ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ - ಕಾಂಗ್ರೆಸ್‌-ಎನ್‌ಡಿಎ ಪ್ರತಿಷ್ಠೆ ಪಣಕ್ಕೆ

| Published : Nov 23 2024, 07:42 AM IST

BJP Congress JDS
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ - ಕಾಂಗ್ರೆಸ್‌-ಎನ್‌ಡಿಎ ಪ್ರತಿಷ್ಠೆ ಪಣಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಪಾಳೆಯಗಳ ನಡುವೆ ವಾಕ್ಸಮರ ನಡೆಯುತ್ತಿರುವ ಮಧ್ಯೆಯೇ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಲಿದೆ.

ಬೆಂಗಳೂರು : ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಪಾಳೆಯಗಳ ನಡುವೆ ವಾಕ್ಸಮರ ನಡೆಯುತ್ತಿರುವ ಮಧ್ಯೆಯೇ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಲಿದೆ.

ಈ ಫಲಿತಾಂಶ ಮೂರೂ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ವಿಶೇಷವಾಗಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವರ್ಚಸ್ಸನ್ನು ಒರೆಗೆ ಹಚ್ಚುವ ನಿರೀಕ್ಷೆಯಿದೆ.

ಹಗರಣಗಳ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸಿದ್ದರಾಮಯ್ಯ ಅವರು ಈ ಉಪಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಬೇಕಿದೆ. ಇನ್ನು ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಪುತ್ರರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಶಿವಕುಮಾರ್ ಅವರಿಗೆ ತಮ್ಮ ರಾಜಕೀಯ ಎದುರಾಳಿ ಕುಮಾರಸ್ವಾಮಿ ಅವರನ್ನು ಮಣಿಸಬೇಕಾಗಿದೆ. ಇನ್ನು ವಿಜಯೇಂದ್ರ ಅವರಿಗೆ ಉಪಚುನಾವಣೆಯಲ್ಲೂ ಗೆದ್ದು ತಮ್ಮ ನಾಯಕತ್ವದ ಬಗ್ಗೆ ಪಕ್ಷದ ಅತೃಪ್ತ ನಾಯಕರಿಂದ ವ್ಯಕ್ತವಾಗುತ್ತಿರುವ ವಿರೋಧವನ್ನು ತಣಿಸಬೇಕಾಗಿದೆ.

ಕಣದಲ್ಲಿ ಯಾರ್ಯಾರು?:

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಸಂಡೂರಿನಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಬಂಗಾರು ಹನುಮಂತು, ಕಾಂಗ್ರೆಸ್ ಅಭ್ಯರ್ಥಿಯಾಗಿ ಅನ್ನಪೂರ್ಣ ಸ್ಪರ್ಧಿಸಿದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್‌ ಅಹ್ಮದ್ ಖಾನ್ ಪಠಾಣ್‌ ಸೇರಿ 45 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಸಕಲ ಸಿದ್ಧತೆ:

ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಮತ ಎಣಿಕೆಗೆ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸಕಲ ಸಿದ್ಧತೆ ಕೈಗೊಂಡಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟವಾದ ಎನ್‌ಡಿಎ ಅಭ್ಯರ್ಥಿಗಳು ಸೇರಿದಂತೆ 45 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬಹಿರಂಗಗೊಳ್ಳಲಿದೆ.

ಮತ ಎಣಿಕೆ ಎಲ್ಲಿ?:

ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆಯು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಸಂಡೂರು ಕ್ಷೇತ್ರದ ಮತ ಎಣಿಕೆಯು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜರುಗಲಿದೆ ಮತ್ತು ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆಯು ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ಸಮಕ್ಷಮದಲ್ಲಿ ಬೆಳಗ್ಗೆ 6.45ಕ್ಕೆ ಮತಯಂತ್ರಗಳನ್ನಿಟ್ಟಿರುವ ಸ್ಟ್ರಾಂಗ್ ರೂಂ ಅನ್ನು ತೆರೆಯಲಾಗುವುದು. ಬೆಳಿಗ್ಗೆ 7.30ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಪ್ರಾರಂಭಿಸಲಾಗುತ್ತದೆ. ಬೆಳಿಗ್ಗೆ 8 ಗಂಟೆಗೆ ಇವಿಎಂ ಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ. ಒಟ್ಟಾರೆ 20 ಸುತ್ತುಗಳಲ್ಲಿ ಮತ ಎಣಿಕಾ ಕಾರ್ಯ ನಡೆಯಲಿದೆ.

