ಮಂಡ್ಯದಲ್ಲಿ ಇಂದು ರಾಹುಲ್ ಮೇನಿಯಾ

| Published : Apr 17 2024, 01:16 AM IST

ಸಾರಾಂಶ

ಮಂಡ್ಯ ವಿಶ್ವ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಲೋಕಸಭಾ ಚುನಾವಣೆಯ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ರಾಹುಲ್ ಗಾಂಧಿ ಅವರು ಅಭ್ಯರ್ಥಿ ವೆಂಕಟರಮಣೇಗೌಡರ ಪರ ಪ್ರಚಾರ ನಡೆಸಲಿದ್ದಾರೆ. ಇದಕ್ಕಾಗಿ ವಿವಿ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ೧ ಲಕ್ಷ ಜನರನ್ನು ಸೇರಿಸುವುದರೊಂದಿಗೆ ಶಕ್ತಿ ಪ್ರದರ್ಶಿಸುವುದಕ್ಕೆ ಕಾಂಗ್ರೆಸ್ಸಿಗರು ಭರದ ಸಿದ್ಧತೆ ನಡೆಸಿದ್ದಾರೆ. ಮಧ್ಯಾಹ್ನ ೩ ಗಂಟೆ ಸಮಯಕ್ಕೆ ಪ್ರಚಾರ ಮುಗಿಸಿ ಕೋಲಾರಕ್ಕೆ ತೆರಳಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಬುಧವಾರ (ಏ.೧೬) ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿ ಧೂಳೆಬ್ಬಿಸಿ ಹೋಗಿದ್ದಾಯ್ತು. ಅದಕ್ಕೆ ಪರ್‍ಯಾಯವಾಗಿ ಕಾಂಗ್ರೆಸ್ಸಿಗರು ರಾಹುಲ್ ಅವರನ್ನು ಮಂಡ್ಯಕ್ಕೆ ಕರೆತಂದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಮಂಡ್ಯ ಕ್ಷೇತ್ರದಿಂದ ಅಖಾಡಕ್ಕಿಳಿದಿರುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಟ್ಟಿಹಾಕುವುದಕ್ಕೆ ಕಾಂಗ್ರೆಸ್‌ನವರು ಶತಪ್ರಯತ್ನ ನಡೆಸುತ್ತಿದ್ದಾರೆ.

ಬುಧವಾರ ಬೆಳಗ್ಗೆ ನವ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಡಲಿರುವ ರಾಹುಲ್ ಗಾಂಧಿ ಮಧ್ಯಾಹ್ನ ೧ ಗಂಟೆಗೆ ಮೈಸೂರಿಗೆ ಬಂದಿಳಿಯುವರು. ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಹೊರಟು ೧.೩೦ರ ಸಮಯಕ್ಕೆ ನಗರದ ಪಿಇಟಿ ಕ್ರೀಡಾಂಗಣದಲ್ಲಿರುವ ಹೆಲಿಪಾಡ್‌ಗೆ ಬಂದಿಳಿಯುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ರಾಜ್ಯಸಭಾ ಸದಸ್ಯ ಕೆ.ಸಿ.ವೇಣುಗೋಪಾಲ್, ಸಚಿವರಾದ ಎನ್.ಚಲುವರಾಯಸ್ವಾಮಿ, ಕೃಷ್ಣಭೈರೇಗೌಡ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಪಾಲ್ಗೊಳ್ಳುವರು.

ಮಂಡ್ಯ ವಿಶ್ವ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಲೋಕಸಭಾ ಚುನಾವಣೆಯ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ರಾಹುಲ್ ಗಾಂಧಿ ಅವರು ಅಭ್ಯರ್ಥಿ ವೆಂಕಟರಮಣೇಗೌಡರ ಪರ ಪ್ರಚಾರ ನಡೆಸಲಿದ್ದಾರೆ. ಇದಕ್ಕಾಗಿ ವಿವಿ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ೧ ಲಕ್ಷ ಜನರನ್ನು ಸೇರಿಸುವುದರೊಂದಿಗೆ ಶಕ್ತಿ ಪ್ರದರ್ಶಿಸುವುದಕ್ಕೆ ಕಾಂಗ್ರೆಸ್ಸಿಗರು ಭರದ ಸಿದ್ಧತೆ ನಡೆಸಿದ್ದಾರೆ. ಮಧ್ಯಾಹ್ನ ೩ ಗಂಟೆ ಸಮಯಕ್ಕೆ ಪ್ರಚಾರ ಮುಗಿಸಿ ಕೋಲಾರಕ್ಕೆ ತೆರಳಲಿದ್ದಾರೆ.

