ರವಿ vs ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕೇಸ್‌ ನೈತಿಕ ಸಮಿತಿಗೆ: ಸಭಾಪತಿ ಬಸವರಾಜ ಹೊರಟ್ಟಿ

| N/A | Published : Mar 02 2025, 11:21 AM IST

Basavaraj Horatti

ಸಾರಾಂಶ

ವಿಧಾನಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕುರಿತು ಸದಸ್ಯ ಸಿ.ಟಿ.ರವಿ ನೀಡಿದ ಆಕ್ಷೇಪಾರ್ಹ ಹೇಳಿಕೆ ಪ್ರಕರಣವನ್ನು ವಿಧಾನಪರಿಷತ್‌ ನೈತಿಕ ಸಮಿತಿಗೆ ವಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

 ಬೆಂಗಳೂರು : ವಿಧಾನಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕುರಿತು ಸದಸ್ಯ ಸಿ.ಟಿ.ರವಿ ನೀಡಿದ ಆಕ್ಷೇಪಾರ್ಹ ಹೇಳಿಕೆ ಪ್ರಕರಣವನ್ನು ವಿಧಾನಪರಿಷತ್‌ ನೈತಿಕ ಸಮಿತಿಗೆ ವಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಇಬ್ಬರ ನಡುವಿನ ಗಲಾಟೆ ವಿಚಾರವನ್ನು ಅಲ್ಲೇ ಮುಕ್ತಾಯಗೊಳಿಸಲಾಗಿತ್ತು. ಆದರೆ, ಪ್ರತ್ಯೇಕವಾಗಿ ಇಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಅರಿಯಲು ನೈತಿಕ ಸಮಿತಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಸಮಿತಿಗೆ ತಿಳಿಸಲಾಗಿದೆ. ಅಧಿವೇಶನದಲ್ಲಿ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಪ್ರಕರಣವನ್ನು ಅಧಿವೇಶನದಲ್ಲಿ ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಪಿ.ಎಚ್.ಪೂಜಾರ್ ಅಧ್ಯಕ್ಷತೆಯ ನೈತಿಕ ಸಮಿತಿ ನೀಡುವ ವರದಿಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಈ ಮೊದಲು ನೈತಿಕ ಸಮಿತಿಗೆ ಸಿ.ಟಿ.ರವಿ ಅಧ್ಯಕ್ಷರಾಗಿದ್ದರು. ಘಟನೆಯಾದ ತಕ್ಷಣ ಅವರನ್ನು ಬದಲಾವಣೆ ಮಾಡಿ ಪಿ.ಎಚ್.ಪೂಜಾರ್ ಅವರನ್ನು ನೇಮಿಸಲಾಗಿದೆ. ಪೂಜಾರ್‌ ನೇತೃತ್ವದಲ್ಲಿ ಸಮಿತಿಯು ಪ್ರಕರಣ ಕುರಿತು ಅಧ್ಯಯನ ನಡೆಸಲಿದೆ ಎಂದು ಹೇಳಿದರು.

ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ರಾಜೀನಾಮೆ:

ಸದನದಲ್ಲಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ತಕ್ಷಣ ಸಭಾಪತಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ವಿಧಾನಪರಿಷತ್‌ಗೆ ಆಡಳಿತರೂಢ ಕಾಂಗ್ರೆಸ್‌ ನಾಲ್ವರನ್ನು ನಾಮಕರಣ ಮಾಡಿದರೆ ಬಹುಮತ ಪಡೆದುಕೊಳ್ಳಲಿದೆ. ಒಂದು ವೇಳೆ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದಕ್ಕೆ ಕಾರಣ ಪಡೆದು ರಾಜೀನಾಮೆ ನೀಡುತ್ತೇನೆ. ತಮಗೆ ಯಾವುದೇ ಅಧಿಕಾರದ ವ್ಯಾಮೋಹ ಇಲ್ಲ ಎಂದು ಹೇಳಿದರು.

ಸಾಮಾನ್ಯ ಕುಟುಂಬದಿಂದ ಬಂದು ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ವಿಧಾನಪರಿಷತ್‌ ಸದಸ್ಯನಾಗಿ, ಸಚಿವನಾಗಿ, ಸಭಾಪತಿಯಂಥ ಉನ್ನತ ಹುದ್ದೆಯಲ್ಲಿದ್ದೇನೆ. ಈ ಬಗ್ಗೆ ತೃಪ್ತಿ ಇದೆ. ಶಿಕ್ಷಕನಾಗಿ ಈ ಹುದ್ದೆಗೆ ಬರುವುದು ಸುಲಭವಲ್ಲ. ಉತ್ತಮವಾಗಿ ಕೆಲಸ ಮಾಡಿದ್ದೇನೆ ಎಂಬ ಭಾವನೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.