ಬೆಂಗಳೂರು : ರಾಜ್ಯ ಬಜೆಟ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರ ಕನಕಪುರ ಮತ್ತು ತವರು ಜಿಲ್ಲೆ ಬೆಂಗಳೂರು ದಕ್ಷಿಣಕ್ಕೆ (ರಾಮನಗರ) ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಾಣ

ಕನಕಪುರದಲ್ಲಿ ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಾಣ, ಕನಕಪುರ ಪಟ್ಟಣದಲ್ಲಿ ಅರ್ಕಾವತಿ ನದಿ ತೀರ ಅಭಿವೃದ್ಧಿ, ತಾಲೂಕಿನ ಹೊಸದೊಡ್ಡಿಯಲ್ಲಿ ಚೆಕ್‌ಡ್ಯಾಂ ನಿರ್ಮಾಣ, ಕನಕಪುರದಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಾಣದಂತಹ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಬೆಂಗಳೂರು ದಕ್ಷಿಣಕ್ಕೂ ಹಲವು ಯೋಜನೆ

ಅದರೊಂದಿಗೆ ಡಿ.ಕೆ.ಶಿವಕುಮಾರ್‌ ಅವರ ತವರು ಜಿಲ್ಲೆ ಬೆಂಗಳೂರು ದಕ್ಷಿಣಕ್ಕೂ ಹಲವು ಯೋಜನೆ ನೀಡಲಾಗಿದೆ. ಮಾಗಡಿಯಿಂದ ರಾಮನಗರ, ಕನಕಪುರ ಮಾರ್ಗದವಾಗಿ ತಮಿಳುನಾಡು ಗಡಿ ಭಾಗದಲ್ಲಿನ ಹುಣಸನಹಳ್ಳಿವರೆಗಿನ 95 ಕಿಮೀ ರಸ್ತೆ ಅಭಿವೃದ್ಧಿ, ರಾಮನಗರದಲ್ಲಿ ಸಿಲ್ಕ್‌ ಪಾರ್ಕ್‌ ಸ್ಥಾಪನೆ, ರಾಮನಗರ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಹಾಗೂ ರಾಮನಗರ ಮತ್ತು ಕನಕಪುರ ತಾಲೂಕುಗಳ 46 ಕೆರೆಗಳನ್ನು ತುಂಬಿಸುವ ಯೋಜನೆಗಳ ಅನುಷ್ಠಾನಗೊಳಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.