ರೌಡಿ ರಾಮುಲು ರಕ್ಷಣೆ ಮಾಡಿದ್ದೇ ನಾನೆಸಗಿದ ದ್ರೋಹ - ಡಿಕೆಶಿ ಗಾಳ ಹಾಕಿದ್ದಾರೆಂಬ ಸುದ್ದಿ ಇದೆ : ರೆಡ್ಡಿ ಸಿಡಿಲು

| Published : Jan 24 2025, 07:48 AM IST

Janardhan Reddy
ರೌಡಿ ರಾಮುಲು ರಕ್ಷಣೆ ಮಾಡಿದ್ದೇ ನಾನೆಸಗಿದ ದ್ರೋಹ - ಡಿಕೆಶಿ ಗಾಳ ಹಾಕಿದ್ದಾರೆಂಬ ಸುದ್ದಿ ಇದೆ : ರೆಡ್ಡಿ ಸಿಡಿಲು
Share this Article
  • FB
  • TW
  • Linkdin
  • Email

ಸಾರಾಂಶ

‘ಒಂದು ಕಾಲದಲ್ಲಿ ವಿರೋಧಿಗಳ ಕೊಲೆ ಮಾಡಲು ರೌಡಿಗಳ ಜತೆ ಸೇರಿ ಹೊರಟಿದ್ದ ಶ್ರೀರಾಮುಲುಗೆ ಬುದ್ಧಿವಾದ ಹೇಳಿ ತಾಯಿ ತನ್ನ ಮಗುವನ್ನು ಬೆಳೆಸುವಂತೆ ಸನ್ಮಾರ್ಗದಲ್ಲಿ ಕರೆತಂದು ಈ ಮಟ್ಟಕ್ಕೆ ಬೆಳೆಸಿದ್ದೇನೆ.

  ಬೆಂಗಳೂರು : ‘ಒಂದು ಕಾಲದಲ್ಲಿ ವಿರೋಧಿಗಳ ಕೊಲೆ ಮಾಡಲು ರೌಡಿಗಳ ಜತೆ ಸೇರಿ ಹೊರಟಿದ್ದ ಶ್ರೀರಾಮುಲುಗೆ ಬುದ್ಧಿವಾದ ಹೇಳಿ ತಾಯಿ ತನ್ನ ಮಗುವನ್ನು ಬೆಳೆಸುವಂತೆ ಸನ್ಮಾರ್ಗದಲ್ಲಿ ಕರೆತಂದು ಈ ಮಟ್ಟಕ್ಕೆ ಬೆಳೆಸಿದ್ದೇನೆ. ಇದೇ ನಾನು ಮಾಡಿದ ದ್ರೋಹ. ಪಕ್ಷದ ಹೈಕಮಾಂಡ್‌ಗೆ ಅವರ ವಿರುದ್ಧ ಚಾಡಿ ಹೇಳುವ ಜಾಯಮಾನ ನನ್ನದಲ್ಲ’ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ತನ್ಮೂಲಕ ವರಿಷ್ಠರಿಗೆ ರೆಡ್ಡಿ ಚಾಡಿ ಹೇಳಿದ್ದಾರೆಂಬ ರಾಮುಲು ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

‘ರಾಮಾಯಣ, ಮಹಾಭಾರತ, ಪುರಾಣದ ಕಥೆಗಳನ್ನು ಹೇಳಿ ಸನ್ಮಾರ್ಗದಲ್ಲಿ ಬೆಳೆಸಿ ಈ ಮಟ್ಟಕ್ಕೆ ತಂದೆವು. ಇಂಥವರನ್ನು ನೋಡಿಯೇ ಹಾಲು ಕುಡಿದ ಹೆತ್ತ ತಾಯಿ ಎದೆಗೆ ಒದೆಯೋ ಮಗ ಎಂಬ ಎಂಬ ಗಾದೆ ಮಾತು ಹುಟ್ಟಿಕೊಂಡಿದೆ ಅನಿಸುತ್ತಿದೆ’ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ಅಲ್ಲದೆ, ‘ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಮಣಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ವಾಲ್ಮೀಕಿ ಜನಾಂಗದ ಶ್ರೀರಾಮುಲು ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳು ಬಳ್ಳಾರಿ ಭಾಗದಲ್ಲಿ ಹರಿದಾಡುತ್ತಿವೆ’ ಎಂದೂ ರೆಡ್ಡಿ ಬಾಂಬ್ ಸಿಡಿಸಿದ್ದಾರೆ. ಪಕ್ಷ ಬಿಡುವುದು ಅಥವಾ ಇರುವುದು ಅವರ ವೈಯಕ್ತಿಕ. ಪಕ್ಷದಿಂದ ಹೋಗುವುದಾದರೆ ಹೋಗಲಿ. ಆದರೆ, ನನ್ನ ಮೇಲೆ ಇಲ್ಲ ಸಲ್ಲದ ನಿರಾಧಾರ ಆರೋಪ ಮಾಡುವುದು ಏಕೆ? 40 ವರ್ಷದಿಂದ ನಾನು ಮಾಡಿದ ಸಹಾಯ ಮರೆತು ಮಾತನಾಡುವುದು ಎಷ್ಟು ಸರಿ ಕೇಳಿದ್ದಾರೆ.

