ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಗುಡುಗಿದ್ದಾರೆ.
‘ಯಡಿಯೂರಪ್ಪ ಮತ್ತು ಮಕ್ಕಳು ಮೋಸ ಮಾಡಿದ್ದಾರೆ. ನನ್ನನ್ನೂ ಸೇರಿದಂತೆ ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್, ಡಿ.ವಿ.ಸದಾನಂದಗೌಡ, ಪ್ರತಾಪ್ ಸಿಂಹ ಮತ್ತಿತರ ಅನೇಕರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ, ನೊಂದ ಕಾರ್ಯಕರ್ತರ ಧ್ವನಿಯಾಗಿ ನಾನು ಚುನಾವಣೆಗೆ ನಿಲ್ಲುತ್ತೇನೆ’ ಎಂದು ಈಶ್ವರಪ್ಪ ಘೋಷಿಸಿದ್ದಾರೆ.
ಗುರುವಾರ ಬೆಂಗಳೂರಿಗೆ ಆಗಮಿಸಿ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಎಂಎಲ್‌ಎ, ಎಂಪಿ, ಎಂಎಲ್‌ಸಿ ಆಗಬೇಕು ಎಂದು ಚುನಾವಣೆಗೆ ಸ್ಪರ್ಧಿಸ್ತಿಲ್ಲ. ಈ ವ್ಯವಸ್ಥೆ ಇದೆಯಲ್ಲ, ಕರ್ನಾಟಕದಲ್ಲಿ. ಕಾರ್ಯಕರ್ತರಿಗೆ ಮೋಸ ಮಾಡುವ ವ್ಯವಸ್ಥೆ ಇದೆಯಲ್ಲ, ಇಷ್ಟು ದೊಡ್ಡ ಸಂಘಟನೆ ಅಪ್ಪ-ಮಕ್ಕಳ ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರಲ್ಲ, ಅವರು ಹೇಳಿದಂಗೆ ನಡೆಯುತ್ತಿದೆಯಲ್ಲ, ಇದರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂಬುದು ನೊಂದ ಕಾರ್ಯಕರ್ತರ ಅಭಿಪ್ರಾಯ. ಅವರ ಧ್ವನಿಯಾಗಿ ಚುನಾವಣೆಗೆ ನಿಲ್ಲುತ್ತೇನೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆ ಲೋಕಸಭಾ ಚುನಾವಣೆಗೆ ನಾನು ನಿಲ್ಲಲೇಬೇಕು ಎಂದು ಎಲ್ಲಾ ಸಮಾಜ ಪ್ರಮುಖರು ಒತ್ತಾಯ ಮಾಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಯಡಿಯೂರಪ್ಪ ಮಕ್ಕಳು ನಿಮಗೆ ಅನ್ಯಾಯ ಮಾಡಿದ್ದಾರೆ.
ನಿಮ್ಮ ಮಗ ಕಾಂತೇಶ್‌ನಿಗೆ ಟಿಕೆಟ್ ಕೊಡ್ತೀನಿ ಎಂದು ಹೇಳಿದ್ದರು. ಜತೆಗೆ ಹಾವೇರಿ ಕ್ಷೇತ್ರದಲ್ಲಿ ಓಡಾಡಿ ಗೆಲ್ಲಿಸುತ್ತೇನೆ ಎಂದಿದ್ದರು. ಈಗ ಮೋಸ ಮಾಡಿದ್ದಾರೆ. ನೊಂದ ಕಾರ್ಯಕರ್ತರ ಧ್ವನಿಯಾಗಿ ಸ್ಪರ್ಧೆ ಮಾಡಬೇಕು ಎಂಬುದು ಎಲ್ಲರ ಅಭಿಪ್ರಾಯ ಎಂದು ವಿವರಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಅಭಿಯಾನ ನಡೆಯಿತು. ಅಲ್ಲಿ ವಿರೋಧ ನಡೆದಂತೆ ಎಲ್ಲೂ ನಡೆದಿಲ್ಲ.
ಅಂತಹ ಶೋಭಾಗೆ ಚಿಕ್ಕಮಗಳೂರು ತಪ್ಪಿಸಿ, ಸಾಮಾನ್ಯ ಜನರು ಸದಾನಂದಗೌಡರೇ ಅಭ್ಯರ್ಥಿಯಾಗಬೇಕು ಎನ್ನುತ್ತಿರುವ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ನೀಡಿದರು.
