ಸಾರಾಂಶ
‘ನಾನು ತಪ್ಪು ಮಾಡಿದ್ದರೆ ಇನ್ನೂ ಶಿಕ್ಷೆ ಕೊಡಲಿ. ಏನೂ ತಪ್ಪು ಮಾಡದ ನನಗೆ ಈ ಶಿಕ್ಷೆ ಕೊಟ್ಟಿದ್ದಾರೆ ಎಂದು ದುಃಖಿತರಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಐದು ನಿಮಿಷ ಕಣ್ಣೀರು ಹಾಕಿದರು’ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರು : ‘ನಾನು ತಪ್ಪು ಮಾಡಿದ್ದರೆ ಇನ್ನೂ ಶಿಕ್ಷೆ ಕೊಡಲಿ. ಏನೂ ತಪ್ಪು ಮಾಡದ ನನಗೆ ಈ ಶಿಕ್ಷೆ ಕೊಟ್ಟಿದ್ದಾರೆ ಎಂದು ದುಃಖಿತರಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಐದು ನಿಮಿಷ ಕಣ್ಣೀರು ಹಾಕಿದರು’ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಸೋಮವಾರ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಭೇಟಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರನ್ನು ಭೇಟಿಯಾಗಿ ಚಹಾ ಕುಡಿದೆವು. ಹಳೇ ವಿಚಾರಗಳನ್ನು ಮಾತನಾಡಿದರು. ಇವತ್ತಿಗೂ ಅವರಿಗೆ ಅಭಿವೃದ್ಧಿಯದ್ದೇ ಚಿಂತೆಯಾಗಿದೆ. ನನಗೆ ಸಂಬಂಧವೇ ಇಲ್ಲದ ಪ್ರಕರಣ ಇದು. ಆ ಮಹಿಳೆ ಯಾರೆಂಬುದೇ ನನಗೆ ಗೊತ್ತಿಲ್ಲ. ಆರು ವರ್ಷ ಆಗಿದೆ. ನನ್ನನ್ನು ಈ ಪ್ರಕರಣದಲ್ಲಿ ಸೇರಿಸಿ ಹೀಗೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು ಎಂದು ತಿಳಿಸಿದರು.
ಮುಂದುವರೆದು, ರಾಜಕೀಯ ವಿಚಾರಗಳ ಬಗ್ಗೆ ರೇವಣ್ಣ ಮಾತನಾಡಿದರು. ನಾವು ಎಲ್ಲಿ ಎಡವಿದ್ದೇವೆ ಎಂಬುದರ ಬಗ್ಗೆ ಚರ್ಚಿಸಿದರು. ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಏನೂ ಮಾಡಲು ಆಗಲಿಲ್ಲ. ಕಡಿಮೆ ಅವಧಿಗೆ ಅಧಿಕಾರ ಸಿಕ್ಕಿತ್ತು. ನಮ್ಮ ಜತೆಗೆ ಬಂದವರು ಹೋದರು. ಮಂತ್ರಿ ಮಾಡಿದರೂ ಹೋದರು. ನೀವು ಗೌಡರೊಂದಿಗೆ ಉಳಿದುಕೊಂಡು ನೆಮ್ಮದಿ ಕೊಟ್ಟಿದ್ದೀರಿ ಎಂದರು ಎಂದು ಹೇಳಿದರು.
ಇನ್ನು ಪ್ರಜ್ವಲ್ ವಿಚಾರದ ಬಗ್ಗೆ ಮಾತನಾಡಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ನವೀನ್ ಗೌಡ , ಕಾರ್ತಿಕ್ ಇನ್ನೂ ಬಂಧನವಾಗದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಎಸ್ಐಟಿ ತನಿಖೆ ಮಾಡುತ್ತಿದೆ. ಈ ಪ್ರಕರಣವನ್ನು ನಾವು ಸಿಬಿಐಗೆ ಕೊಡುವುದಿಲ್ಲ. ನಮ್ಮ ಪೊಲೀಸರೇ ಸಮರ್ಥರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈಗಾಗಲೇ ಎಸ್ಐಟಿ ಅಧಿಕಾರಿಗಳು ಹಲವರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡುತ್ತಿದ್ದಾರೆ. ಯಾರದು ತಪ್ಪು? ಪೆನ್ ಡ್ರೈವ್ ರಿಲೀಸ್ ಮಾಡಿದ್ದು ಯಾರು ಎಂಬುದನ್ನು ತನಿಖೆ ಮೂಲಕ ಪತ್ತೆ ಹಚ್ಚುತ್ತಾರೆ. ಮುಖ್ಯಮಂತ್ರಿಗಳೇ ಎಸ್ಐಟಿ ತನಿಖೆ ಬಗ್ಗೆ ಬೆನ್ನು ತಟ್ಟಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕೆಲವರನ್ನು ಬಂಧಿಸಿದ್ದಾರೆ. ನಮಗೂ ನಂಬಿಕೆ ಬಂದಿದೆ. ಎಲ್ಲರದ್ದೂ ಹೊರಗೆ ಬರಲಿದೆ. ಕಾಯಬೇಕು ಎಂದರು.