ಪತ್ರಿಕಾ ಭವನಕ್ಕೆ ಅನುದಾನ ನೀಡಲು ಶ್ರಮಿಸುವೆ

| Published : Jul 28 2025, 12:31 AM IST

ಪತ್ರಿಕಾ ಭವನಕ್ಕೆ ಅನುದಾನ ನೀಡಲು ಶ್ರಮಿಸುವೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲದಲ್ಲಿ ನಿರ್ಮಾಣ ಹಂತದಲ್ಲಿರುವ ಪತ್ರಿಕಾ ಭವನಕ್ಕೆ ಮಾಜಿ ಸಚಿವ ಮಹೇಶ್ ಮತ್ತು ಮಾಜಿ ಸಂಸದರಾದ ದಿ. ವಿ ಶ್ರೀನಿವಾಸ ಪ್ರಸಾದ್ ₹10 ಲಕ್ಷ ಅನುದಾನ ನೀಡಿದ್ದು ನಾನು ಸಹಾ ಭವನದ ನಕ್ಷೆ ತರಿಸಿಕೊಂಡು ಪರಿಶೀಲಿಸಿ ಲಭ್ಯತೆ ಆಧಾರದಲ್ಲಿ ಹೆಚ್ಚಿನ ಅನುದಾನ ನೀಡಲು ಶ್ರಮಿಸುವೆ ಎಂದು ಶಾಸಕ ಎ.ಆರ್‌.ಕೃಷ್ಣಮೂರ್ತಿ ಹೇಳಿದರು

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಕೊಳ್ಳೇಗಾಲದಲ್ಲಿ ನಿರ್ಮಾಣ ಹಂತದಲ್ಲಿರುವ ಪತ್ರಿಕಾ ಭವನಕ್ಕೆ ಮಾಜಿ ಸಚಿವ ಮಹೇಶ್ ಮತ್ತು ಮಾಜಿ ಸಂಸದರಾದ ದಿ. ವಿ ಶ್ರೀನಿವಾಸ ಪ್ರಸಾದ್ ₹10 ಲಕ್ಷ ಅನುದಾನ ನೀಡಿದ್ದು ನಾನು ಸಹಾ ಭವನದ ನಕ್ಷೆ ತರಿಸಿಕೊಂಡು ಪರಿಶೀಲಿಸಿ ಲಭ್ಯತೆ ಆಧಾರದಲ್ಲಿ ಹೆಚ್ಚಿನ ಅನುದಾನ ನೀಡಲು ಶ್ರಮಿಸುವೆ ಎಂದು ಶಾಸಕ ಎ.ಆರ್‌.ಕೃಷ್ಣಮೂರ್ತಿ ಹೇಳಿದರು

ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪತ್ರಕರ್ತರ ಸಾಮಾಜಿಕ ಕಳಕಳಿಯ ವರದಿಗೆ ಹೆಚ್ಚು ಆದ್ಯತೆ ನೀಡಬೇಕು, ಮೌಲ್ಯಯುತ ಸೇವೆಗೆ ಪತ್ರಕರ್ತರು ಅಣಿಯಾಗಬೇಕು. ಪತ್ರಿಕಾ ರಂಗದಲ್ಲಿ ಮೌಲ್ಯ ಅತ್ಯಂತ ಅವಶ್ಯಕ, ಈನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಮೊದಲಿಗಿಂತ ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರವನ್ನು ಸಾರ್ವಜನಿಕರು ಹೆಚ್ಚು ಅವಲಂಬಿಸಿದ್ದಾರೆ. ಅದಕ್ಕೆ ತಕ್ಕಂತೆ ಪತ್ರಿಕೋದ್ಯಮ ಅತಿ ವೇಗವಾಗಿ ಜನರನ್ನು ಆಕರ್ಷಿಸಿ ಸುದ್ದಿ ಪ್ರಚಾರದಲ್ಲಿ ದಾಪುಗಾಲಿಟ್ಟಿದೆ. ಈ ನಡುವೆ ಎಲ್ಲೆಡೆ ಪತ್ರಿಕಾ ದಿನಾಚರಣೆಯನ್ನು ಪತ್ರಕರ್ತರು ಆಚರಿಸುವ ಜೊತೆ ಜೊತೆಗೆ ಸಂಘದ ಬಲವರ್ಧನೆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ,

ಪತ್ರಿಕೆಗಳು ಜ್ಞಾನದ ಸಂಕೇತ:

ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಮಾತನಾಡಿ, ತಾಪಂ ಇಒ ಆಗಿ ಕರ್ತವ್ಯ ನಿರ್ವಹಿಸಿದ ದಿನದಿಂದಲೂ ನಾನು ಕೊಳ್ಳೇಗಾಲದ ಪತ್ರಕರ್ತರ ಕಾರ್ಯ ವೈಖರಿಯನ್ನು ನೋಡಿದ್ದೇನೆ. ಸುದ್ದಿ ಬಿತ್ತರಿಸುವ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಹೆಚ್ಚೆಚ್ಚು ಮೌಲ್ಯಾಧಾರಿತ ಸುದ್ದಿಗಳನ್ನು ನಿತ್ಯ ಜನರಿಗೆ ಮುಟ್ಟಿಸುವಲ್ಲಿ ಮುಂದಿದ್ದಾರೆ. ನನ್ನ ವಿದ್ಯಾಬ್ಯಾಸ ಕಾಲದಿಂದ ಆರಂಭಗೊಂಡ ಪತ್ರಿಕೆ ಓದುವ ಅಭ್ಯಾಸ ಇಂದು ಅಧಿಕಾರಿಯಾಗಿದ್ದರೂ ಬಿಡಲಾಗುತ್ತಿಲ್ಲ. ಕಾರಣ, ದಿನ ಪತ್ರಿಕೆಗಳು ಭಾಷಾ ಹಿಡಿತ, ವ್ಯಕ್ತಿಯ ಸಾಮರ್ಥ್ಯ, ಸಾಹಿತ್ಯಭ್ಯಾಸವನ್ನು ನೀಡುವುದಲ್ಲದೇ ಅತ್ಯದ್ಭುತ ಜ್ಞಾನವನ್ನು ನೀಡುತ್ತದೆ, ಪತ್ರಕರ್ತರ ವೖತ್ತಿ ಅತ್ಯಂತ ಪರಿಣಾಮಕಾರಿಯಾದುದು ಎಂದರು.