ಬೆಂಗಳೂರು ಉತ್ತರಕ್ಕೆ ಯಾಕೆ ಕರೆದುಕೊಂಡು ಬಂದರು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.ಜನಕ್ಕೆ, ಕಾರ್ಯಕರ್ತರು ಬೇಡ ಎನ್ನುವ ಜಾಗದಲ್ಲಿ ತಮಗೆ ಬೇಕಾದವರನ್ನು ಹಾಕಿಕೊಳ್ಳಲು ಇವರಿಗೆ ಶಕ್ತಿ ಇದೆ.
ನಾನು ಸುಮಾರು 40 ವರ್ಷ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಎಂದಿಗೂ ಸಂಘಟನೆ ವಿರುದ್ಧ ಹೋಗಿಲ್ಲ. ರಾಯಣ್ಣ ಬ್ರಿಗೇಡ್ ಮಾಡಿದ್ದೇವೆ. ಕೂಡಲಸಂಗಮದಲ್ಲಿ ಲಕ್ಷಾಂತರ ಜನ ಸೇರಿದ್ದರು. ಇವರ ಕಣ್ಣು ಯಾಕೆ ಉರಿಯಾಯಿತೋ ಗೊತ್ತಿಲ್ಲ.
ಅಮಿತ್ ಶಾ ಜತೆ ಮಾತನಾಡಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸುವಂತೆ ಹೇಳಿಸಿದರು. ದೆಹಲಿಯಲ್ಲಿ ಕರೆದು ಸಭೆ ಮಾಡಿ ನಿಲ್ಲಿಸುವಂತೆ ಹೇಳಿದಾಗ ನಿಲ್ಲಿಸಿದ್ದೆ. ಇವತ್ತು ಅದು ಮುಂದುವರಿದಿದ್ದರೆ ಹಿಂದುಳಿದ ವರ್ಗ, ದಲಿತರ ದೊಡ್ಡ ಸಂಘಟನೆಯಾಗುತ್ತಿತ್ತು ಎಂದು ತೀಕ್ಷ್ಣ ವಾಗಿ ಹೇಳಿದರು.
ದೆಹಲಿಗೆ ಕರೆದುಕೊಂಡು ಹೋಗಿ ಅಮಿತ್ ಶಾ ಬಳಿ ಟಿಕೆಟ್‌ಗಾಗಿ ಮಾತನಾಡುತ್ತೇನೆ ಎಂದಿದ್ದ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಶೋಭಾ ಕರಂದ್ಲಾಜೆ ಅವರು ದೆಹಲಿಗೆ ಹೋಗಿ ಅಮಿತ್ ಶಾ, ಮೋದಿ, ನಡ್ಡಾ ಅವರನ್ನು ಕೇಳಿದ್ದರೇ? ಅವರ ಪರವಾಗಿ ಯಡಿಯೂರಪ್ಪ ಬ್ಯಾಟಿಂಗ್ ಮಾಡಿದ್ದರಲ್ಲ.
ದೆಹಲಿಗೆ ಬಂದು ಕುಳಿತುಕೋ ಎಂದು ಶೋಭಾಗೆ ಹೇಳಬೇಕಿತ್ತು. ಇವರಿಗೆ ಶೋಭಾಗೆ ಹಟ ಹಿಡಿಯಲು ಆಗುತ್ತದೆ. ಕಾಂತೇಶ್‌ಗೆ ಹಟ ಯಾಕೆ ಹಿಡಿಯಲು ಆಗುವುದಿಲ್ಲ.
ನಾನು ಯಡಿಯೂರಪ್ಪ ಅವರನ್ನು ನಂಬಿದ್ದೆ. ಇಲ್ಲದಿದ್ದರೆ ವರಿಷ್ಠರನ್ನೇ ಕೇಳುತ್ತಿದ್ದೆ ಎಂದರು.ಇದಕ್ಕೂ ಮೊದಲೂ ಈಶ್ವರಪ್ಪ ಅವರ ನಿವಾಸಕ್ಕೆ ಸಿ.ಟಿ.ರವಿ, ಸದಾನಂದಗೌಡ ಅವರು ಭೇಟಿ ನೀಡಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರು.
ಬಿಎಸ್‌ವೈ, ಮಕ್ಕಳು ಮೋಸ ಮಾಡಿದ್ದಾರೆ ನಾನು ಯಡಿಯೂರಪ್ಪ ಅವರನ್ನು ನಂಬಿದ್ದೆ. ಆದರೆ ಬಿಎಸ್‌ವೈ ಹಾಗೂ ಅವರ ಮಕ್ಕಳು ಮೋಸ ಮಾಡಿದ್ದಾರೆ. ಅನೇಕರಿಗೆ ಅನ್ಯಾಯ ಮಾಡಿದ್ದಾರೆ.ಕೆ.ಎಸ್. ಈಶ್ವರಪ್ಪ ಮಾಜಿ ಡಿಸಿಎಂ