ಸಾರಾಂಶ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಉದ್ಯೋಗ ಹಕ್ಕು ನೀಡಲಾಗುವುದು. 30 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಪಿಟಿಐ ಜೈಪುರ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಉದ್ಯೋಗ ಹಕ್ಕು ನೀಡಲಾಗುವುದು. 30 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ 1 ಲಕ್ಷ ರು. ಜತೆಗೆ 1 ವರ್ಷ ಅಪ್ರೆಂಟಿಸ್‌ಶಿಪ್ ಕೊಡಿಸಲಾಗುವುದು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆ ಮಧ್ಯಪ್ರದೇಶದಿಂದ ರಾಜಸ್ಥಾನದಿಂದ ಬಾಂಸ್‌ವಾಡ ಪ್ರವೇಶಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಿರುದ್ಯೋಗ ಹೋಗಲಾಡಿಸಲು ಪದವಿ ಮುಗಿಸಿದವರಿಗೆ ಕಂಪನಿಗಳಲ್ಲಿ ಅಪ್ರೆಂಟಿಸ್ ತರಬೇತಿ ಕೊಡಿಸಲಾಗುವುದು. ಈ ವೇಳೆ ಅವರಿಗೆ 1 ವರ್ಷ ಅಪ್ರೆಂಟಿಸ್ ವೇತನ ನೀಡಲಾಗುವುದು ಎಂದರು.
ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದನ್ನು ತಪ್ಪಿಸಲು ಕಾನೂನು ರೂಪಿಸಲಾಗುವುದು.
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನಡಿ ಖಾತ್ರಿ ನೀಡಲಾಗುವುದು. ಗಿಗ್ (ಸ್ವಿಗ್ಗಿ, ಝೊಮೇಟೋದಂಥ ನೌಕರರು) ನೌಕರರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುವುದು. ಸ್ಟಾರ್ಟಪ್ ಕಂಪನಿಗಳಿಗೆ 5000 ಕೋಟಿ ರು. ನಿಧಿ ಮೀಸಲಿಡಲಾಗುವುದು ಎಂದರು.
ಏನಿದು ಅಪ್ರೆಂಟಿಸ್‌ಶಿಪ್ ಯೋಜನೆ?
ಹಾಲಿ 1961ರ ಅಪ್ರೆಂಟಿಸ್‌ಶಿಪ್ ಯೋಜನೆ ಜಾರಿಯಲ್ಲಿದ್ದು, ಇದು 45 ಸಾವಿರ ಕಂಪನಿಗಳನ್ನು ಒಳಗೊಂಡಿದೆ. ಇದನ್ನು 10 ಲಕ್ಷ ಖಾಸಗಿ/ಸರ್ಕಾರಿ ಕಂಪನಿಗಳಿಗೆ ವಿಸ್ತರಿಸಲಾಗುವುದು.
ಇಲ್ಲಿ 1 ವರ್ಷ ಅಪ್ರೆಂಟಿಸ್ ತರಬೇತಿಗೆ ಯುವಕರನ್ನು ನಿಯೋಜಿಸಲಾಗುವುದು. ಯುವಕರಿಗೆ ನೀಡುವ 1 ಲಕ್ಷ ರು. ಅಪ್ರೆಂಟಿಸ್ ವೇತನವನ್ನು ಹೆಚ್ಚಾಗಿ ಸರ್ಕಾರವೇ ಭರಿಸಲಿದೆ. ಮಿಕ್ಕದ್ದನ್ನು ಖಾಸಗಿ ಕಂಪನಿಗಳು ಭರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ.