ಸಾರಾಂಶ
ಸೇನೆಗೆ ಅಲ್ಪಾವಧಿಗೆ ಯೋಧರ ನೇಮಕಕ್ಕೆ ಅವಕಾಶ ಮಾಡಿಕೊಡುವ ಅಗ್ನಿಪಥ್ ಯೋಜನೆ ಸೋಮವಾರ ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಲೋಕಸಭೆಯ ವಿಪಕ್ಷ ರಾಹುಲ್ ಗಾಂಧಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.
ನವದೆಹಲಿ: ಸೇನೆಗೆ ಅಲ್ಪಾವಧಿಗೆ ಯೋಧರ ನೇಮಕಕ್ಕೆ ಅವಕಾಶ ಮಾಡಿಕೊಡುವ ಅಗ್ನಿಪಥ್ ಯೋಜನೆ ಸೋಮವಾರ ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಲೋಕಸಭೆಯ ವಿಪಕ್ಷ ರಾಹುಲ್ ಗಾಂಧಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ‘ಅಗ್ನಿಪಥ್ ಯೋಜನೆ ದೇಶದ ಯೋಧರು ಮತ್ತು ಅವರ ಕುಟುಂಬ ಸದಸ್ಯರ ಆರ್ಥಿಕ ಭದ್ರತೆ ಹಾಗೂ ಗೌರವವನ್ನು ಲೂಟಿ ಮಾಡಿದೆ. ಈ ಯೋಜನೆ ಸರ್ಕಾರವು ಯುವ ಸಮುದಾಯ ಮತ್ತು ರೈತರ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ’ ಎಂದು ಟೀಕಿಸಿದರು.ಜೊತೆಗೆ, ‘ಅಗ್ನಿವೀರ್ ಯೋಧರು ಸಾವನ್ನಪ್ಪಿದರೆ ನನ್ನ ಪ್ರಕಾರ ಅವರು ಹುತಾತ್ಮರು. ಆದರೆ ಕೇಂದ್ರ ಅವರನ್ನು ಹುತಾತ್ಮರು ಎಂದು ಪರಿಗಣಿಸುವುದಿಲ್ಲ. ಅವರನ್ನು ಅಗ್ನಿವೀರರು ಎಂದು ಮಾತ್ರ ಕರೆಯುತ್ತಾರೆ. ಅವರ ಕುಟುಂಬಗಳಿಗೆ ಪಿಂಚಣಿ ಮತ್ತು ಪರಿಹಾರವನ್ನು ನೀಡಲ್ಲ. ಅಗ್ನಿಪಥ್ ಯೋಜನೆಯು ಯೋಧರನ್ನು ಕಾರ್ಮಿಕರಂತೆ ನೋಡಿಕೊಳ್ಳುತ್ತದೆ’ ಎಂದು ಆರೋಪಿಸಿದರು.
ರಾಹುಲ್ ಆರೋಪದ ವೇಳೆ ಎದ್ದು ನಿಂತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ‘ರಾಷ್ಟ್ರೀಯ ಭದ್ರತೆಯಂಥ ಸೂಕ್ಷ್ಮ ವಿಷಯ ಮತ್ತು ಅಗ್ನಿಪಥ ಯೋಜನೆಯ ಬಗ್ಗೆ ರಾಹುಲ್ ಗಾಂಧಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ತಪ್ಪು ಹೇಳಿಕೆಗಳಿಂದ ಸದನದ ಹಾದಿ ತಪ್ಪಿಸುತ್ತಿದ್ದಾರೆ. ದೇಶದ ಗಡಿಕಾಯುವ ವೇಳೆ ಇಲ್ಲವೇ ಯುದ್ಧ ಸಮಯದಲ್ಲಿ ಮಡಿದ ಅಗ್ನಿವೀರರ ಕುಟುಂಬಕ್ಕೆ ಸರ್ಕಾರ 1 ಕೋಟಿ ರು. ಪರಿಹಾರ ನೀಡುತ್ತದೆ. ಈ ವಿಷಯದಲ್ಲ ಯಾವುದೇ ತಪ್ಪು ಕಲ್ಪನೆಗಳಿಗೆ, ಸ್ಪೀಕರ್ ನನಗೆ ಅವಕಾಶ ನೀಡಿದಾಗ ಸ್ಪಷ್ಟನೆ ನೀಡುತ್ತೇನೆ’ ಎಂದು ತಿರುಗೇಟು ನೀಡಿದರು.