ಬೀದರಲ್ಲಿ ಶೂಟೌಟ್‌, ಎಟಿಎಂ ಹಣ ಲೂಟಿ - ಒಬ್ಬ ಸಿಬ್ಬಂದಿ ಕೊಂದು 93 ಲಕ್ಷ ರು. ಜತೆ ಪರಾರಿ - ಒಬ್ಬನ ಬಂಧನ

| Published : Jan 17 2025, 09:05 AM IST / Updated: Jan 17 2025, 09:29 AM IST

ATm

ಸಾರಾಂಶ

ಕರ್ನಾಟಕದ ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸುತ್ತಿದ್ದ ಸಿಬ್ಬಂದಿ ಹತ್ಯೆಗೈದು ಹಣದ ಸಮೇತ ಹೈದ್ರಾಬಾದ್‌ಗೆ ಪರಾರಿಯಾಗಿದ್ದ ಇಬ್ಬರು ದರೋಡೆಕೋರರ ಗುಂಪು ಅಲ್ಲೂ ಬೀದರ್‌ ಮತ್ತು ಹೈದ್ರಾಬಾದ್‌ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದೆ.

ಹೈದರಾಬಾದ್‌: ಕರ್ನಾಟಕದ ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸುತ್ತಿದ್ದ ಸಿಬ್ಬಂದಿ ಹತ್ಯೆಗೈದು ಹಣದ ಸಮೇತ ಹೈದ್ರಾಬಾದ್‌ಗೆ ಪರಾರಿಯಾಗಿದ್ದ ಇಬ್ಬರು ದರೋಡೆಕೋರರ ಗುಂಪು ಅಲ್ಲೂ ಬೀದರ್‌ ಮತ್ತು ಹೈದ್ರಾಬಾದ್‌ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದೆ. ಆದರೆ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಕಾಲಿಗೆ ಗುಂಡೇಟು ಬಿದ್ದ ಕಾರಣ ಓರ್ವ ಆರೋಪಿ ಸಿಕ್ಕಿಬಿದ್ದಿದ್ದು, ಮತ್ತೊಬ್ಬ ತಪ್ಪಿಸಿಕೊಂಡಿದ್ದಾನೆ.

ಗುಂಡಿನ ದಾಳಿ:

ಬೀದರ್‌ನಲ್ಲಿ ದರೋಡೆ ಮಾಡಿದ ತಂಡ, ಹೈದ್ರಾಬಾದ್‌ಗೆ ತೆರಳಿದ ಸುಳಿವು ಪಡೆದ ಬೀದರ್ ಪೊಲೀಸರು ಈ ಕುರಿತು ಹೈದ್ರಾಬಾದ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೊತೆಗೆ ತಾವೂ ಅಲ್ಲಿಗೆ ತೆರಳಿದ್ದರು. ಹೈದ್ರಾಬಾದ್‌ನ ಅಫ್ಜಲ್‌ಗುಂಜ್‌ ಬಳಿ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು ಅವರ ಬಂಧನಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರನ್ನು ಕಂಡ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಕೂಡಾ ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಆರೋಪಿ ಕಾಲಿಗೆ ಗುಂಡು ತಗುಲಿ ಆತ ಸಿಕ್ಕಿಬಿದ್ದಿದ್ದಾನೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಗಾಯಗೊಂಡ ದರೋಡೆಕೋರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಬೀದರ್‌ :   ಎಟಿಎಂಗೆ ಹಣ ತುಂಬಿಸುವ ವಾಹನದ ಮೇಲೆ ಹಾಡಹಗಲೇ, ಹತ್ತಾರು ಜನರ ಸಮ್ಮುಖ ಬ್ಯಾಂಕ್‌ ಎದುರೇ ದಾಳಿ ಮಾಡಿರುವ ಇಬ್ಬರು ದರೋಡೆಕೋರರು, ಎಟಿಎಂ ಸಿಬ್ಬಂದಿ ಮೇಲೆ ಗುಂಡು ಹಾರಿಸಿ 93 ಲಕ್ಷ ರು. ಹಣದ ಸಮೇತ ಪರಾರಿಯಾಗಿರುವ ಆತಂಕಕಾರಿ ಘಟನೆ ಬೀದರ್‌ ನಗರದಲ್ಲಿ ಗುರುವಾರ ನಡೆದಿದೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯದ ಬಳಿಯೇ ನಡೆದ ಈ ಘಟನೆಯಲ್ಲಿ ಎಟಿಎಂಗೆ ಹಣ ತುಂಬಿಸುವ ಸಂಸ್ಥೆಯ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾನೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಆತನನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ನಡುವೆ, ಬೀದರ್‌ ಪೊಲೀಸರು ದರೋಡೆಕೋರರ ಬೆನ್ನತ್ತಿದ್ದು, ಹೈದರಾಬಾದ್‌ನಲ್ಲಿ ಅವರನ್ನು ಬಂಧಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೂ ಶೂಟೌಟ್‌ಗೆ ಯತ್ನ ನಡೆದಿದೆ. ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ಒಬ್ಬ ದರೋಡೆಕೋರ ಗಾಯಗೊಂಡಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದು, ಆತನಿಗಾಗಿ ಶೋಧ ತೀವ್ರಗೊಂಡಿದೆ.

