ಜಾತ್ಯತೀತ ಪಾಠ ಕಾಂಗ್ರೆಸ್‌ನಿಂದ ಕಲಿಯಬೇಕಿಲ್ಲ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ

| Published : Apr 02 2024, 01:07 AM IST / Updated: Apr 02 2024, 04:32 AM IST

ಜಾತ್ಯತೀತ ಪಾಠ ಕಾಂಗ್ರೆಸ್‌ನಿಂದ ಕಲಿಯಬೇಕಿಲ್ಲ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್‌ ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಇವರಂತೆ ಒಳಗೊಂದು ಹೊರಗೊಂದು ಇಟ್ಟುಕೊಂಡು ಮಾತನಾಡುವುದಿಲ್ಲ - ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು

 ಮಂಡ್ಯ :  ಜಾತ್ಯತೀತ ಎನ್ನುವುದು ನಾವು ಹಾಕಿಕೊಳ್ಳುವ ಬಟ್ಟೆಯಲ್ಲಿರುವುದಿಲ್ಲ. ನಡವಳಿಕೆಯಲ್ಲಿರುತ್ತದೆ. ಜಾತ್ಯತೀತ ಪಾಠವನ್ನು ಕಾಂಗ್ರೆಸ್‌ನವರಿಂದ ಕಲಿಯಬೇಕಾದ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಟೀಕೆಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಸೋಮವಾರ ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಇವರಂತೆ ಒಳಗೊಂದು ಹೊರಗೊಂದು ಇಟ್ಟುಕೊಂಡು ಮಾತನಾಡುವುದಿಲ್ಲ. ಜೆಡಿಎಸ್‌ ಸತ್ತೇ ಹೋಯ್ತು, ಮುಂದಿನ ಜನ್ಮವಿದ್ದರೆ ದೇವೇಗೌಡರು ಮುಸ್ಲಿಂ ಆಗಿ ಹುಟ್ಟುತ್ತಾರೆಂತಲೂ, ಮೋದಿ ಪ್ರಧಾನಿಯಾದರೆ ದೇವೇಗೌಡರು ದೇಶಬಿಟ್ಟು ಹೋಗುತ್ತೇನೆ ಎಂದೆಲ್ಲಾ ಹೇಳಿದ್ದಾಯ್ತು. ಈಗ ಸಿದ್ಧಾಂತದ ವಿಚಾರವನ್ನು ಚರ್ಚೆಗೆ ತಂದಿದ್ದಾರೆ ಎಂದು ಮೂದಲಿಸಿದರು.

1962ರಲ್ಲೇ ದೇವೇಗೌಡರಿಗೆ ಕಾಂಗ್ರೆಸ್‌ ಬಿ-ಫಾರಂ ಕೊಟ್ಟು ಕಿತ್ತುಕೊಂಡರು. ಅಂದೇ ಗೌಡರ ಬೆನ್ನಿಗೆ ಕಾಂಗ್ರೆಸ್‌ ಚೂರಿ ಹಾಕಿತ್ತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್‌ ನಾನಾ ರೀತಿಯ ಅನ್ಯಾಯ ಮಾಡಿದ್ದರೂ ಆ ಪಕ್ಷವನ್ನು ಓಲೈಕೆ ಮಾಡಿಕೊಂಡೇ ಬಂದರು. ಕಾಂಗ್ರೆಸ್‌ನ್ನು ನಂಬಿ ತಾಆವು ನಂಬಿರುವ ಸಿದ್ಧಾಂತವನ್ನು ಉಳಿಸಲು ಹೋಗಿ ಇಂದು ಇಂತಹ ಪರಿಸ್ಥಿತಿಗೆ ಸಿಲುಕುವಂತಾಗಿದೆ ಎಂದು ಆಕ್ರೋಶದಿಂದ ನುಡಿದರು.

ಕಾಂಗ್ರೆಸ್‌ನವರು ಹಿಂದಿನಿಂದ ಏನೆಲ್ಲಾ ಅನ್ಯಾಯ ಮಾಡಿಕೊಂಡು ಬಂದರೆಂಬುದು ಈಗ ದೇವೇಗೌಡರಿಗೆ ಮನವರಿಕೆಯಾಗಿದೆ. 92ನೇ ವಯಸ್ಸಿನಲ್ಲಿ ಅವರೇನು ಪ್ರಧಾನಿಯಾಗಬೇಕಿಲ್ಲ. ಇನ್ಯಾರನ್ನೋ ಮೆಚ್ಚಿಸಲೂ ಬೇಕಿಲ್ಲ. ಇವತ್ತಿಗೂ ಜಾತ್ಯತೀತ ನೆಲೆಗಟ್ಟಿನ ಮೇಲೆ ಪಕ್ಷ ನಿಂತಿದೆ. ಕಾಂಗ್ರೆಸ್‌ನವರಂತೆ ನಂಬಿದವರ ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ನಾವೆಂದಿಗೂ ಮಾಡುವುದಿಲ್ಲ ಎಂದು ಹೇಳಿದರು.

ಸ್ವಾಭಿಮಾನ ಇವರ ಸ್ವತ್ತಾ?

ಸ್ವಾಭಿಮಾನ ಇವರ ಸ್ವತ್ತಾ. ಇವರೊಬ್ಬರಿಗೇನಾ ಸ್ವಾಭಿಮಾನ ಇರೋದು. ಹಾಸನ, ರಾಮನಗರ, ಮಂಡ್ಯ ಎಲ್ಲಾ ಇರೋದು ಕರ್ನಾಟಕದಲ್ಲೇ. ನಾನೂ ಕರ್ನಾಟಕದವನು. ಸ್ಪರ್ಧಿಸಿದರೆ ತಪ್ಪೇನು. ಸ್ವಾಭಿಮಾನ ಎನ್ನುವವರು ರಾಹುಲ್‌ಗಾಂಧಿಯನ್ನು ಉತ್ತರ ಪ್ರದೇಶದಿಂದ ಕೇರಳಕ್ಕೆ ಏಕೆ ಕರೆತರುತ್ತಿದ್ದೀರಿ. ಇಟಲಿ ಅಮ್ಮನನ್ನು ಭಾರತಕ್ಕೆ ಏಕೆ ಕರೆತಂದಿರಿ. ಸಿದ್ದರಾಮಯ್ಯನವರನ್ನು ಮೈಸೂರಿನಿಂದ ಬಾದಾಮಿಗೆ ಏಕೆ ಕರೆದುಕೊಂಡು ಹೋದಿರಿ. ಇವರೆಲ್ಲಾ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಾರೆ ಎಂದು ಜರಿದರು.

ಡಿ.ಕೆ.ಶಿವಕುಮಾರ್‌ ಕೂಡ ಟೂರಿಂಗ್‌ ಟಾಕೀಸ್‌ನಿಂದಲೇ ಬಂದವರು. ದೊಡ್ಡಾಲಹಳ್ಳಿಯಲ್ಲಿ ಟೂರಿಂಗ್‌ ಟಾಕೀಸ್‌ ಇರಲಿಲ್ವಾ. ಅದರ ಮಹತ್ವ ಇವರಿಗೆ ಗೊತ್ತಿಲ್ಲ. ಏಕೆಂದರೆ, ಈಗ ಅವರಿಗೆ ಟೂರಿಂಗ್‌ ಟಾಕೀಸ್‌ ಬೇಕಿಲ್ಲ. ಅವರು ರಾಜಕೀಯವಾಗಿ ಬೆಳೆದುಬಂದಿದ್ದಾರೆ. ಹಾಗಾಗಿ ಹಿಂದಿನದು ಯಾವುದೂ ಬೇಕಿಲ್ಲ ಎಂದು ಟೀಕಿಸಿದರು.

ಎಲೆಕ್ಷನ್ ಬಂದಿರುವ ಕಾರಣಕ್ಕೆ ಇವರಿಗೆ ಅಂಬರೀಶ್‌ ನೆನಪಾಗುತ್ತಿದೆ. ನಾವು ಅಂಬರೀಶ್‌ನ ಕೇವಲ ಬಾಯಿಮಾತಿನಲ್ಲಲ್ಲ. ಹೃದಯದಲ್ಲಿಟ್ಟುಕೊಂಡಿದ್ದೇವೆ. ಅವರೊಂದಿಗಿನ ಹಲವಾರು ವರ್ಷಗಳ ಒಡನಾಟ, ಪ್ರೀತಿ, ಅಭಿಮಾನ ಈಗಲೂ ನಮ್ಮ ಕಣ್ಣೆದುರಿಗಿದೆ. ಆವತ್ತಿದಿಲ್ಲದ ಅಕ್ಕರೆ, ಪ್ರೀತಿ ಈಗ ಅಂಬರೀಶ್‌ ವಿಚಾರದಲ್ಲಿ ಬರುತ್ತಿದೆ ಎಂದ ಕುಮಾರಸ್ವಾಮಿ, ನಾನು ಸುಮಲತಾ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಬುಧವಾರ ಮಂಡ್ಯದಲ್ಲಿ ಸಭೆ ನಡೆಸಿ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ. ಅವರು ಬೆಂಬಲಿಸುವ ವಿಶ್ವಾಸ ನನಗಿದೆ ಎಂದು ಹೇಳಿದರು.

ಇದೇ ಸಮಯದಲ್ಲಿ ಕಾಂಗ್ರೆಸ್‌ ಮುಖಂಡ ಅಮರಾವತಿ ಚಂದ್ರಶೇಖರ್‌ ಹಾಗೂ ಸಹೋದರರು ಕಾಂಗ್ರೆಸ್‌ ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕ ಎಚ್‌.ಟಿ.ಮಂಜು, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಕೆ.ಸುರೇಶ್‌ಗೌಡ, ಡಿ.ಸಿ.ತಮ್ಮಣ್ಣ, ಮುಖಂಡ ಬಿ.ಆರ್‌.ರಾಮಚಂದ್ರ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಮನ್‌ಮುಲ್‌ ಉಪಾಧ್ಯಕ್ಷ ಎಂ.ಎಸ್.ರಘುನಂದನ್‌, ಹಲಗೂರು ಗ್ರಾಪಂ ಸದಸ್ಯ ಸುರೇಂದ್ರ ಸೇರಿದಂತೆ ಇತರರಿದ್ದರು..