ಬಿ.ಎಸ್.ಯಡಿಯೂರಪ್ಪ ಸಿಎಂ ಆಗುವುದನ್ನು ತಡೆದಿದ್ದೇ ರೇವಣ್ಣ: ಜಿ.ಟಿ.ದೇವೇಗೌಡ ಆಕ್ರೋಶ

| Published : Nov 29 2024, 01:00 AM IST / Updated: Nov 29 2024, 04:08 AM IST

GT Devegowda

ಸಾರಾಂಶ

ನನ್ನನ್ನು ಬಂಧಿಸುವ ಭೀತಿಯಿಂದ ರಕ್ಷಣೆ ಕೊಡುವಂತೆ ಯಾವತ್ತೂ ಯಾರನ್ನೂ ಕೇಳಿಕೊಂಡಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಎಚ್.ಡಿ.ರೇವಣ್ಣ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಮೈಸೂರು : ನನ್ನನ್ನು ಬಂಧಿಸುವ ಭೀತಿಯಿಂದ ರಕ್ಷಣೆ ಕೊಡುವಂತೆ ಯಾವತ್ತೂ ಯಾರನ್ನೂ ಕೇಳಿಕೊಂಡಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಎಚ್.ಡಿ.ರೇವಣ್ಣ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿ ಇಲ್ಲದಿದ್ದರೆ ಜಿ.ಟಿ.ದೇವೇಗೌಡ ಅವರು ತಮ್ಮ ಮಗನೊಂದಿಗೆ ಜೈಲಿನಲ್ಲಿ ಇರಬೇಕಿತ್ತು ಎಂಬ ರೇವಣ್ಣ ಹೇಳಿಕೆಗೆ ನಗರದಲ್ಲಿ ಗುರುವಾರ ಪ್ರತಿಕ್ರಿಸಿದ ಅವರು, ನನ್ನನ್ನು ಅರ್ಥ ಮಾಡಿಕೊಳ್ಳಲು ನನ್ನ ಕುಟುಂಬಕ್ಕೆ ಆಗಿಲ್ಲ. ನಿಮಗೆ ಹೇಗೆ ಅರ್ಥವಾಗುತ್ತದೆ. ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ. ಸಿಎಂ ಸಿದ್ದರಾಮಯ್ಯ ಸೇರಿ ಯಾರೂ ನನ್ನನ್ನು ಬಂಧಿಸುವಂತೆ ಹೇಳಿಲ್ಲ. ಯಾವುದಾದರೂ ಪ್ರಕರಣ ಇದ್ದರೆ ತೊರಿಸಿ ಎಂದು ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಸಿದ್ದರಾಮಯ್ಯ ಅವರಿಂದ ಕರೆ ಮಾಡಿಸಿಲ್ಲ. ರಕ್ಷಣೆ ಕೊಡುವಂತೆ ಕುಮಾರಸ್ವಾಮಿ ಅವರನ್ನು ಕೇಳಿಲ್ಲ. ಜೈಲಿಗೆ ಹೋಗುವ ಅಪರಾಧವನ್ನು ನಾನಾಗಲಿ, ನನ್ನ ಮಗನಾಗಲಿ ಮಾಡಿಲ್ಲ. ರೇವಣ್ಣ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ರೇವಣ್ಣ ಅವರು ಬೆಳಗಾವಿ ಅಧಿವೇಶನಕ್ಕೆ ಬಂದಾಗ ಏಕೆ ಈ ರೀತಿ ಹೇಳಿದ್ದೀರಾ ಅಂತಾ ಕೇಳುತ್ತೇನೆ ಎಂದರು.

ಈ ಹಿಂದೆ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿಯ 20-20 ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕಿತ್ತು. ರೇವಣ್ಣ ತಾನು ಉಪಮುಖ್ಯಮಂತ್ರಿ ಆಗಬೇಕು ಅಂದುಕೊಂಡಿದ್ದರು. ಅವರ ಆಸೆ ಈಡೇರದ ಕಾರಣ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜೊತೆ ಮಾತನಾಡಿ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ತಪ್ಪಿಸಿದರು. ಈ ಬಗ್ಗೆ ರೇವಣ್ಣ ಒಪ್ಪಿಕೊಂಡು ಕ್ಷಮೆ ಸಹ ಯಾಚಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಪ್ರತಿಕ್ರಿಯಿಸಲ್ಲ: ಇನ್ನು ಮುಂದೆ ನಾನು ರಾಜಕೀಯವಾಗಿ ಯಾರ ವಿರುದ್ಧವೂ ಮಾತನಾಡುವುದಿಲ್ಲ. ನನ್ನನ್ನು ಕಳ್ಳ ಅಂದರೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದೇ ಕೊನೆ ಪ್ರತಿಕ್ರಿಯೆ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ.