ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ನಗರ ಸ್ವಚ್ಛತೆ ಕಾಪಾಡಲು ರೈಲ್ವೆ ಇಲಾಖೆ ಹಾಗೂ ನಗರಪಾಲಿಕೆಯ ಎಲ್ಲಾ ಆಯುಕ್ತರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ಶೀಘ್ರ ರಚಿಸಲಾಗುವುದು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಶನಿವಾರ ರೈಲ್ವೆ ಇಲಾಖೆ ಜಾಗದಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಏರ್ಪಡಿಸಿದ್ದ ರೈಲ್ವೆ ಇಲಾಖೆಯ ವಿಭಾಗೀಯ ವ್ಯವಸ್ಥಾಪಕರು, ಜಿಬಿಎ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್, ಐದೂ ಪಾಲಿಕೆಗಳ ಆಯುಕ್ತರನ್ನು ಒಳಗೊಂಡ ಸಭೆ ನಂತರ ಮಾಧ್ಯಮದ ಜೊತೆ ಮಾತನಾಡಿ, ಬೆಂಗಳೂರು ನಗರದ ಸುತ್ತಮುತ್ತ 134 ರೈಲ್ವೆ ನಿಲ್ದಾಣಗಳಿವೆ. ಪ್ರತಿದಿನ 300 ರೈಲುಗಳು ಬಂದು ಹೋಗುತ್ತವೆ. ಇಲ್ಲಿ ಯಾರೂ ಕಸ ತಂದು ಸುರಿಯುತ್ತಾರೆ ಎಂಬುದು ಗೊತ್ತಿಲ್ಲ. ಇದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದು ತಿಳಿಯದಾಗಿತ್ತು. ಈಗ ಸಚಿವ ಕೃಷ್ಣ ಬೈರೇಗೌಡ ಅವರು ಆಗಸ್ಟ್ 1ರಿಂದ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನಕ್ಕೆ ರೈಲ್ವೆ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ರೈಲ್ವೆ ಇಲಾಖೆಯಲ್ಲಿ ಶಾಶ್ವತವಾಗಿ ತ್ಯಾಜ್ಯ ನಿರ್ವಹಣೆಗಾಗಿ ರಚಿಸುವ ರೈಲ್ವೆ ಸಮನ್ವಯ ಸಮಿತಿಯಲ್ಲಿ ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳೂ ಇರುತ್ತಾರೆ. ಅವರೊಂದಿಗೆ ಚರ್ಚಿಸಿ ನಗರದ ಸ್ವಚ್ಛತೆ ಕಾಪಾಡಲು ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಪ್ಲಾಸ್ಟಿಕ್ ಬಾಟಲಿ ಹಾಕಿ ಹಣ ಪಡೆಯಬಹುದು:

ರೈಲ್ವೆ ನಿಲ್ದಾಣಕ್ಕೆ ಪ್ಲಾಸ್ಟಿಕ್ ಬಾಟಲಿಗಳನ್ನು ತರುವವರಿಗಾಗಿ ಯಂತ್ರಗಳನ್ನು ಸ್ಥಾಪಿಸಲಾಗುವುದು. ಆ ಯಂತ್ರಗಳಲ್ಲಿ ಪ್ಲಾಸ್ಟಿಕ್ ಹಾಕಿದರೆ ಅದು ನಿಗದಿಪಡಿಸಿರುವಷ್ಟು ಹಣ ನೀಡಲಿದೆ. ಇಂತಹ 5 ಯಂತ್ರಗಳನ್ನು ಶೀಘ್ರದಲ್ಲಿಯೇ ನಗರದ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಗುವುದು. ರೈಲ್ವೆ ನಿಲ್ದಾಣಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವಂತಿಲ್ಲ. ಬಿಸಾಡಿದರೆ ನಿರ್ಧಿಷ್ಟ ದಂಡ ತೆರಬೇಕಾಗುತ್ತದೆ. ರೈಲ್ವೆ ಇಲಾಖೆಯಲ್ಲಿ ಶೌಚಾಲಯ ಸಮಸ್ಯೆಯನ್ನು ನಿರ್ಮೂಲನೆ ಮಾಡಲು 2014ರಿಂದ ಇಲ್ಲಿಯವರೆಗೆ 3,63,990 ಬಯೋಟಾಯ್ಲೆಟ್ ನಿರ್ಮಾಣ ಮಾಡಲಾಗಿದೆ ಎಂದರು.


ನಗರದ ಸುತ್ತಮುತ್ತ ರೈಲ್ವೆ ಪರಿಸರ ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚು ಮಹತ್ವ ನೀಡಲಾಗುವುದು. ಈಗಾಗಲೆ ಸಭೆಯಲ್ಲಿ ಸಚಿವ ಕೃಷ್ಣಭೈರಗೌಡ ಅವರು ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿ ಆದಷ್ಟು ಶೀಘ್ರ ಪರಿಹಾರ ಒದಗಿಸಲಾಗುವುದು. ನನ್ನ ಅವಧಿಯಲ್ಲಿ ಯಾವುದೇ ಕಡತ ನಿಧಾನಗತಿಯಲ್ಲಿ ಹೋಗಲು ಬಿಡುವುದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್, ಉತ್ತರ ಪಾಲಿಕೆಯ ಪೊಮ್ಮಲ ಸುನಿಲ್ ಕುಮಾರ್, ಪಶ್ಚಿಮ ಪಾಲಿಕೆಯ ಡಾ.ರಾಜೇಂದ್ರ, ಡಿಆರ್‌ಎಂ ಅಷುತೋಶ್ ಕುಮಾರ್ ಸಿಂಗ್‌ ಉಪಸ್ಥಿತರಿದ್ದರು.