ಬೆಂಗಳೂರು : ವಿಧಾನಪರಿಷತ್‌ ಸದಸ್ಯೆ ಆರತಿ ಕೃಷ್ಣ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ನಿರ್ಮಾಣವಾಗಿರುವುದು ಕಾಂಗ್ರೆಸ್‌ನ ಒಕ್ಕಲಿಗ ಕೋಟಾದಲ್ಲಿ ವಿಪ್ಲವ ಉಂಟುಮಾಡಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ಒಟ್ಟು ಸಿಎಂ ಸೇರಿ ಒಟ್ಟು ಐದು ಮಂದಿ ಒಕ್ಕಲಿಗ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡುವ ಅವಕಾಶವಿದೆ. ಈ ಪೈಕಿ ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರಿದ್ದಾರೆ.

ಇನ್ನು ಒಕ್ಕಲಿಗ ಕೋಟಾದಲ್ಲಿ ಸಂಪುಟ ಸೇರಲು ಅವಕಾಶವಿರುವುದು ಕೇವಲ ಮೂವರು ಶಾಸಕರಿಗೆ ಮಾತ್ರ. ಈ ಮೂರು ಸ್ಥಾನಕ್ಕೆ ಮೊದಲ ಬಾರಿ ಶಾಸಕರಿಂದ ಹಿಡಿದು ಆರೇಳು ಬಾರಿ ಶಾಸನ ಸಭೆ ಪ್ರವೇಶಿಸಿದವರ ವರೆಗೂ ಸೇರಿ ಚಲುವರಾಯಸ್ವಾಮಿ, ಟಿ.ಬಿ.ಜಯಚಂದ್ರ, ಗುಬ್ಬಿ ವಾಸು, ಮಾಗಡಿ ಬಾಲಕೃಷ್ಣ, ಎಂ.ಕೃಷ್ಣಪ್ಪ, ಶಿವಲಿಂಗೇಗೌಡ ಹಾಗೂ ಶರತ್ ಬಚ್ಚೇಗೌಡರಂತಹ ಪ್ರಭಾವಿಗಳಿದ್ದಾರೆ.


ಈ ಘಟಾನುಘಟಿಗಳಿಗೆ ಸಂಪುಟದಲ್ಲಿ ಸ್ಥಾನ ದೊರಕಿಸಿಕೊಡುವುದು ಹೇಗೆ ಹಾಗೂ ಸ್ಥಾನ ಸಿಗದವರನ್ನು ಸಮಾಧಾನಪಡಿಸುವುದು ಹೇಗೆ ಎಂಬ ಚಿಂತೆಯಲ್ಲಿ ಕಾಂಗ್ರೆಸ್‌ ನಾಯಕರು ಇರುವಾಗಲೇ ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಂ ಪ್ರಿತೋಡ ಸೇರಿ ಹಲವು ಪ್ರಭಾವಿ ನಾಯಕರು ಆರತಿ ಕೃಷ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಡ ನಿರ್ಮಾಣ ಮಾಡಿರುವುದು ರಾಜ್ಯ ನಾಯಕರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

ಒತ್ತಡಕ್ಕೆ ಮಣಿದು ಮೂರು ಸ್ಥಾನದಲ್ಲಿ ಆರತಿ ಕೃಷ್ಣಗೆ ಅವಕಾಶ ನೀಡಿದರೆ ಉಳಿಯುವುದು ಎರಡೇ ಸ್ಥಾನ. ಈ ಎರಡು ಸಚಿವ ಸ್ಥಾನವನ್ನು ಬಿಡದಿ ಗದ್ದಲ ಆರಂಭವಾಗಿರುವುದರಿಂದ ಜೆಡಿಎಸ್‌ ವರಿಷ್ಠ ಕುಮಾರಸ್ವಾಮಿಗೆ ಟಕ್ಕರ್‌ ನೀಡಲು ಚಲುರಾಯಸ್ವಾಮಿ ಅವರಿಗೆ ನೀಡಬೇಕೋ, ಬೆಂಗಳೂರಿನಲ್ಲಿ ಪ್ರಭಾವಿಯಾಗಿರುವ ಎಂ.ಕೃಷ್ಣಪ್ಪ ಅವರಿಗೆ ನೀಡುವುದೋ, ಹಿರಿತನ ಹೊಂದಿರುವ ಜಯಚಂದ್ರ ಅವರಿಗೆ ನೀಡಬೇಕೋ ತುಮಕೂರು ಭಾಗದಲ್ಲಿ ಪಕ್ಷಕ್ಕೆ ಅತ್ಯಂತ ಅಗತ್ಯವಾಗಿರುವ ಗುಬ್ಬಿ ವಾಸುಗೆ ನೀಡುವುದೋ, ಹಾಸನ ಪ್ರಾತಿನಿಧ್ಯಕ್ಕಾಗಿ ಶಿವಲಿಂಗೇಗೌಡ ಅವರನ್ನು ಪರಿಗಣಿಸುವುದೋ ಅಥವಾ ಯುವ ನಾಯಕ ಶರತ್‌ಗೆ ನೀಡುವುದೋ? ಈ ಗೊಂದಲ ರಾಜ್ಯ ನಾಯಕತ್ವವನ್ನು ಕಾಡುತ್ತಿದೆ.

- ಒಕ್ಕಲಿಗ ಕೋಟಾದಲ್ಲಿ ಐದು ಮಂದಿಗಷ್ಟೇ ಅವಕಾಶ

- ಈಗಾಗಲೇ ಇಬ್ಬರಿದ್ದಾರೆ, ಇನ್ನೂ 3 ಮಂದಿಗೆ ಚಾನ್ಸ್‌

- ಚಲುವ, ಎಂ.ಕೃಷ್ಣಪ್ಪ ಸೇರಿ ಹಲವು ಶಾಸಕರ ಲಾಬಿ

- -ಆರತಿ ಪರ ಸ್ಯಾಮ್‌ ಪಿತ್ರೋಡಾರಿಂದ ತೀವ್ರ ಲಾಬಿ

- ಆರತಿ ಸೇರ್ಪಡೆಯಾದರೆ ಯಾರನ್ನು ಕೈಬಿಡುವುದು?

ಇಕ್ಕಟ್ಟಿಗೆ ಸಿಲುಕಿದ ರಾಜ್ಯದ ಕಾಂಗ್ರೆಸ್‌ ನಾಯಕತ್ವ