ಗುರುವಾರ ಸುದೀರ್ಘ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷದ ನಾಯಕರು ಬಂಗಾರು ಹನುಮಂತು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಬಂಗಾರು ಹನುಮಂತುಗೆ ನಾನು ಟಿಕೆಟ್‌ ಕೊಡಿಸಿಲ್ಲ. ಪಕ್ಷದ ರಾಜ್ಯ ಹಾಗೂ ರಾಷ್ಟ್ರದ ನಾಯಕರ ಆದೇಶದ ಮೇರೆಗೆ ನಾನು ಬಂಗಾರು ಪರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮೂರು ದಿನಗಳ ಕಾಲ ತಡವಾಗಿ ಬಂದ ಶ್ರೀರಾಮುಲು ಸಹ ನನ್ನೊಟ್ಟಿಗೆ ಪ್ರಚಾರ ಮಾಡಿದ್ದಾರೆ ಎಂದರು.

ಬಂಗಾರು ಹನುಮಂತ ಸೋಲಿಗೆ ಹಲವು ಕಾರಣಗಳು ಇರಬಹುದು. ಸ್ವತಃ ಮುಖ್ಯಮಂತ್ರಿಗಳೇ ಕ್ಷೇತ್ರದಲ್ಲಿ ಕುಳಿತು ಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಮಾಡಿ, ಸಾಕಷ್ಟು ಹಣ ಖರ್ಚು ಮಾಡಿದ್ದರ ಪರಿಣಾಮ ಬಿಜೆಪಿ ಅಭ್ಯರ್ಥಿಗೆ ಸೋಲಾಯಿತು. ಬಂಗಾರು ಹನುಮಂತು ಪಕ್ಷದ ಆಯ್ಕೆ. ಬಿಜೆಪಿ ಪಕ್ಷಕ್ಕೆ ಇಂಟೆಲಿಜೆನ್ಸ್‌ ರಿಪೋರ್ಟ್‌ ಇರುತ್ತದೆ. ಸೋಲಿನ ಪರಾಮರ್ಶೆಗೆ ಡಿ.ವಿ.ಸದಾನಂದ ಗೌಡ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಆ ಸಮಿತಿ ಕ್ಷೇತ್ರಕ್ಕೆ ತೆರಳಿ ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಿದೆ. ಸಂಡೂರಿಗೆ ಸೋಲಿನ ಕಾರಣ ಆ ವರದಿಯಲ್ಲಿದೆ ಎಂದರು.

ಶ್ರೀರಾಮುಲು ಸಾಕ್ಸ್‌ನಲ್ಲಿ ಚಾಕು, ಬೆನ್ನಲ್ಲಿ ಕೊಡಲಿ:

