ಸಾರಾಂಶ
ಎಲ್ಲೆಡೆಯೂ ಸ್ಪಷ್ಟ ಬಹುಮತದ ಹಿನ್ನೆಲೆ ನಡೆಯದ ಕುದುರೆ ವ್ಯಾಪಾರ
ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ಬಹುತೆಕ ರಾಜ್ಯಗಳಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಬಹುದು ಎಂದು ವಿಶ್ಲೇಷಿಸಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷಗಳ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಭಾರೀ ರಣತಂತ್ರ ರೂಪಿಸಿದ್ದವು. ಆದರೆ ಎಲ್ಲೆಡೆ ಎಲ್ಲ ಪಕ್ಷಗಳಿಗೆ ಸ್ಪಷ್ಟ ಬಹುಮತ ದೊರಕಿ, ರೆಸಾರ್ಟ್ ರಾಜಕೀಯದ ತಂತ್ರ ಬುಡಮೇಲಾಗಿದೆ.ತೆಲಂಗಾಣದಲ್ಲಿ ಅತಂತ್ರ ವಿಧಾನಸಬೆ ಸೃಷ್ಟಿಯನ್ನು ಅಂದಾಜಿಸಿ ಕಾಂಗ್ರೆಸ್ ಪಕ್ಷವು ತೆಲಂಗಾಣಕ್ಕೆ ಕರ್ನಾಟಕದಿಂದ ಸಚಿವರ ಪಡೆಯನ್ನೇ ಕಳುಹಿಸಿತ್ತು, ಹೈದರಾಬಾದ್‌ನ ತಾಜ್ ಕೃಷ್ಣ ಐಷಾರಾಮಿ ಹೋಟೆಲ್‌ನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ರಕ್ಷಿಸಲು ಕೊಠಡಿಗಳನ್ನು ಕಾದಿರಿಸಿದ್ದರು. ಅಲ್ಲದೆ ವಿಜೇತರನ್ನು ಬೇರೆಡೆಗೆ ಸ್ಥಳಾಂತರಿಸಲು ಐಷಾರಾಮಿ ಬಸ್‌ಗಳನ್ನೂ ಸಹ ತಂದು ನಿಲ್ಲಿಸಿ ಚುನಾವಣಾ ಫಲಿತಾಂಶ ಬರುವವರೆಗೆ ಕಾದು ನಂತರ ಹೊರಡುವ ಸಿದ್ಧತೆ ನಡೆಸಿತ್ತು.
ಆದರೆ ಈ ಎಲ್ಲ ತಂತ್ರಗಳು ನೀರಿನಲ್ಲಿ ಮಾಡಿದ ಹೋಮದಂತಾಗಿದ್ದು, ತೆಲಂಗಾಣದಲ್ಲಿ ಸ್ಪಷ್ಟ ಬಹುಮತ ಬಂದಿರುವುದರಿಂದ ಕುದುರೆ ವ್ಯಾಪಾರಕ್ಕೆ ಯಾವುದೇ ಆಸ್ಪದವಿಲ್ಲದಂತಾಗಿದೆ. ಅಲ್ಲದೆ ತೆಲಂಗಾಣದಲ್ಲಿ ಕಿಂಗ್‌ಮೇಕರ್ ಕನಸು ಕಾಣುತ್ತಿದ್ದ ಬಿಜೆಪಿ ಲೆಕ್ಕಾಚಾರವೂ ತಲೆಕೆಳಗಾಗಿದ್ದು, ಅಲ್ಲಿ ಕೇವಲ ಖಾತೆ ತೆರೆಯುವಲ್ಲಿ ಮಾತ್ರ ಯಶ ಕಂಡಿದೆ.ಇತ್ತ ರಾಜಸ್ಥಾನದಲ್ಲೂ ಸಹ ರಾಷ್ಟ್ರೀಯ ಪಕ್ಷಗಳು ತಮ್ಮ ಬಂಡಾಯ ಅಭ್ಯರ್ಥಿಗಳು, ಪಕ್ಷೇತರರು ಹಾಗೂ ಸಣ್ಣ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದರು. ಈಗ ಎಲ್ಲ ರಾಜ್ಯಗಳಲ್ಲಿ ಯಾರ ಹಂಗೂ ಇಲ್ಲದೆ ಏಕಪಕ್ಷ ಆಡಳಿತ ನಡೆಸುವ ಮಟ್ಟಿಗೆ ಸ್ಪಷ್ಟ ಬಹುಮತ ಬಂದಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ನಡೆಯುತ್ತಿದ್ದ ಆಪರೇಷನ್‌ನ ಭಾಗವಾಗಿ ರೆಸಾರ್ಟ್ ರಾಜಕಾರಣದ ತಂತ್ರ ನಿಷ್ಪ್ರಯೋಜಕವೆನ್ನುವಂತೆ ಮಾಡಿದೆ. ಅಲ್ಲದೆ ಈ ಬಾರಿ 3 ರಾಜ್ಯಗಳಲ್ಲಿ ಬಿಜೆಪಿಯೇ ಗೆದ್ದಿರುವುದರಿಂದ ಭವಿಷ್ಯದಲ್ಲಿಯೂ ಸಹ ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಅಚ್ಚರಿಯ ರೀತಿಯಲ್ಲಿ ಸರ್ಕಾರ ಬದಲಾದ ರೀತಿ ಬದಲಾವಣೆ ಸಾಧ್ಯತೆಗಳು ಇಲ್ಲವಾಗಿವೆ.