ಚಾ.ನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೌಲ್ಯಾಧಾರಿತ ಪತ್ರಕರ್ತರ ಸಂಖ್ಯೆ ಕ್ಷೀಣಿಸುತ್ತಿದೆ. ವೃತ್ತಿನಿರತ ಪತ್ರಕರ್ತ ಸಮಾಜದಲ್ಲಿ ತನಗೆ ದೊರೆಯುವ ಗೌರವದ ತೃಪ್ತಿಯಿಂದಲೇ ಬದುಕುತ್ತಾರೆ. ಅಂತಹ ಪ್ರಾಮಾಣಿಕ ಪತ್ರಕರ್ತರು ಎಂದೆಂದೂ ಜನಮಾನಸದಲ್ಲಿ ಉಳಿಯುತ್ತಾರೆ. ಏತನ್ಮಧ್ಯೆ, ಪತ್ರಕರ್ತರನ್ನು ಸಬಲಿಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶ್ರಮಿಸುತ್ತಿದೆ.

ಪತ್ರಕರ್ತರಿಗೆ ದೊರೆಯಬೇಕಾದ ನಿವೇಶನ, ವಸತಿ, ಆರೋಗ್ಯ ಸೇರಿದಂತೆ ಮೂಲ ಸೌಕರ್ಯವನ್ನು ಧಕ್ಕಿಸುವ ನಿಟ್ಟಿನಲ್ಲಿ ಸತತ ಪ್ರಯತ್ನದಲ್ಲಿದೆ. ಇದರಡಿಯಲ್ಲಿ ಜಿಲ್ಲಾ ಸಂಘಗಳು ಅವಿರತವಾಗಿ ಶ್ರಮಿಸುತ್ತಿದೆ, ಕೊಳ್ಳೇಗಾಲ ಶಾಸಕರು ನಿವೇಶನ ವಂಚಿತ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸುವಲ್ಲಿ ಮುಂದಾಗಬೇಕು ಎಂದರು

ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಮಾತನಾಡಿ, ಕೊಳ್ಳೇಗಾಲ ತಾಲೂಕಿನ ಪತ್ರಕರ್ತರಿಗೆ ವಿಮಾ ಸೌಲಭ್ಯ ಕಲ್ಪಿಸುವಲ್ಲಿ ವೈಯುಕ್ತಿಕವಾಗಿ ಶ್ರಮಿಸುವೆ, ಮಾಧ್ಯಮ ಮಿತ್ರರು ಅಧಿಕಾರಿಗಳನ್ನು ತಪ್ಪನ್ನು ಸಕಾರಾತ್ಮಕವಾಗಿ ತೋರಿಸುವ ಕೆಲಸ ಮಾಡುವ ಜೊತೆ ಜೊತೆಗೆ ತಾಲೂಕಿನ ಸಮಗ್ರ ಅಭಿವೖದ್ದಿಗೆ ಅಧಿಕಾರಿಗಳ ಜೊತೆ ಕೈಜೋಡಿಸಬೇಕು ಎಂದರು.

ಇದೇ ವೇಳೆ ಕೊಳ್ಳೇಗಾಲ ತಾಲೂಕಿನ ಪತ್ರಕರ್ತರಾದ ಚಿಕ್ಕಮಾಳಿಗೆ, ಎನ್.ನಟರಾಜು, ಪಿ.ಜಗದೀಶ್ ಅವರನ್ನು ಸಂಘದಿಂದದ ವಾರ್ಷಿಕ ಸೇವಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗೂಳಿಪುರ ನಂದೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು, ಜಿಲ್ಲಾ ಕಾರ್ಯದರ್ಶಿ ಡಿ.ನಟರಾಜು, ಜಿಲ್ಲಾ ನಿರ್ದೇಶಕ ಎನ್.ರಾಜೇಶ್, ತಾಲೂಕು ಸಂಘದ ಉಪಾಧ್ಯಕ್ಷ ಎಂ.ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಪವನ್ ಕುಮಾರ್, ಕಾರ್ಯದರ್ಶಿ ಎಂ.ಪಿ.ಮಹೇಶ್, ಮಾಜಿ ಅಧ್ಯಕ್ಷ ನಾಗೇಂದ್ರಸ್ವಾಮಿ, ಕೋಟಂಬಳ್ಳಿ ಗುರುಸ್ವಾಮಿ, ರಾಜಶೇಖರ್, ರಾಜು, ಚಂದ್ರಶೇಖರ್, ಅವೀನ್ ಪ್ರಕಾಶ್, ಪ್ರೇಮ್ ಸಾಗರ್, ಸಾಗರ್, ಮಹೇಶ, ಮಲ್ಲಪ್ಪ, ತೇರಂಬಳ್ಳಿ ಕುಮಾರಸ್ವಾಮಿ, ಯೂನುಸ್ , ನಿಂಪು ಸಾಗರ್ ಇನ್ನಿತರಿದ್ದರು.