ಲಿಂಗಾಯತ, ಮುಸ್ಲಿಂ, ದಲಿತ ಸಿಎಂ ಮಾಡಿ : ರಾಜಣ್ಣ

| Published : Jun 24 2024, 01:34 AM IST / Updated: Jun 24 2024, 03:32 AM IST

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಲಿಂಗಾಯತ, ದಲಿತ, ಮುಸ್ಲಿಂ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಸಹಕಾರಿ ಸಚಿವ ಕೆ.ಎನ್‌.ರಾಜಣ್ಣ ಬಹಿರಂಗ ಆಗ್ರಹ ಮಾಡಿದ್ದಾರೆ. ಇದರಿಂದ ಪಕ್ಷಕ್ಕೆ ಆ ಸಮುದಾಯಗಳ ವಿಶ್ವಾಸ ಗಳಿಸಲು ಅನುಕೂಲವಾಗುತ್ತದೆ ಎಂದೂ ಪ್ರತಿಪಾದಿಸಿದ್ದಾರೆ.

 ಬಾಗಲಕೋಟೆ :  ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಲಿಂಗಾಯತ, ದಲಿತ, ಮುಸ್ಲಿಂ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಸಹಕಾರಿ ಸಚಿವ ಕೆ.ಎನ್‌.ರಾಜಣ್ಣ ಬಹಿರಂಗ ಆಗ್ರಹ ಮಾಡಿದ್ದಾರೆ. ಇದರಿಂದ ಪಕ್ಷಕ್ಕೆ ಆ ಸಮುದಾಯಗಳ ವಿಶ್ವಾಸ ಗಳಿಸಲು ಅನುಕೂಲವಾಗುತ್ತದೆ ಎಂದೂ ಪ್ರತಿಪಾದಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಅಲ್ಲ, ಮುಂದೆ ಯಾವ ಚುನಾವಣೆಯಲ್ಲಿ ನಿಲ್ಲುವವನೂ ಅಲ್ಲ. ಲಿಂಗಾಯತ, ದಲಿತ, ಮುಸ್ಲಿಂ ಸಮುದಾಯದವರಿಗೆ ಅಧಿಕಾರ ನೀಡಿದಾಗ ಆ ಸಮುದಾಯದ ಜನರಿಗೆ ಪಕ್ಷದ ಮೇಲೆ ಪ್ರೀತಿ, ವಿಶ್ವಾಸ ಮೂಡುತ್ತದೆ. ಈ ಕಾರಣಕ್ಕಾಗಿ ನಾನು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಕುರಿತು ಪ್ರತಿಪಾದನೆ ಮಾಡಿದ್ದೇನೆಯೇ ಹೊರತು ಬೇರೆ ಯಾವ ಉದ್ದೇಶದಿಂದಲೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಉಪ ಮುಖ್ಯಮಂತ್ರಿ ಹುದ್ದೆ ಅಂದಾಕ್ಷಣ ವಿಶೇಷ ಅಧಿಕಾರಗಳೇನೂ ಇರುವುದಿಲ್ಲ. ಆದರೆ ಅಂಥದ್ದೊಂದು ಹುದ್ದೆಯಿಂದ ಆಯಾ ಸಮುದಾಯದ ಜನರಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ದೊರತಿದೆ ಎಂಬ ಸಮಾಧಾನ ಇರುತ್ತದೆ. ಆ ಮೂಲಕ ಈ ಸಮುದಾಯಗಳ ಪ್ರೀತಿಗಳಿಸಲು ಉಪ ಮುಖ್ಯಮಂತ್ರಿ ಹುದ್ದೆ ಉತ್ತಮ ಸಾಧನವೂ ಆಗುತ್ತದೆ ಎಂಬುದು ನನ್ನ ಭಾವನೆ. ಇದಕ್ಕೆ ಬಹುತೇಕ ಸಚಿವರ ಸಹಮತವೂ ಇದೆ. ಈ ಹಿಂದೆ ಬಿಜೆಪಿಯಲ್ಲಿ ಈ ರೀತಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದ ಉದಾಹರಣೆಗಳಿವೆ. ಆದರೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ಸ್ಪಷ್ಟಪಡಿಸಿದರು.