ಬಿಜೆಪಿ ಗೆದ್ದರೆ ಸಂವಿಧಾನ ಬದಲು: ರಾಹುಲ್‌

| Published : Apr 13 2024, 01:11 AM IST / Updated: Apr 13 2024, 04:15 AM IST

ಸಾರಾಂಶ

ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರ ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ಸಂಸದರು (ಕಾರವಾರ ಸಂಸದ ಅನಂತಕುಮಾರ ಹೆಗಡೆ) ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ತಿರುನಲ್ವೇಲಿ: ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರ ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ಸಂಸದರು (ಕಾರವಾರ ಸಂಸದ ಅನಂತಕುಮಾರ ಹೆಗಡೆ) ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ತಮಿಳುನಾಡಿನಲ್ಲಿ ತನ್ನ ಮೊದಲ ಚುನಾವಣಾ ಪ್ರಚಾರ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ದೇಶದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಿಜೆಪಿ ಕೆಲ ಸಂಸದರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಬೇಕೆಂದರೆ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂದರು.

ಮೋದಿ ಏಕಸ್ವಾಮ್ಯ ಅಧಿಕಾರಕ್ಕಾಗಿ ಹುನ್ನಾರ ನಡೆಸುತ್ತಿದ್ದಾರೆ. ಒಂದು ಕಡೆ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ಸಿದ್ಧಾಂತದ ಜೊತೆಗೆ ಸುಧಾರಣಾವಾದಿ ನಾಯಕ ಪೆರಿಯಾರ್ ಇ.ವಿ. ರಾಮಸಾಮಿಯಂತಹ ಪ್ರತಿಮೆಗಳಿಂದ ಪ್ರತಿಪಾದಿಸುತ್ತಿದ್ದರೆ, ಇನ್ನೊಂದು ಕಡೆ ಆರ್‌ಎಸ್‌ಎಸ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾಲ್ಪನಿಕ ತಾತ್ವಿಕತೆಯನ್ನು ಕಾಣುತ್ತಿದ್ದೇವೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ ಪಕ್ಷ ಸದಾ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಅದರ ಭಾಗವಾಗಿಯೇ ಭಾರತ್‌ ಜೋಡೊ ಯಾತ್ರೆಯನ್ನು ಕೈಗೊಂಡಿದ್ದೆವು. ಈ ಭಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಭಾರತದಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಸಲಿದೆ ಎಂದರು.

ದೇಶದಲ್ಲಿ ಬಿರುಗಾಳಿ ಎದ್ದಿದ್ದು, ನರೇಂದ್ರ ಮೋದಿ ಸರ್ಕಾರ ಪತನಗೊಳ್ಳಲಿದೆ. ಇದು ಮೋದಿ ಸರ್ಕಾರ ಅಲ್ಲ. ಅದಾನಿ ಸರ್ಕಾರ. ದೇಶದ ಎಲ್ಲ ಸರ್ಕಾರಿ ಸೊತ್ತುಗಳು ಅದಾನಿ ಪಾಲಾಗುತ್ತಿವೆ.

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಮುಖಂಡ