ಸಾರಾಂಶ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟ ದರ್ಜೆಯ ಸ್ಥಾನ ಮಾನ ದೊರಕಿದೆ. ಜಿಲ್ಲೆಯಿಂದ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವವರ ಪೈಕಿ ಎಚ್.ಡಿ.ಕುಮಾರಸ್ವಾಮಿ ನಾಲ್ಕನೆಯವರಾಗಿದ್ದಾರೆ.
ಮಂಡ್ಯ ಮಂಜುನಾಥ
ಮಂಡ್ಯ : ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟ ದರ್ಜೆಯ ಸ್ಥಾನ ಮಾನ ದೊರಕಿದೆ. ಜಿಲ್ಲೆಯಿಂದ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವವರ ಪೈಕಿ ಎಚ್.ಡಿ.ಕುಮಾರಸ್ವಾಮಿ ನಾಲ್ಕನೆಯವರಾಗಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್.ಎಂ.ಕೃಷ್ಣ, ಸಂಸದರಾಗಿದ್ದ ಅಂಬರೀಶ್ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಕೆ.ರೆಹಮಾನ್‌ಖಾನ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅವರ ನಂತರ ಮಂಡ್ಯ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿರುವ ಎಚ್.ಡಿ.ಕುಮಾರಸ್ವಾಮಿ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವುದು ಜಿಲ್ಲೆಯ ಹೆಗ್ಗಳಿಕೆಯಾಗಿದೆ.
ಮೊದಲ ಬಾರಿ ಕೇಂದ್ರ ಕ್ಯಾಬಿನೇಟ್ ಸಚಿವ:
ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ಬಾರಿ ಆಡಳಿತ ನಡೆಸಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಂಪುಟದಲ್ಲಿ ಸ್ಥಾನ ದೊರಕುತ್ತಿರುವುದು ಇದೇ ಮೊದಲಾಗಿದೆ. 1996 ರಿಂದ2024 ರವರೆಗೆ ಆರು ಬಾರಿ ರಾಜ್ಯದ ವಿವಿಧ ಕ್ಷೇತ್ರಗಳಿಂದ ಲೋಕಸಭೆಗೆ ಸ್ಪರ್ಧಿಸಿ ಮೂರು ಬಾರಿ ವಿಜೇತರಾಗಿರುವ ಎಚ್.ಡಿ.ಕುಮಾರಸ್ವಾಮಿ ನಿರೀಕ್ಷೆಯಂತೆಯೇ ಕೇಂದ್ರದಲ್ಲಿ ಸಂಪುಟ ದರ್ಜೆಯ ಸ್ಥಾನ ಲಭಿಸಿದೆ.
ಲೋಕಸಭೆ ಚುನಾವಣೆಗೆ ಮುನ್ನವೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದರೆ ಎಚ್.ಡಿ.ಕುಮಾರಸ್ವಾಮಿಗೆ ಕೇಂದ್ರ ಸಂಪುಟದಲ್ಲಿ ಕೃಷಿ ಖಾತೆ ನಿಡುವರೆಂಬ ಮಾತುಗಳು ಕೇಳಿಬಂದಿದ್ದವು. ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ನಿರೀಕ್ಷೆಗೆ ತಕ್ಕಷ್ಟು ಸ್ಥಾನಗಳು ಬಾರದಿರುವುದರಿಂದ ಮಿತ್ರಪಕ್ಷಗಳಿಗೂ ಸಂಪುಟದಲ್ಲಿ ಅವಕಾಶ ನೀಡುವ ಅನಿವಾರ್ಯತೆ ಎದುರಾಗಿದೆ. ಈ ಅನಿವಾರ್ಯತೆಯ ಕಾರಣದಿಂದ ಎಚ್.ಡಿ.ಕುಮಾರಸ್ವಾಮಿಗೆ ಕೇಂದ್ರ ಸಂಪುಟದಲ್ಲಿ ಸಚಿವರಾಗುವ ಯೋಗಾಯೋಗ ಲಭಿಸಿದೆ.
ಕೃಷ್ಣ, ಅಂಬಿ, ರೆಹಮಾನ್‌ಖಾನ್ ಬಳಿಕ ಎಚ್‌ಡಿಕೆ:
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗುವ ಮೊದಲೇ ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ಅವರ ಮಂತ್ರಿ ಮಂಡಲಗಳಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ೧೯೯೯ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುವ ಎಸ್.ಎಂ.ಕೃಷ್ಣ ಮತ್ತೆ ೨೦೦೮ರಲ್ಲಿ ಯುಪಿಎ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನ ಪಡೆದು ವಿದೇಶಾಂಗ ವ್ಯವಹಾರಗಳ ಖಾತೆಯನ್ನು ನಿರ್ವಹಿಸಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಅಂಬರೀಶ್ ಅವರು ಡಾ.ಮನಮೋಹನ್‌ಸಿಂಗ್ ಸರ್ಕಾರದಲ್ಲಿ ೨೦೦೬ ರಿಂದ ೨೦೦೭ರವರೆಗೆ ಕೇಂದ್ರ ವಾರ್ತಾ ಮತ್ತು ಪಸಾರ ಖಾತೆಯ ರಾಜ್ಯಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇವರ ಬಳಿಕ ರಾಜ್ಯಸಭಾ ಸದಸ್ಯರಾಗಿದ್ದ ಕೆ. ರೆಹಮಾನ್‌ಖಾನ್ ಅವರು ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ೨೮ ಅಕ್ಟೋಬರ್ ೨೦೧೨ರಿಂದ ೨೫ ಮೇ ೨೦೧೪ರವರೆಗೆ ಸಂಪುಟ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಮಂಡ್ಯದಿಂದ ಆಯ್ಕೆಯಾದ ಯೋಗ:
ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ಮಂಡ್ಯ ಜಿಲ್ಲೆ ಪ್ರಮುಖ ಪಾತ್ರ ವಹಿಸಿದಂತೆಯೇ, ಇದೀಗ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗುವುದರೊಂದಿಗೆ ಕೇಂದ್ರದಲ್ಲಿ ಮಂತ್ರಿಯಾಗುವ ಯೋಗವನ್ನೂ ಜಿಲ್ಲೆಯ ಜನರು ದೊರಕಿಸಿಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಆಯ್ಕೆಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರ ಸಂಪುಟದಲ್ಲಿ ಕೃಷಿ ಖಾತೆ ಜವಾಬ್ದಾರಿ ನಿರ್ವಹಿಸುವ ಮಹತ್ವಾಕಾಂಕ್ಷೆಯಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡ ಕಾರಣದಿಂದಲೇ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದಕ್ಕೆ ಸಾಧ್ಯವಾಗಿದೆ. ಹಾಗಾಗಿ ಕುಮಾರಸ್ವಾಮಿ ಅವರಿಗೆ ಸಂಪುಟದಲ್ಲಿ ಸ್ಥಾನ ಅಲಂಕರಿಸುವ ಅವಕಾಶ ದೊರಕಿದೆ.
ಮಾಜಿ ಪ್ರಧಾನಿ ಮಗ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಅನುಭವವನ್ನು ಗುರುತಿಸಿ ನರೇಂದ್ರ ಮೋದಿ ಅವರು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಜೊತೆಗೆ ರಾಜಕೀಯ ಬೆಳವಣಿಗೆಗಳು ಜೆಡಿಎಸ್ ನಿರೀಕ್ಷೆಯಂತೆಯೇ ನಡೆಯುತ್ತಿರುವುದು ಕುತೂಹಲಕ್ಕೂ ಕಾರಣವಾಗಿದೆ.
ದೇವೇಗೌಡರ ಪ್ರಭಾವ:
ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರನ್ನು ನರೇಂದ್ರ ಮೋದಿ ಸಂಪುಟಕ್ಕೆ ಸೇರಿಸಬೇಕೆಂಬ ಉದ್ದೇಶದಿಂದಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎರಡು ದಿನ ಮುಂಚಿತವಾಗಿಯೇ ದೆಹಲಿಗೆ ತೆರಳಿ ಮೋದಿ ಸೇರಿದಂತೆ ಎನ್‌ಡಿಎ ಮಿತ್ರ ಪಕ್ಷದವರ ಮೇಲೆ ಪ್ರಭಾವ ಬೀರಿದ್ದರು. ದೇವೇಗೌಡರ ಪ್ರಭಾವವೂ ಎಚ್‌ಡಿಕೆಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವುದಕ್ಕೆ ಪ್ರಮುಖ ಕಾರಣವೆಂದೇ ಹೇಳಲಾಗುತ್ತಿದೆ.
ಕೃಷಿ ಖಾತೆಯ ಮೇಲೆ ಕುಮಾರಸ್ವಾಮಿ ಅವರು ಕಣ್ಣಿಟ್ಟಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಗಮನ ಸೆಳೆಯುವಂತಹ ಕಾರ್ಯವನ್ನು ಮಾಡುವುದರ ಜೊತೆಗೆ ತಮ್ಮ ರಾಜಕೀಯ ಬದ್ಧ ವೈರಿಯಾಗಿರುವ ಎನ್.ಚಲುವರಾಯಸ್ವಾಮಿ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿರುವುದರಿಂದ ಅವರನ್ನು ಹತೋಟಿಗೆ ತೆಗೆದುಕೊಳ್ಳುವುದು ಇದರ ಹಿಂದಿರುವ ಎಚ್‌ಡಿಕೆ ಅಜೆಂಡಾವಾಗಿದೆ ಎಂದು ಹೇಳಲಾಗುತ್ತಿದೆ.
ಕಾವೇರಿ ಸಮಸ್ಯೆಗೆ ಸೂಚಿಸುವರೇ ಪರಿಹಾರ?
ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಿ ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವ ಭರವಸೆಯನ್ನು ಜಿಲ್ಲೆಯ ಜನರಿಗೆ ನೀಡಿದ್ದಾರೆ. ಮಂತ್ರಿಯಾಗುವ ಅವಕಾಶ ಪಡೆದುಕೊಂಡು ಯಾವ ರೀತಿಯಲ್ಲಿ ಶತಮಾನಗಳಷ್ಟು ಹಳೆಯದಾದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಾರೆ ಎನ್ನುವುದು ಎಲ್ಲರಲ್ಲೂ ತೀವ್ರ ಕುತೂಹಲವನ್ನು ಕೆರಳಿಸಿದೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಯನ್ನಾಗಲೀ, ಅವರು ಭಾರೀ ಮತಗಳ ಅಂತರದಿಂದ ಗೆದ್ದು ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯುವರೆಂಬ ಬಗ್ಗೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಅಳೆದೂ ತೂಗಿ ಅಂತಿಮವಾಗಿ ಎಚ್‌ಡಿಕೆ ಚುನಾವಣಾ ಅಖಾಡ ಪ್ರವೇಶಿಸಿದರು. ಯಾರೂ ನಿರೀಕ್ಷಿಸದ ೨.೮೪ ಲಕ್ಷ ಮತಗಳ ಅಂತರದಿಂದ ಗೆದ್ದು ಈಗ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ಸೇರುವ ಉತ್ಸಾಹದಲ್ಲಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣಾ ಗೆಲುವಿನಿಂದ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯೊಳಗೆ ಕಳೆದುಹೋಗುತ್ತಿದ್ದ ಜೆಡಿಎಸ್‌ಗೆ ಸುಭದ್ರ ನೆಲಗಟ್ಟು ಒದಗಿಸಿದ್ದಾರೆ. ಇದೀಗ ಲೋಕಸಭೆಯಲ್ಲಿ ಕುಮಾರಸ್ವಾಮಿ ಗೆಲುವು ರಾಷ್ಟ್ರ ರಾಜಕಾರಣದತ್ತ ಮುಖ ಮಾಡುವಂತೆ ಮಾಡಿದ್ದರೆ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ನೂತನ ಅಧಿಪಪತ್ಯವನು ಪುತ್ರ ನಿಖಿಲ್ ಹೆಗಲಿಗೆ ವಹಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಕಾಂಗ್ರೆಸ್‌ನೊಳಗೆ ಸೂತಕದ ಛಾಯೆ..!
ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಜಿಲ್ಲಾ ಕಾಂಗ್ರೆಸ್‌ನೊಳಗೆ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಫಲಿತಾಂಶ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಶಾಸಕರನ್ನು ಬೆಚ್ಚಿ ಬೀಳಿಸಿದೆ. ಇನ್ನೇನು ಜೆಡಿಎಸ್ ಕತೆ ಜಿಲ್ಲೆಯಲ್ಲಿ ಮುಗಿದೇಹೋಯಿತು ಎಂದುಕೊಳ್ಳುತ್ತಿರುವಾಗಲೇ ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವು, ನಂತರದಲ್ಲಿ ಕೇಂದ್ರದಲ್ಲಿ ಸಿಕ್ಕಿರುವ ಮಂತ್ರಿಸ್ಥಾನ ಇವೆಲ್ಲವೂ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಮುಂದೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಹೇಗೆ ಎದುರಿಸುವುದು, ಒಂದೊಮ್ಮೆ ತೀವ್ರವಾಗಿ ವಿರೋಧಿಸಿದರೆ ಜನರ ಕೆಂಗಣ್ಣಿಗೆ ಗುರಿಯಾಗಬಹುದೇನೋ ಎಂಬ ಭಾವ ಅವರನ್ನು ಕಾಡುತ್ತಿದೆ. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಸೃಷ್ಟಿಯಾಗಿದ್ದ ಪರಿಸ್ಥಿತಿ ೨೦೨೪ರಲ್ಲಿ ಮತ್ತೊಮ್ಮೆ ಜಿಲ್ಲೆಯೊಳಗೆ ಸೃಷ್ಟಿಯಾಗಿರುವಂತೆ ಕಾಂಗ್ರೆಸ್ಸಿಗರಿಗೆ ಭಾಸವಾಗುತ್ತಿದೆ. ಹಿಂದೆ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ನವರನ್ನು ಸಮರ್ಥವಾಗಿ ಎದುರಿಸುವುದಕ್ಕೆ ಸಂಸದೆ ಸುಮಲತಾ ಇದ್ದರು. ಈಗ ಅವರೂ ಎನ್‌ಡಿಎ ಪಾಲಾಗಿದ್ದಾರೆ. ಈಗ ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ಸಿಗರ ನಿದ್ದೆಗೆಡಿಸಿರುವುದಂತೂ ಸತ್ಯ.