ರಾಹುಲ್ ಆಗಮನದಿಂದ ರಣೋತ್ಸಾಹ:

ಭಾರತ್ ಜೋಡೋ ಯಾತ್ರೆ ವೇಳೆ ಮಂಡ್ಯಕ್ಕೆ ಆಗಮಿಸಿದ್ದ ರಾಹುಲ್‌ಗಾಂಧಿ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ತಾಲೂಕುಗಳಲ್ಲಿ ಸಂಚರಿಸಿ ಜಿಲ್ಲೆಯೊಳಗೆ ಸಂಚಲನ ಸೃಷ್ಟಿಸಿದ್ದರು. ಇದರ ಪರಿಣಾಮ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗುವಂತಾಯಿತು. ಜಿಲ್ಲೆಯೊಳಗೆ ಅಸ್ತಿತ್ವವೇ ಕಳೆದುಕೊಂಡಿದ್ದ ಕಾಂಗ್ರೆಸ್ ಮತ್ತೆ ಧೂಳಿನಿಂದ ಮೇಲೆದ್ದು ಬಂದಿತ್ತು. ಜೆಡಿಎಸ್ ನೆಲಕಚ್ಚುವಂತಾಗಿತ್ತು.

ಈ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿರುವುದು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಖಾಡ ಪ್ರವೇಶದಿಂದ ರಣಕಣ ರಂಗೇರಿಸಿಕೊಂಡಿದೆ. ನೆಲಕಚ್ಚಿರುವ ಜೆಡಿಎಸ್‌ನ್ನು ಮತ್ತೆ ಮೇಲೆಳದಂತೆ ತಡೆಯುವುದಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕರು, ಮುಖಂಡರು, ಕಾರ್ಯಕರ್ತರು ಶತಪ್ರಯತ್ನಕ್ಕಿಳಿದಿದ್ದಾರೆ. ಇದೀಗ ರಾಹುಲ್ ಆಗಮನದಿಂದ ಮುಖಂಡರು-ಕಾರ್ಯಕರ್ತರಿಗೆ ಇನ್ನಷ್ಟು ಉತ್ಸಾಹ-ಹುರುಪನ್ನು ತುಂಬಿದ್ದು, ಬದಲಾವಣೆಯ ಹೊಸ ಅಲೆ ಎಬ್ಬಿಸುವುದಕ್ಕೆ ಕಾಂಗ್ರೆಸ್‌ನವರು ಹರಸಾಹಸ ನಡೆಸುತ್ತಿದ್ದಾರೆ. ರಾಹುಲ್ ಪ್ರಚಾರ ಎಷ್ಟರಮಟ್ಟಿಗೆ ಕಾಂಗ್ರೆಸ್‌ಗೆ ಶಕ್ತಿ ತುಂಬಲಿದೆ ಎನ್ನುವುದು ಕುತೂಹಲಕ್ಕೂ ಕಾರಣವಾಗಿದೆ.

ಮೂರನೇ ಬಾರಿ ಮಂಡ್ಯಕ್ಕೆ:

ಕಳೆದ ಹತ್ತು ವರ್ಷಗಳಲ್ಲಿ ರಾಹುಲ್‌ಗಾಂಧಿ ಅವರು ಮೂರನೇ ಬಾರಿಗೆ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ೨೦೧೫ರ ಚುನಾವಣೆ ಸಮಯದಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಮ್ಯಾ ಪರ ರೋಡ್ ಶೋ ನಡೆಸಿ ಹೋಗಿದ್ದ ರಾಹುಲ್, ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಎರಡು ದಿನ ಮಂಡ್ಯದಲ್ಲಿ ಪಾದಯಾತ್ರೆ ನಡೆಸಿದ್ದರು. ಇದೀಗ ಮೂರನೇ ಬಾರಿಗೆ ಲೋಕಸಭಾ ಚುನಾವಣೆಯ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಆಗಮಿಸುತ್ತಿದ್ದಾರೆ.

