ಸವಾಲು ಎಸೆದರು.

ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದೇ ಭಾಷಣ ಮಾಡಿದ ಅವರು, ಸಂವಿಧಾನದ ಮೇಲೆ ದಾಳಿ ಮಾಡಿದರೆ ಸಂವಿಧಾನ ರಕ್ಷಣೆಗಾಗಿ ನಾವು ನಿಮ್ಮನ್ನು ಗುರಿಯಾಗಿಸಿ ದಾಳಿ ಮಾಡಬೇಕಾಗುತ್ತದೆ ಎಂದು ಆಯೋಗಕ್ಕೆ ಎಚ್ಚರಿಕೆಯನ್ನೂ ನೀಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸೇರಿ ರಾಜ್ಯ ಸಚಿವ ಸಂಪುಟದ ಹಲವು ಸಚಿವರು, ಪಕ್ಷದ ಶಾಸಕರು, ಸಂಸದರು, ಮುಖಂಡರು ಮಾತನಾಡಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ದೇಶದ ಪ್ರತಿ ನಾಗರಿಕನಿಗೆ ಒಂದೇ ಮತ ಎನ್ನುವ ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡುತ್ತಿದೆ.

ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ರೈತರು, ಕಾರ್ಮಿಕರು, ಬಡವರು ಸೇರಿ ದೇಶದ ನಾಗರಿಕರ ರಕ್ಷಣೆಗಾಗಿ ಇರುವ ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕಾಂಗ್ರೆಸ್‌ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಕಟಿಬದ್ಧವಾಗಿ ನಿಲ್ಲಬೇಕು. ಮತಗಳವು ಅಕ್ರಮದ ಬಗ್ಗೆ ಜನ ಜಾಗೃತಿ ಮೂಡಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಶ್ರಮಿಸುವಂತೆ ಕರೆ ನೀಡಿದರು.

ಬೃಹತ್ ಪ್ರತಿಭಟನೆ ನಂತರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಚುನಾವಣಾ ಆಯೋಗಕ್ಕೆ ತೆರಳಿ ಸಾಕ್ಷಾಧಾರ ಸಮೇತ ದೂರು ನೀಡಿದರು. ಆದರೆ, ರಾಹುಲ್‌ ಗಾಂಧಿ ಈ ನಿಯೋಗದಲ್ಲಿ ಇರಲಿಲ್ಲ.

15 ಸಾವಿರ ಕಾರ್ಯಕರ್ತರು ಭಾಗಿ

ಫ್ರೀಡಂ ಪಾರ್ಕ್‌ನಲ್ಲಿ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಹೆಸರಲ್ಲಿ ನಡೆದ ಪ್ರತಿಭಟನಾ ಸಮಾವೇಶಕ್ಕೆ ಬೆಳಗ್ಗೆಯಿಂದಲೇ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬಂದು ಸೇರಿದರು.

ವರಮಹಾಲಕ್ಷ್ಮಿಹಬ್ಬದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಸಂಚಾರ ದಟ್ಟಣೆಯೂ ಇರಲಿಲ್ಲ. ಇದರಿಂದ ಸುಗಮವಾಗಿ ಸಮಾವೇಶ ಸ್ಥಳ ಸೇರಿದ ಕಾರ್ಯಕರ್ತರ ಸಂಖ್ಯೆ ರಾಹುಲ್‌ ಗಾಂಧಿ ಆಗಮಿಸುವ ವೇಳೆಗೆ 10 ಸಾವಿರ ದಾಟಿತ್ತು. ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಸಮಾವೇಶ ಸ್ಥಳಕ್ಕೆ ಸುಮಾರು 11 ಗಂಟೆ ಸುಮಾರಿಗೆ ಆಗಮಿಸಿದ ರಾಹುಲ್ ಗಾಂಧಿ ವೇದಿಕೆ ಏರುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ವೇದಿಕೆಯಲ್ಲಿದ್ದ ಎಲ್ಲ ಪ್ರಮುಖ ನಾಯಕರು ಪರಸ್ಪರ ಕೈ ಹಿಡಿದು ಮೇಲೆತ್ತುವ ಮೂಲಕ ಒಗ್ಗಟ್ಟಿನ ಹೋರಾಟದ ರಣಕಹಳೆ ಮೊಳಗಿಸಿದರು.

ಇದಕ್ಕೆ ಸಮಾವೇಶದಲ್ಲಿ ಭಾಗಿಯಾಗಿದ್ದ ರಾಜ್ಯ ಸಚಿವ ಸಂಪುಟದ ಹಲವು ಸಚಿವರು, ಪಕ್ಷದ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು, ಪಕ್ಷದ ಮುಂಚೂಣಿ ನಾಯಕರು, ಪದಾಧಿಕಾರಿಗಳು ಸಾಥ್‌ ನೀಡಿದರು. ಸ್ಥಳಾವಕಾಶ ಸಿಗದೆ ಇನ್ನೂ ನಾಲ್ಕೈದು ಸಾವಿರ ಜನ ಪ್ರತಿಭಟನಾ ಸಮಾವೇಶದ ಹೊರಗೆ ಫ್ರೀಡಂ ಪಾರ್ಕ್‌ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ನಿಂತು ತಮ್ಮ ನಾಯಕರ ಭಾಷಣ ಕೇಳಿದ್ದು ಕಂಡುಬಂತು. ಪಕ್ಷದ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಪಕ್ಷದ ಬಾವುಟ, ರಾಹುಲ್‌ ಭಾವಚಿತ್ರ ಹಿಡಿದು ನಗರದ ವಿವಿಧ ರಸ್ತೆಗಳಲ್ಲಿ ಬೈಕ್‌ ರ್‍ಯಾಲಿ ಹಾಗೂ ಕಾಲ್ನಡಿಗೆ ಮೂಲಕ ಸಂಚರಿಸಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Read more Articles on