ಸಾರಾಂಶ
ಎಡ ಬಿಡದೇ ಸುರಿಯುತ್ತಿರುವ ಮಳೆಯಿಂದ ನಗರದ ವಿವಿಧ ಭಾಗದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಸ್ವತಃ ಕರೆ ಸ್ವೀಕರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಬೆಂಗಳೂರು : ನಗರದಲ್ಲಿ ಎಡ ಬಿಡದೇ ಸುರಿಯುತ್ತಿರುವ ಮಳೆಯಿಂದ ನಗರದ ವಿವಿಧ ಭಾಗದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಸ್ವತಃ ಕರೆ ಸ್ವೀಕರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಉಪಮುಖ್ಯಮಂತ್ರಿ ಎಲ್ಲಾ ವಲಯ ಅಧಿಕಾರಿಗಳ ಜತೆಗೆ ಆನ್‌ಲೈನ್‌ನಲ್ಲಿ ಸಭೆ ನಡೆಸಿದರು. ಮಳೆ ಅನಾಹುತ ನಿಯಂತ್ರಣ ಕ್ರಮಗಳು, ನಿಯಂತ್ರಣ ಕೊಠಡಿ ಕಾರ್ಯನಿರ್ವಹಣೆ, ಸ್ವಚ್ಛತಾ ಡ್ರೈವ್ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಚರ್ಚಿಸಿದರು.
ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ರಾಜಕಾಲುವೆ, ತಗ್ಗು ಪ್ರದೇಶಗಳ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕಳೆದ 24 ತಾಸುಗಳಿಂದ ವಾಯುಭಾರ ಕುಸಿತ ಉಂಟಾಗಿ ಒಂದು ದಿನದಲ್ಲಿ ಬರಬೇಕಾದ ಸರಾಸರಿ ಮಳೆಗಿಂತ ಶೇ.228 ರಷ್ಟು ಮಳೆ ಹೆಚ್ಚು ಬಂದಿದೆ. ಹೀಗಾಗಿ, ಮುಂದಿನ ಮೂರು ದಿನಗಳ ಕಾಲ ನಾಗರಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.