ಎಚ್‌ಡಿಕೆ ಕಟ್ಟಿ ಹಾಕುವುದಕ್ಕೆ ಕಾಂಗ್ರೆಸ್ ಶತಪ್ರಯತ್ನ:

ಜೆಡಿಎಸ್-ಬಿಜೆಪಿಯವರು ನರೇಂದ್ರ ಮೋದಿ ಅವರು ಮೈಸೂರಿಗೆ ಕರೆತಂದು ಎನ್‌ಡಿಎ ಪರವಾದ ವಾತಾವರಣ ಸೃಷ್ಟಿಸಲು ಮುಂದಾದರೆ, ಈಗ ಕಾಂಗ್ರೆಸ್‌ನವರು ರಾಹುಲ್ ಅವರನ್ನು ಪ್ರಚಾರಕ್ಕೆ ಕರೆತಂದು ಕಾಂಗ್ರೆಸ್ ಪರವಾದ ಅಲೆ ಎಬ್ಬಿಸುವುದಕ್ಕೆ ಮುಂದಾಗಿದ್ದಾರೆ. ೨೦೧೯ರ ಚುನಾವಣೆ ಮಾದರಿಯಲ್ಲೇ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ ಮಾದರಿಯಲ್ಲೇ ೨೦೨೪ರಲ್ಲಿ ತಂದೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಲಿಸುವುದನ್ನೇ ಕಾಂಗ್ರೆಸ್‌ನವರು ಗುರಿಯಾಗಿಸಿಕೊಂಡಿದ್ದಾರೆ. ಅದಕ್ಕೆ ಬೇಕಾದ ಎಲ್ಲ ರೀತಿಯ ರಣತಂತ್ರಗಳನ್ನು ರೂಪಿಸಲಾಗುತ್ತಿದ್ದು, ರಾಹುಲ್ ಅವರನ್ನು ಪ್ರಚಾರಕ್ಕೆ ಕರೆತರುತ್ತಿರುವುದು ಚುನಾವಣಾ ತಂತ್ರಗಾರಿಕೆಯ ಭಾಗವಾಗಿಯೇ ಕಂಡುಬರುತ್ತಿದೆ.

ವೋಟ್‌ ಬ್ಯಾಂಕ್ ರಕ್ಷಣೆಗೆ ಹೋರಾಟ:

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಜೊತೆಗೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳನ್ನು ಜನರ ಮುಂದಿಟ್ಟು ಕಾಂಗ್ರೆಸ್ ಪರವಾಗಿ ಅವರನ್ನು ಸೆಳೆಯುವುದು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ-ಜೆಡಿಎಸ್ ತಲೆಎತ್ತದಂತೆ ತಡೆದು ಕಾಂಗ್ರೆಸ್ ನೆಲೆಗಟ್ಟನ್ನು ಭದ್ರಪಡಿಸಿಕೊಳ್ಳುವುದು. ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಹೊರಗಿನವರಿಗೆ ಎಂದೂ ಮಣೆಹಾಕಿಲ್ಲ. ಅದೇ ರೀತಿ ಈ ಬಾರಿಯೂ ಲೋಕಸಭಾ ಸದಸ್ಯ ಸ್ಥಾನ ಮಂಡ್ಯದವರಿಗೆ ಸಿಗುವಂತೆ ಮಾಡುವುದಕ್ಕೆ ಕಾಂಗ್ರೆಸ್ ಇನ್ನಿಲ್ಲದ ಹೋರಾಟ ನಡೆಸುತ್ತಿದೆ. ಜೊತೆಗೆ ಜಿಲ್ಲೆಯಲ್ಲಿರುವ ಕಾಂಗ್ರೆಸ್ ವೋಟ್ ಬ್ಯಾಂಕ್ ರಕ್ಷಣೆ ಮಾಡಿಕೊಳ್ಳುವುದಕ್ಕೆ ಸಂಘಟಿತ ಪ್ರಯತ್ನಕ್ಕಿಳಿದಿದೆ.