ವಿದ್ಯಾರ್ಥಿಗಳ ಶೂಗೂ ಎಸ್ಸಿ,ಎಸ್ಟಿ ಹಣ: ಬಿಜೆಪಿ

| N/A | Published : Jul 28 2025, 12:30 AM IST / Updated: Jul 28 2025, 05:16 AM IST

Chalavadi Narayanaswamy

ಸಾರಾಂಶ

ಸರ್ಕಾರಿ ಶಾಲಾ ಮಕ್ಕಳ ಉಚಿತ ಶೂ, ಸಾಕ್ಸ್‌ ವಿತರಣಾ ಯೋಜನೆಗೂ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಉಪಯೋಜನೆ(ಎಸ್ಸಿಪಿ) ಮತ್ತು ಗಿರಿಜನ ಉಪಯೋಜನೆ(ಟಿಎಸ್ಪಿ) ಅನುದಾನ ಬಳಕೆ ಮಾಡಿರುವುದಾಗಿ ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

  ಬೆಂಗಳೂರು :  ಸರ್ಕಾರಿ ಶಾಲಾ ಮಕ್ಕಳ ಉಚಿತ ಶೂ, ಸಾಕ್ಸ್‌ ವಿತರಣಾ ಯೋಜನೆಗೂ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಉಪಯೋಜನೆ(ಎಸ್ಸಿಪಿ) ಮತ್ತು ಗಿರಿಜನ ಉಪಯೋಜನೆ(ಟಿಎಸ್ಪಿ) ಅನುದಾನ ಬಳಕೆ ಮಾಡಿರುವುದಾಗಿ ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

ಇತ್ತೀಚೆಗೆ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ ಅಂದಾಜು 40.68 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾವಿಕಾಸ ಯೋಜನೆಯಡಿ 2025-26ನೇ ಸಾಲಿನ ಶೂ, ಸಾಕ್ಸ್‌ ಖರೀದಿಗೆ 410 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ಇದರಲ್ಲಿ ಎಸ್ಸಿಪಿ ಅನುದಾನದಲ್ಲಿ 102 ಕೋಟಿ ರು, ಟಿಎಸ್‌ಪಿ ಅನುದಾನದಲ್ಲಿ 41 ಕೋಟಿ ರು. ಅನ್ನು ಒದಗಿಸಿರುವುದಾಗಿ ತೋರಿಸಿದೆ. ಉಳಿದಂತೆ ಶಾಲಾ ಸಾಮಗ್ರಿ ಮತ್ತು ಸರಬರಾಜಿಗೆ ಮೀಸಲಿಟ್ಟ ಅನುದಾನ ಹಾಗೂ ಮಹತ್ವಾಕಾಂಕ್ಷೆ ತಾಲೂಕು ಯೋಜನೆಯಡಿ 196 ಕೋಟಿಗೂ ಹೆಚ್ಚು ಹಣ ಒದಗಿಸಿದ್ದಾಗಿ ಉಲ್ಲೇಖಿಸಿದೆ.

ಈ ಸಂಬಂಧ ಭಾನುವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಈ ವರ್ಷ ಶೂ ಮತ್ತು ಸಾಕ್ಸ್‌ ಯೋಜನೆಗೆ ಬಿಡುಗಡೆ ಮಾಡಿರುವ 410 ಕೋಟಿ ರು.ಗಳಲ್ಲಿ ಸುಮಾರು 143 ಕೋಟಿ ರು. ಅನ್ನು ದಲಿತರಿಗೆ ಮೀಸಲಿಟ್ಟಿರುವ ಎಸ್ಸಿಪಿ, ಟಿಎಸ್‌ಪಿ ಯೋಜನೆಯ ಅನುದಾನದಿಂದ ಒದಗಿಸಲಾಗಿದೆ. ದಲಿತರ ಉದ್ದಾರಕ್ಕಾಗಿ ಎಸ್ಸಿಪಿ, ಟಿಎಸ್‌ಪಿ ಯೋಜನೆ ಜಾರಿಗೆ ತಂದವರು ನಾವು ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್‌ ಸರ್ಕಾರ ಮತ್ತೊಂದೆಡೆ, ಅದೇ ಹಣವನ್ನು ಇತರೆ ಸಾಮಾನ್ಯ ಯೋಜನೆಗಳಿಗೂ ಬಳಸುವ ಕೆಲಸ ಮಾಡುತ್ತಿದೆ. ಹೀಗಾದರೆ ದಲಿತರಿಗೆ ಮೀಸಲಿಟ್ಟ ಹಣ ದಲಿತರಿಗೇ ಬಳಕೆ ಹೇಗಾಗುತ್ತದೆ? ಇದು ದಲಿತರ ಕಣ್ಣೊರೆಸುವ ತಂತ್ರ ಅಷ್ಟೆ. ಇದೇ ರೀತಿಯಾದರೆ ದಲಿತರಿಗೆ ಮೂರು ಕಾಸೂ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ಮೊದಲೇ ಎರಡು ತಿಂಗಳು ತಡವಾಗಿ ಶೂ ಮತ್ತು ಸಾಕ್ಸ್‌ ವಿತರಣೆಗೆ ಹಣ ಬಿಡುಗಡೆ ಮಾಡಲಾಗಿದೆ. ಆ ಹಣ ಕೂಡ ಸಾಕಷ್ಟು ಕಡೆ ಶಾಲೆಗಳಿಗೆ ಇನ್ನೂ ತಲುಪಿಲ್ಲ. ಅಷ್ಟೇ ಏಕೆ ಪಠ್ಯಪುಸ್ತಕಗಳನ್ನು ಶಾಲಾ ಆರಂಭದ ದಿವನೇ ತಲುಪಿಸಿದ್ದೇವೆ ಎಂದು ಸರ್ಕಾರ ಸುಳ್ಳು ಹೇಳಿದೆ. ಮೊದಲ ಕಿರು ಪರೀಕ್ಷೆ ಸಮೀಪಿಸಿದರೂ ಹಿಂದಿ ಬದಲು ಕೌಶಲ್ಯಾಧಾರಿತ ವಿಷಯಗಳ ಪುಸ್ತಕಗಳು ಕೂಡ ಶಾಲೆಗಳಿಗೆ ತಲುಪದೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ದ್ವಿಭಾಷಾ ಮಾಧ್ಯಮ ಶಾಲೆಗಳು ಹೆಸರಿಗಷ್ಟೇ ಇವೆ. ಕನ್ನಡ ಮಾಧ್ಯಮ ಶಿಕ್ಷಕರಿಂದಲೇ ಮಕ್ಕಳಿಗೆ ಇಂಗ್ಲಿಷ್‌ ಪಾಠ ಮಾಡಿಸಲಾಗುತ್ತಿದೆ. ಆಂಗ್ಲ ಮಾಧ್ಯಮದ ಪುಸ್ತಕಗಳು ಸಮರ್ಪಕವಾಗಿ ಶಾಲೆಗಳಿಗೆ ತಲುಪಿಲ್ಲ. ಈ ಎಲ್ಲಾ ವಿಚಾರಗಳನ್ನು ನಾವು ಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಪ್ರಶ್ನಿಸುತ್ತೇವೆ ಎಂದು ಹೇಳಿದರು.

Read more Articles on