ಸಾರಾಂಶ
ಕಾಂಗ್ರೆಸ್ ಹೈಕಮಾಂಡ್, ಶಿಗ್ಗಾಂವಿ ಕ್ಷೇತ್ರಕ್ಕೆ ಸತತವಾಗಿ ಆರನೇ ಬಾರಿಗೆ ಮುಸ್ಲಿಂ ಸಮುದಾಯವನ್ನು ಆಯ್ಕೆ ಮಾಡಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲುಂಡಿದ್ದ ಯಾಸೀರ್ ಅಹಮದ್ ಪಠಾಣ್ ಅವರಿಗೆ ಟಿಕೆಟ್ ದಯಪಾಲಿಸಿದೆ.
ಬೆಂಗಳೂರು : ಅಲ್ಪಸಂಖ್ಯಾತ ನಾಯಕರ ಒತ್ತಡಕ್ಕೆ ಕಡೆಗೂ ಮಣಿದಿರುವ ಕಾಂಗ್ರೆಸ್ ಹೈಕಮಾಂಡ್, ಶಿಗ್ಗಾಂವಿ ಕ್ಷೇತ್ರಕ್ಕೆ ಸತತವಾಗಿ ಆರನೇ ಬಾರಿಗೆ ಮುಸ್ಲಿಂ ಸಮುದಾಯವನ್ನು ಆಯ್ಕೆ ಮಾಡಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲುಂಡಿದ್ದ ಯಾಸೀರ್ ಅಹಮದ್ ಪಠಾಣ್ ಅವರಿಗೆ ಟಿಕೆಟ್ ದಯಪಾಲಿಸಿದೆ.
ತನ್ಮೂಲಕ ಕಳೆದ ಐದು ಬಾರಿ ಸೋಲುಂಡಿದ್ದ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ತಪ್ಪಿಸಿ ಪಂಚಮಸಾಲಿ ಸಮುದಾಯಕ್ಕೆ ಈ ಬಾರಿ ಅವಕಾಶ ನೀಡಲಿದೆ ಎಂಬ ನಿರೀಕ್ಷೆ ಹುಸಿ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಠಾಣ್ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿಗ್ಗಾಂವಿಯಲ್ಲಿ 10 ಸಾವಿರ ಲೀಡ್ ಪಡೆದಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಕ್ಷೇತ್ರವನ್ನು ಸಮುದಾಯಕ್ಕೆ ಉಳಿಸಲು ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ. ಎಲ್ಲ ಆಕಾಂಕ್ಷಿಗಳು ಕಳೆದ ಕೆಲ ದಿನಗಳಿಂದ ಒಗ್ಗೂಡಿ ಪ್ರಚಾರದಲ್ಲಿ ತೊಡಗಿದ್ದೆವು. ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುವುದಾಗಿ ನಿರ್ಧರಿಸಿದ್ದೆವು. ಅದರಂತೆ, ಪಕ್ಷದ ಗೆಲುವಿಗಾಗಿ ಎಲ್ಲರೂ ಕೆಲಸ ಮಾಡುತ್ತಾರೆ ಎಂದಿದ್ದಾರೆ.
ವೈಶಾಲಿಗೆ ಟಿಕೆಟ್ ಮಿಸ್: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಮೀಕ್ಷಾ ವರದಿ ಆಧರಿಸಿ ಶಿಗ್ಗಾಂವಿ ಕ್ಷೇತ್ರಕ್ಕೆ ಪಂಚಮಸಾಲಿಗೆ ಟಿಕೆಟ್ ನೀಡಬೇಕು ಎಂದು ವಾದಿಸಿದ್ದರು. ಅದರಂತೆ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಪುತ್ರಿ ವೈಶಾಲಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ, ಮುಸ್ಲಿಂ ಮುಖಂಡರ ಒತ್ತಡದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಟ್ಟು ಹಿಡಿದ ಕಾರಣ ಒತ್ತಡಕ್ಕೆ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕಾಯಿತು ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.ಈ ಬಾರಿಯ ಉಪ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ನಾಯಕತ್ವವು ಸಂಡೂರು ಹಾಗೂ ಚನ್ನಪಟ್ಟಣದಲ್ಲಿ ಅತ್ಯಂತ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ದರಿಸಿತ್ತು. ಹೀಗಾಗಿಯೇ ಬಿಜೆಪಿಯ ಯೋಗೇಶ್ವರ್‌ಗೆ ಬಲೆ ಬೀಸಿ ಕಡೆಗೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಿದೆ.