ಈಗ ಶ್ರೀರಾಮುಲು ನೀಡುತ್ತಿರುವ ಹೇಳಿಕೆ ನೋಡಿದರೆ ನನಗೆ ಬಹಳ ನೋವಾಗಿದೆ. ಇದಕ್ಕೆ ಕಾರಣ ಬಹಳಷ್ಟಿದೆ. ಚಿಕ್ಕ ಹುಡುಗನಿಂದ ನಾನು ಶ್ರೀರಾಮುಲುನನ್ನು ನೋಡಿದ್ದೇನೆ. 1991ರಲ್ಲಿ ಶ್ರೀರಾಮುಲು ಅವರ ಸೋದರ ಮಾವನ ಭೀಕರ ಕೊಲೆಯಾಯಿತು. ಈ ಸಂದರ್ಭದಲ್ಲಿ ಶ್ರೀರಾಮುಲು ತಮ್ಮ ಶೂ ಸಾಕ್ಸ್‌ನಲ್ಲಿ ಎರಡು ಚಾಕು, ಕೈಗಳಲ್ಲಿ ಎರಡು ಚಾಕು, ಬೆನ್ನ ಹಿಂದೆ ಕೊಡಲಿ ಸಿಕ್ಕಿಸಿಕೊಂಡು ಸುತ್ತ 10-20 ರೌಡಿಗಳ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದರು. ಏಕೆಂದರೆ, ವಿರೋಧಿಗಳ ಎರಡನೇ ಟಾರ್ಗೆಟ್ ಶ್ರೀರಾಮುಲೇ ಆಗಿದ್ದರು. ಇಂತಹ ಸಂದರ್ಭದಲ್ಲಿ ಶ್ರೀರಾಮುಲು ಆಶ್ರಯ ಕೇಳಿಕೊಂಡು ನನ್ನ ಬಳಿ ಬಂದರು. ಇಬ್ಬರ ಸಾಮಾನ್ಯ ಸ್ನೇಹಿತರು ಶ್ರೀರಾಮುಲು ಅವರನ್ನು ಕಾಪಾಡುವಂತೆ ನನಗೆ ಹೇಳಿದರು ಎಂದು ರೆಡ್ಡಿ ವಿವರಿಸಿದರು.

ಈ ವೇಳೆ ನನ್ನ ತಾಯಿ ನಿಮ್ಮನ್ನು ನಂಬಿ ಶ್ರೀರಾಮುಲು ಬಂದಿದ್ದಾನೆ. ಒಳ್ಳೆಯ ಹುಡುಗ. ನೀವು ಕೈ ಬಿಟ್ಟರೆ ಪ್ರಾಣ ಹೋಗುತ್ತದೆ. ಹೀಗಾಗಿ ಕಾಪಾಡಿಕೊಂಡು ಹೋಗಿ ಎಂದು ಹೇಳಿದ್ದರು. ಅದರಂತೆ ನಾವು ಶ್ರೀರಾಮಲು ಪರ ನಿಂತೆವು ಎಂದು ಶ್ರೀರಾಮುಲು ಸ್ನೇಹದ ಆರಂಭಿಕ ದಿನಗಳನ್ನು ನೆನೆಪಿಸಿಕೊಂಡರು.

ಸನ್ಮಾರ್ಗದಲ್ಲಿ ತಂದಿದ್ದೇ ದ್ರೋಹ, ಅನ್ಯಾಯ ಅಲ್ಲವೇ?

ಸೋದರ ಮಾವನ ಸಾಯಿಸಿದವರನ್ನು ನಾನೇ ಸಾಯಿಸುತ್ತೇನೆ ಎಂದು ಒಂದು ದಿನ ಶ್ರೀರಾಮುಲು ನನ್ನ ಬಳಿ ಬಂದಿದ್ದರು. ಈ ವೇಳೆ ನಾನು ಅಪರಾಧದಲ್ಲಿ ಒಮ್ಮೆ ಭಾಗಿಯಾದರೆ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂದು ಬುದ್ಧಿವಾದ ಹೇಳಿದ್ದೆ. ರಾಮಾಯಣ, ಮಹಾಭಾರತ, ಪುರಾಣದ ಕಥೆಗಳನ್ನು ಹೇಳಿ ಸನ್ಮಾರ್ಗದಲ್ಲಿ ನಡೆಯುವಂತೆ ಸೂಚಿಸಿದೆ. ವಿರೋಧಿಗಳ ಮುಂದೆ ಆನೆ ರೀತಿ ಬೆಳೆಯಬೇಕು ಎಂದು ಹೇಳಿದ್ದೆ. ಪಾಪ-ಕರ್ಮ ಭಗವಂತ ನೋಡಿಕೊಳ್ಳುತ್ತಾನೆ ಎಂದು ಬುದ್ಧಿವಾದ ಹೇಳಿ ಆತನನ್ನು ಸನ್ಮಾರ್ಗದಲ್ಲಿ ಬೆಳೆಸಿ ಈ ಮಟ್ಟಕ್ಕೆ ತಂದೆವು. ಇದು ನಾನು ಶ್ರೀರಾಮುಲುಗೆ ಮಾಡಿದ ದ್ರೋಹ, ಅನ್ಯಾಯ ಅಲ್ಲವೇ ಎಂದು ಜನಾರ್ದನ ರೆಡ್ಡಿ ಪ್ರಶ್ನಿಸಿದರು.

