ಸಾರಾಂಶ
ಎಐಸಿಸಿ ವರಿಷ್ಠರ ಭೇಟಿ ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಗಮನ ಸೆಳೆದಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಭೇಟಿ ಮಾಡಿದ್ದಾರೆ.
ಬೆಂಗಳೂರು : ಎಐಸಿಸಿ ವರಿಷ್ಠರ ಭೇಟಿ ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಗಮನ ಸೆಳೆದಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಭೇಟಿ ಮಾಡಿದ್ದಾರೆ.
ಬೆಂಬಲಿಗ ಶಾಸಕರ ಪ್ರತ್ಯೇಕ ತಂಡದೊಂದಿಗೆ ಆಗಾಗ್ಗೆ ಸಭೆಗಳನ್ನು ನಡೆಸುವ ಸತೀಶ್‌ರನ್ನು ವಿಜಯೇಂದ್ರ ಹಾಗೂ ಡಿ.ಕೆ. ಸುರೇಶ್ ಒಂದೇ ದಿನ ಭೇಟಿ ಮಾಡಿದ್ದು, ಈ ಸರಣಿ ಭೇಟಿಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಅಸ್ಥಿರತೆ ಕುರಿತ ಚರ್ಚೆಗಳು ನಡೆಯುತ್ತಿರುವಾಗಲೇ ಸತೀಶ್ ಭೇಟಿ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಸೋಮವಾರ ಸಚಿವರ ಸರ್ಕಾರಿ ನಿವಾಸದಲ್ಲಿ ಸತೀಶ್‌ರನ್ನು ವಿಜಯೇಂದ್ರ ಭೇಟಿಯಾಗಿ ಶಿಕಾರಿಪುರ ತಾಲೂಕಿನ ಕುಟ್ರಳ್ಳಿ ಟೋಲ್ ತೆರವು ವಿಚಾರವಾಗಿ ಮನವಿ ಮಾಡಿದರು. ಈ ವೇಳೆ ಕೆಲ ಸಮಯ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.
ಡಿ.ಕೆ. ಸುರೇಶ್ ಭೇಟಿ:
ಇದಕ್ಕೂ ಮೊದಲು ಮಾಜಿ ಸಂಸದ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರ ಸಹೋದರ ಡಿ.ಕೆ. ಸುರೇಶ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದು ಸಹ ಕುತೂಹಲ ಮೂಡಿಸಿದೆ. ಭೇಟಿ ಬಳಿಕ ಮಾತನಾಡಿದ ಡಿ.ಕೆ. ಸುರೇಶ್, ರಾಜಕೀಯ ಭೇಟಿಯಲ್ಲ. ಸತೀಶ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಪ್ರಭಾವಿ ಸಚಿವರು. ಕನಕಪುರ ವಿಧಾನಸಭಾ ಕ್ಷೇತ್ರದ ಕೆಲವು ಅಭಿವೃದ್ಧಿ ಯೋಜನೆಗಳ ಮಂಜೂರಾತಿ ಬಗ್ಗೆ ಅವರ ಜತೆ ಚರ್ಚೆ ಮಾಡಲಾಯಿತು. ಅವರು ನಮ್ಮ ಮನವಿಗೆ ಒಪ್ಪಿದ್ದು, ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಿದ ತಕ್ಷಣ ಮಂಜೂರಾತಿ ನೀಡುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಖರ್ಗೆ ಅವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಅವರು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡಿ, ಪಕ್ಷ ಸಂಘಟನೆ ಹಾಗೂ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುವುದು ನಮ್ಮ ಕರ್ತವ್ಯ ಎಂದರು.