ಸಾರಾಂಶ
ಬೆಂಗಳೂರು : ಮೆಟ್ರೋ ದರ ಹೆಚ್ಚಳ ಮಾಡಿರುವುದರಿಂದ ಪ್ರಯಾಣಿಕರ ಮೇಲೆ ಹೊರೆಯಾಗಿದ್ದು, ಏರಿಕೆ ಮಾಡಿರುವ ಪ್ರಯಾಣ ದರವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹಿಂಪಡೆಯಬೇಕು ಎಂದು ಸಂಸದ ಪಿ.ಸಿ.ಮೋಹನ್ ಆಗ್ರಹಿಸಿದ್ದಾರೆ.
ದರ ಪರಿಷ್ಕರಣೆ ಮಾಡಿರುವ ಬಿಎಂಆರ್‌ಸಿಎಲ್ ಕ್ರಮ ಸರಿಯಲ್ಲ. ಕೆಲವು ವಿಭಾಗಗಳಲ್ಲಿ ದರಗಳು ದ್ವಿಗುಣಗೊಂಡಿದ್ದು, ನಮ್ಮ ಮೆಟ್ರೋವನ್ನು ಅತ್ಯಂತ ದುಬಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನಾಗಿ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಇದಕ್ಕೆ ನೇರ ಹೊಣೆ ಎಂದು ಅವರು ಆರೋಪಿಸಿದ್ದಾರೆ.
ದರ ಪರಿಷ್ಕರಣೆ ಮಾಡಿದ ಬಳಿಕ ಫೆ.10ರಂದು 42 ಸಾವಿರ ಪ್ರಯಾಣಿಕರು ಕಡಿಮೆಯಾಗಿದ್ದು, ಫೆ.11ರಂದು 79,643 ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಫೆ.12ರಂದು 1,04,749 ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಇದನ್ನು ಗಮನಿಸಿದರೆ ಸಾರ್ವಜನಿಕರು ಅಸಮಾಧನಗೊಂಡಿದ್ದಾರೆ. ಅಲ್ಲದೇ, ರಾಜ್ಯ ನೀತಿಯ ವೈಫಲ್ಯದ ಸ್ಪಷ್ಟ ಸೂಚನೆಯಾಗಿದೆ ಎಂದು ದೂರಿದ್ದಾರೆ.
ದೆಹಲಿ ಮತ್ತು ಚೆನ್ನೈ ಮೆಟ್ರೋನಂತೆ ಬೆಂಗಳೂರು ಮೆಟ್ರೋ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಉದ್ಯಮವಾಗಿದ್ದು, 2 ಸರ್ಕಾರಗಳು ಸಮಾನ ಪಾಲನ್ನು ಹೊಂದಿವೆ. ಎಲ್ಲಾ ಮೆಟ್ರೋ ವ್ಯವಸ್ಥೆಗಳಿಗೂ ಕೇಂದ್ರ ಸರ್ಕಾರವು ಒಂದೇ ರೀತಿಯ ನೀತಿಗಳನ್ನು ರೂಪಿಸುತ್ತದೆ. ಆದರೂ ಭೂಸ್ವಾಧೀನ, ಕಾರ್ಯಾಚರಣೆ ಮತ್ತು ಶುಲ್ಕ ನಿರ್ಧಾರಗಳಂತಹ ಪ್ರಮುಖ ಅಂಶಗಳು ಸಂಪೂರ್ಣವಾಗಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುತ್ತದೆ. ಶುಲ್ಕ ಹೆಚ್ಚಳವನ್ನು ಕೇಂದ್ರ ಸರ್ಕಾರ ನಿರ್ದೇಶಿಸಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಹಾಗಾದರೆ, ದೇಶಾದ್ಯಂತ ಮೆಟ್ರೋ ದರಗಳನ್ನು ಏಕರೂಪವಾಗಿ ಯಾವ ಕಾರಣಕ್ಕೆ ಹೆಚ್ಚಳ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.