ಮಂತ್ರಿ ಮಾಡಿದ್ದು ದ್ರೋಹವೇ?

ನಂತರ 2004ರ ಚುನಾವಣೆಯಲ್ಲಿ ಶ್ರೀರಾಮುಲು ಗೆದ್ದು ಶಾಸಕರಾದರು. ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪ ನೀವು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಎಂದು ನನಗೆ ಹೇಳಿದರು. ಆಗ ನಾನು ವ್ಯಾಪಾರದಲ್ಲಿ ಇದ್ದೇನೆ. ಮಂತ್ರಿಯಾದರೆ ಕೆಲಸ ಮಾಡುವುದು ಕಷ್ಟ. ವಾಲ್ಮೀಕಿ ಜನಾಂಗದ ಶ್ರೀರಾಮುಲು ಅವರನ್ನು ಮಂತ್ರಿ ಮಾಡಿ. ಇದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಹೇಳಿ ಮಂತ್ರಿ ಮಾಡಿಸಿದ್ದೆ. ಇದು ನಾನು ಶ್ರೀರಾಮುಲುಗೆ ಮಾಡಿದ ಮತ್ತೊಂದು ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದರು.

ಮೊಳಕಾಲ್ಮೂರಿನಲ್ಲಿ ಗೆಲ್ಲಿಸಿದ್ದು ನಾನು:

2018ರಲ್ಲಿ ನಡೆದ ಚುನಾವಣೆಯಲ್ಲಿ ಶ್ರೀರಾಮುಲು ಬಾದಾಮಿ ಮತ್ತು ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಹಾಲಿ ಶಾಸಕ ತಿಪ್ಪೇಸ್ವಾಮಿಗೆ ಟಿಕೆಟ್ ತಪ್ಪಿಸಿ ಮೊಳಕಾಲ್ಮೂರಲ್ಲಿ ಶ್ರೀರಾಮುಲುಗೆ ಟಿಕೆಟ್‌ ನೀಡಿದ್ದರಿಂದ ಅವರ ಮೇಲೆ ದಾಳಿ ಮಾಡಿದರು. ಚಪ್ಪಲಿ, ಕಲ್ಲು ತೂರಿದರು. ವಿಚಾರ ಗೊತ್ತಾಗಿ ತಕ್ಷಣ ಮೊಳಕಾಲ್ಮೂರಿಗೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದೆ. ಕೇವಲ ನಾಮಪತ್ರ ಸಲ್ಲಿಸಿ ಹೋದ ಶ್ರೀರಾಮುಲು ಗೆದ್ದ ಬಳಿಕ ಪ್ರಮಾಣಪತ್ರ ಪಡೆಯಲು ಚಿತ್ರದುರ್ಗಕ್ಕೆ ಬಂದರು. ನಾನು ಕ್ಷೇತ್ರದಲ್ಲಿ ಕುಳಿತು ಕೆಲಸ ಮಾಡಿ 45 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದೆ. ಇದು ನಾನು ಅವನಿಗೆ ಮಾಡಿದ ಮತ್ತೊಂದು ದ್ರೋಹ ಅಲ್ಲವೇ ಎಂದು ಮಾತಿನಿಂದ ತಿವಿದರು.

40 ವರ್ಷದ ಜೀವನ ಆಧರಿಸಿ ವೆಬ್‌ ಸೀರಿಸ್‌

ನಾನು ಬಡ ಕುಟುಂಬದಲ್ಲೇ ಹುಟ್ಟಿ ಬೆಳೆದವನು. ಪ್ರತಿಯೊಂದು ಸ್ವಅನುಭವದಿಂದಲೇ ಅನುಭವ ಪಡೆದಿದ್ದೇನೆ. ನನ್ನ 40 ವರ್ಷದ ಕಥೆಯನ್ನು 40 ನಿಮಿಷ ಅಥವಾ 4 ಗಂಟೆಗಳಲ್ಲಿ ಹೇಳೋದು ಕಷ್ಟ. ಇನ್ನ ಇಡೀ ಜೀವನ ಆಧರಿಸಿ ದೊಡ್ಡ ಸಂಸ್ಥೆಯೊಂದು ವೆಬ್‌ ಸೀರಿಸ್‌ ನಿರ್ಮಿಸುತ್ತಿದೆ. ಈಗ ನನ್ನ ಜೀವನದ ಎರಡನೇ ಹಂತ ನಿರ್ಮಿಸುತ್ತಿದ್ದಾರೆ. ನನ್ನ ಜೀವನ ಹೇಳಲು ಸೀಸನ್‌ಗಳೇ ಬೇಕು ಎಂದು ಜನಾರ್ದನ ರೆಡ್ಡಿ ಹೇಳಿದರು.