ಇದೇ ರೀತಿ ಗೆಲ್ಲುವ ಮಾನದಂಡವನ್ನು ಮಾತ್ರ ಇಟ್ಟುಕೊಂಡು ಶಿಗ್ಗಾಂವಿಯಲ್ಲೂ ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಉದ್ದೇಶಿಸಿತ್ತು. ಅದರಂತೆ ನಡೆಸಿದ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಈ ಬಾರಿ ಟಿಕೆಟ್ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಏಕೆಂದರೆ, ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ಗೆ ಟಿಕೆಟ್ ನೀಡಿರುವುದರಿಂದ ಆ ಪಕ್ಷದಲ್ಲಿ ಒಳಬೇಗುದಿ ತೀವ್ರವಾಗಿದೆ.
ಇದರ ಲಾಭ ಪಡೆಯಲು ಅತ್ಯತ್ತಮ ಅವಕಾಶ ಕಾಂಗ್ರೆಸ್ಸಿಗಿದೆ. ಕ್ಷೇತ್ರದ ಮುಸ್ಲಿಂ ನಾಯಕತ್ವವನ್ನು ಪರ್ಯಾಯ ಹುದ್ದೆ-ಸ್ಥಾನ ಮಾನ ನೀಡುವ ಭರವಸೆಯಿಂದ ಮನವೊಲಿಸಿ ಪಂಚಮಸಾಲಿಗೆ ಟಿಕೆಟ್ ನೀಡಿದರೆ ಉತ್ತಮ ಎಂಬ ವರದಿ ಹೈಕಮಾಂಡ್ ಮುಟ್ಟಿತ್ತು. ಅದರಂತೆ ಹೈಕಮಾಂಡ್ ಕೂಡ ವಿನಯ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿಗೆ ಟಿಕೆಟ್ ನೀಡಲು ನಿರ್ಧರಿಸಿತ್ತು.
ಆದರೆ, ರಾಜ್ಯದ ಮುಸ್ಲಿಂ ಮುಖಂಡರು ಕ್ಷೇತ್ರವನ್ನು ಮುಸ್ಲಿಂ ಸಮುದಾಯಕ್ಕೆ ಉಳಿಸಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸದರಿ ಕ್ಷೇತ್ರದಲ್ಲಿ 10 ಸಾವಿರ ಲೀಡ್ ಕಾಂಗ್ರೆಸ್‌ಗೆ ದೊರಕಿದೆ. ಇದರ ಆಧಾರದ ಮೇಲೆ ಈ ಬಾರಿ ಗೆಲ್ಲುವ ಅವಕಾಶವಿದೆ. ಅಲ್ಲದೆ, ಮುಸ್ಲಿಮರಿಗೆ ಟಿಕೆಟ್ ನೀಡುವ ಕ್ಷೇತ್ರ ಎನಿಸಿರುವ ಶಿಗ್ಗಾಂವಿಯನ್ನು ಅನ್ಯ ಸಮುದಾಯಕ್ಕೆ ನೀಡಿದರೆ ರಾಷ್ಟ್ರ ಮಟ್ಟದಲ್ಲಿ ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ವಾದಿಸಿದ್ದರು.
ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ನಾಯಕರ ಒತ್ತಡಕ್ಕೆ ಮಣಿದು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮಟ್ಟದಲ್ಲಿ ಪ್ರಬಲ ಲಾಬಿ ನಡೆಸಿದರು. ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ದೂರವಾಣಿಯಲ್ಲಿ ಸಮಾಲೋಚನೆ ನಡೆಸಿ, ಕ್ಷೇತ್ರ ಮುಸ್ಲಿಂ ಸಮುದಾಯಕ್ಕೆ ಸಿಗುವಂತೆ ನೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.