ರಾಜ್ಯೋತ್ಸವ ರಾಜಕೀಯ ವೇದಿಕೆ ಆಗದಿರಲಿ

| Published : Nov 05 2024, 12:41 AM IST

ಸಾರಾಂಶ

ಸಿ.ಅರ್ ಎಫ್‌ ಫಂಡ್‌ ನಲ್ಲಿ ನಿರ್ಮಿಸಬೇಕಾಗಿದ್ದ ಮಾಲೂರು ದೊಡ್ಡ ಕೆರೆ ಅಭಿವೃದ್ಧಿಗೆ 34 ಕೋಟಿ ಹಣವನ್ನು ಪ್ರಾಧಿಕಾರದ ಹಣ ಬಳಸುವುದು ಎಷ್ಟು ಸರಿಯಲ್ಲ. ಆ ಹಣವನ್ನು ಪಟ್ಟಣದಲ್ಲಿ ಮೂಲಭೌತ ಸೌಕರ್ಯ ಕಾಣದ ಬಡಾವಣೆಗಳ ಅಭಿವೃದ್ಧಿಗೆ ಹಾಗೂ ಸೌಲಭ್ಯ ಕಲ್ಪಿಸಲು ಬಳಸಬಹುದಾಗಿತ್ತು.

ಕನ್ನಡಪ್ರಭ ವಾರ್ತೆ ಮಾಲೂರು

ಕನ್ನಡ, ಸಂಸ್ಕೃತಿಗಳ ಅವನತಿ-ಉನ್ನತಿ ಬಗ್ಗೆ ಬೆಳಕು ಚೆಲ್ಲಬೇಕಾದ ರಾಜ್ಯೋತ್ಸವದ ವೇದಿಕೆಯನ್ನು ಶಾಸಕರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಬೇಸರ ತರಿಸಿದ್ದು, ರಾಜಕಾರಣವನ್ನು ರಾಜಕೀಯ ವೇದಿಕೆಯಲ್ಲಿ ಮಾತಾನಾಡಿದರೆ ಉತ್ತಮ ಎಂದು ಎಸ್‌ಜೆಪಿ ಅಧ್ಯಕ್ಷ ಹೂಡಿ ವಿಜಯಕುಮಾರ್‌ ಸಲಹೆ ನೀಡಿದರು.

ಅವರು ಇಲ್ಲಿನ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಇಡೀ ವರ್ಷ ರಾಜಕೀಯಕ್ಕಾಗಿ ವೇದಿಕೆಗಳು ಸಿದ್ದವಾಗಿರುತ್ತವೆ. ಆದರೆ ಭಾಷೆ.ಸಂಸ್ಕೃತಿಯನ್ನು ವಿಜೃಂಭವಿಸುವ ನಾಡ ಹಬ್ಬ ವರ್ಷಕ್ಕೊಮ್ಮೆ ಬರುತ್ತದೆ. ಅದನ್ನು ಕನ್ನಡ ನಾಡು ನುಡಿ ಬೆಳೆಸುವಂತಹ ಮಾತುಗಳಿಗೆ ಸೀಮಿತಗೊಳಿಸಬೇಕು ಎಂದರು.

ಪ್ರಾಧಿಕಾರದ ಹಣ ಬಳಸಬೇಡಿ

ನಾನು ಅಭಿವೃದ್ಧಿ ವಿರುದ್ಧ ಅಲ್ಲ. ಆದರೆ ಸಿ.ಅರ್ ಎಫ್‌ ಫಂಡ್‌ ನಲ್ಲಿ ನಿರ್ಮಿಸಬೇಕಾಗಿದ್ದ ಮಾಲೂರು ದೊಡ್ಡ ಕೆರೆ ಅಭಿವೃದ್ಧಿಗೆ 34 ಕೋಟಿ ಹಣವನ್ನು ಪ್ರಾಧಿಕಾರದ ಹಣ ಬಳಸುವುದು ಎಷ್ಟು ಸರಿ. ಆ ಹಣವನ್ನು ಪಟ್ಟಣದಲ್ಲಿ ಮೂಲಭೌತ ಸೌಕರ್ಯ ಕಾಣದ ಬಡಾವಣೆಯ ಅಭಿವೃದ್ಧಿಗೆ ಬಳಸಬಹುದಾಗಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಶಾಸಕರು ಹಾದಿ ಬೀದಿಯಲ್ಲಿ ಹೋಗುವವರಿಗೆ ಉತ್ತರಿಸುವುದಿಲ್ಲ ಎಂಬ ಉಡಾಫೆ ಮಾತುಗಳನ್ನಾಡುತ್ತಾರೆ ಎಂದರು.

ರಂಗ ಮಂದಿರ ಅಭಿವೃದ್ಧಿಗೆ ತಾವು ಐದು ಲಕ್ಷ ರು.ನೀಡುವುದಾಗಿ ಘೋಷಿಸಿದರು. ಹೂಡಿ ಅವರು ಇಲ್ಲಿನ ಕೈಗಾರಿಕೆಗಳಲ್ಲಿ ಅಷ್ಟು ಇಷ್ಟು ಕನ್ನಡಿಗರಿಗೆ ಕೆಲಸ ಸಿಗಬೇಕಾದರೆ ಇಲ್ಲಿನ ಕನ್ನಡ ಪರ ಸಂಘಟನೆಗಳ ಹೋರಾಟವೇ ಕಾರಣ ಹೊರತು ಶಾಸಕರ ಆಸಕ್ತಿ ಏನೂ ಇಲ್ಲ. ಇನ್ನಾದರೂ ಸ್ಥಳೀಯ ಶಾಸಕರು ಕೈಗಾರಿಕಾ ಮಾಲೀಕರೂಡನೆ ಸಭೆ ನಡೆಸಿ ಸ್ಥಳೀಕರಿಗೆ ಹೆಚ್ಚು ಉದ್ಯೊಗಗಳು ಸಿಗುವಂತೆ ಮಾಡಲಿ ಎಂದರು.

ಸಾಧಕರಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಟು ಕು.ಆಶ್ವಿನಿ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.ಕಾಮಿಡಿ ಕಿಲಾಡಿಯ ಪ್ರವೀಣ್‌ ಗಸ್ತಿ,ರಾಘವೇಂದ್ರ-ದೀಪಿಕ ತಂಡದವರಿಂದ ಮಿಮಿಕ್ರಿ-ಹಾಸ್ಯ ಪ್ರಸಂಗಗಳು ಪ್ರದರ್ಶನಗೊಂಡವು.

ಒಕ್ಕೂಟ ಅಧ್ಯಕ್ಷ ಎಂ.ವಿ.ಹನುಮಂತಯ್ಯ ,ಸ್ವಾ.ಜ.ಪ ಹಿರಿಯ ಮುಖಂಡ ದೇವರಾಜ ರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿ.ಆರ್.ವೆಂಕಟೇಶ್‌, ಕೆ.ಗೋಪಾಲ್‌ ಗೌಡ,ಪುರಸಭೆ ಸದಸ್ಯ ರಾಮಮೂರ್ತಿ, ಭಾನುತೇಜಾ ಇನ್ನಿತರರು ಇದ್ದರು.