ಕಳೆದ 14 ವರ್ಷಗಳಲ್ಲಿ ಶ್ರೀರಾಮುಲು ತುಂಬಾ ಮೈ ಮೇಲೆ ಎಳೆದುಕೊಂಡಿದ್ದಾರೆ. ಆಸ್ತಿ ದ್ರೋಹ, ನಂಬಿಕೆ ದ್ರೋಹ, ಸ್ವಾಮಿ ದ್ರೋಹ ಮಾಡಿದ್ದಾನಾ ಎಂಬುದು ಮುಂದೆ ಗೊತ್ತಾಗಲಿದೆ. ತನಿಖಾ ಸಂಸ್ಥೆಗಳು ತನಿಖೆ ಮಾಡಿದರೆ ವರ್ಷಗಳು ಸಾಲುವುದಿಲ್ಲ. ಸಮಯ ಬಂದಾಗ ನಾನೇ ಹೇಳುವೆ

-ಗಾಲಿ ಜನಾರ್ದನರೆಡ್ಡಿ, ಶಾಸಕ

ರಾಮುಲು ಕಾಂಗ್ರೆಸ್ಸಿಗೆ ಅಂತ ಬಳ್ಳಾರಿಯಲ್ಲಿ ಮಾತು

ಶ್ರೀರಾಮುಲು ಕಾಂಗ್ರೆಸ್‌ ಸೇರುತ್ತಾರೆ ಎಂದು ಬಳ್ಳಾರಿ ಜನ ಮಾತನಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಕಾಂಗ್ರೆಸ್‌ನಲ್ಲಿ ಸತೀಶ್‌ ಜಾರಕಿಹೊಳಿ ಮಣಿಸಲು ಡಿ.ಕೆ.ಶಿವಕುಮಾರ್‌ ಅವರು ಶ್ರೀರಾಮುಲು ಅವರನ್ನು ಕಾಂಗ್ರೆಸ್‌ ಸೇರ್ಪಡೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ ಎಂದರು.

ನಾನು ಒಬ್ಬರನ್ನು ಸ್ನೇಹಿತ ಎಂದು ತೀರ್ಮಾನ ಮಾಡಿದರೆ, ನಾನು ಸಾಯುವವರೆಗೂ ಸ್ನೇಹಿತನಾಗಿಯೇ ನೋಡುತ್ತೇನೆ. ಆದರೆ, ಈಗ ಶತ್ರುಗಳ ಜತೆಗೆ ಕೈ ಜೋಡಿಸಿ ನಾನು ಪಕ್ಷ ಬಿಡುತ್ತೇನೆ ಎಂದು ಹೇಳುವುದು ಸರಿಯಲ್ಲ.

ಶ್ರೀರಾಮುಲು ಪಕ್ಷ ಬಿಡುತ್ತೇನೆ ಎಂಬುದು ಹೊಸದೇನು ಅಲ್ಲ. ಈ ಹಿಂದೆ ಬಿಎಸ್‌ಆರ್‌ ಪಕ್ಷ ಮಾಡುವಾಗಲೂ ಮನೆಗೆ ಕರೆದು ತಾಳ್ಮೆಯಿಂದ ಇರು. ಕಾಂಗ್ರೆಸ್‌ ಪಕ್ಷ ನಮ್ಮ ಬೆನ್ನ ಹಿಂದೆ ಬಿದ್ದಿದೆ. ನನ್ನ ಬಂಧನ ಮಾಡುವ ಸಾಧ್ಯತೆಯಿದೆ. ಅವೇಶ ಬೇಡ ಎಂದು ಒಂದು ತಿಂಗಳು ಸಮಯ ನೀಡಿದೆ. ಆದರೆ, ಡಿ.ವಿ.ಸದಾನಂದಗೌಡರು ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಬಿಟ್ಟು ಪಕ್ಷ ಕಟ್ಟಿದರು ಎಂದು ಹೇಳಿದರು.