ಮತ ಎಣಿಕೆ ಪ್ರಕ್ರಿಯೆ ಹೇಗೆ?:

14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿಯೊಂದು ಟೇಬಲ್‌ಗಳಿಗೂ ರಾಜಕೀಯ ಪಕ್ಷದ ಏಜೆಂಟರುಗಳಿಗೆ ಪಾಸ್ ನೀಡಲಾಗಿದೆ. ಪಕ್ಷೇತರ ಅಭ್ಯರ್ಥಿಗಳ ಏಜೆಂಟರುಗಳಿಗೂ ಸಹ ಪಾಸ್‌ ನೀಡಲಾಗಿರುತ್ತದೆ. ಮೂರು ಕ್ಷೇತ್ರದಲ್ಲಿ ಒಟ್ಟು 212 ಸಿಬ್ಬಂದಿಯನ್ನು ಮತ ಎಣಿಕೆ ಕಾರ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ. ಮೂರು ಕ್ಷೇತ್ರದಲ್ಲಿ ತಲಾ ಒಬ್ಬರು ರಿಟರ್ನಿಂಗ್‌ ಅಧಿಕಾರಿಗಳಿದ್ದು, ಶಿಗ್ಗಾಂವಿ ಕ್ಷೇತ್ರದಲ್ಲಿ ಇಬ್ಬರು ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ತಲಾ ಒಬ್ಬರು ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್ಚುವರಿ ಸಹಾಯಕ ರಿಟರ್ನಿಂಗ್‌ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ 19 ಸೂಕ್ಷ್ಮ ವೀಕ್ಷಕರು, 17 ಎಣಿಕೆ ಮೇಲ್ವಿಚಾರಕರು ಮತ್ತು 18 ಎಣಿಕೆ ಸಹಾಯಕರು ಕಾರ್ಯನಿರ್ವಹಿಸಲಿದ್ದಾರೆ. ಸಂಡೂರ್‌ ಕ್ಷೇತ್ರದಲ್ಲಿ 20 ಸೂಕ್ಷ್ಮ ವೀಕ್ಷಕರು, 19 ಎಣಿಕೆ ಮೇಲ್ವಿಚಾರಕರು, 21 ಎಣಿಕೆಯ ಸಹಾಯಕರು ಮತ ಎಣಿಕೆಯಲ್ಲಿ ತೊಡಗಲಿದ್ದಾರೆ.

ಇನ್ನು, ಚನ್ನಪಟ್ಟಣ ಕ್ಷೇತ್ರದಲ್ಲಿ 30 ಸೂಕ್ಷ್ಮ ವೀಕ್ಷಕರು, 30 ಎಣಿಕೆ ಮೇಲ್ವಿಚಾರಕರು ಮತ್ತು 30 ಎಣಿಕೆಯ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ.

ಇವಿಎಂ ಯಂತ್ರಗಳನ್ನು ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿಡಲಾಗಿದೆ. ಸಿಆರ್‌ಪಿಎಫ್ ಯೋಧರ, ಸ್ಥಳೀಯ ಪೊಲೀಸರ ಕಣ್ಗಾವಲಿನಲ್ಲಿ ಭದ್ರ ಪಡಿಸಲಾಗಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಮತ ಎಣಿಕೆ ಕಾರ್ಯವು ಬಿಗಿ ಖಾಕಿ ಕಣ್ಗಾವಲಿನಲ್ಲಿ ನಡೆಯಲಿದೆ.