ದರೋಡೆಕೋರರ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಗಿರೀಶ್‌ ವೆಂಕಟ್‌ (42) ಎಂದು ಗುರುತಿಸಲಾಗಿದೆ. ಶಿವಕುಮಾರ ಗುನ್ನಳ್ಳಿ ಎಂಬುವರು ಗಾಯಾಳು. ಹಣ ಸಾಗಿಸುವ ವೇಳೆ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಆಗಿದ್ದೇನು?

ಎಟಿಎಂಗಳಿಗೆ ಹಣ ತುಂಬಿಸುವ ಸಿಎಂಎಸ್‌ (ಕ್ಯಾಶ್‌ ಮ್ಯಾನೇಜ್‌ಮೆಂಟ್‌ ಸರ್ವೀಸ್) ಕಂಪನಿಯ ಸಿಬ್ಬಂದಿ ಗುರುವಾರ ಬೆಳಗ್ಗೆ 10.50ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ಎಸ್‌ಬಿಐ ಶಾಖೆಯಿಂದ ಹಣ ಸಾಗಿಸಲು ಮುಂದಾಗಿದ್ದಾರೆ. ಹಣದ ಪೆಟ್ಟಿಗೆಯನ್ನು ವಾಹನಕ್ಕೆ ತುಂಬುವಾಗ ಅದಾಗಲೇ ಸ್ಥಳದಲ್ಲಿ ಹೊಂಚು ಹಾಕಿ ಕುಳಿತಿದ್ದ ಇಬ್ಬರು ದುಷ್ಕರ್ಮಿಗಳು, ಸಿಬ್ಬಂದಿ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ಅಷ್ಟಾದರೂ ಪೆಟ್ಟಿಗೆಯನ್ನು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಗಿರೀಶ್‌ ವೆಂಕಟ ಅವರ ಕಾಲು, ಎದೆ, ತಲೆ ಹಿಂಭಾಗಕ್ಕೆ ಗುಂಡು ಹಾರಿಸಿದ್ದಾರೆ. ಇನ್ನೊಬ್ಬ ಸಿಬ್ಬಂದಿ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಗುಂಡು ಪಕ್ಕಕ್ಕೆ ಬಿದ್ದಿದೆ.

ಕೂಡಲೇ ಅನತಿ ದೂರದಲ್ಲಿದ್ದ ಬೈಕ್‌ ಮೇಲೆ ಪೆಟ್ಟಿಗೆ ಇಟ್ಟುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆ ವೇಳೆ ಪೆಟ್ಟಿಗೆ ಕಳಚಿ ನೆಲಕ್ಕೆ ಬಿದ್ದಿದ್ದು, ಹಣ ಚೆಲ್ಲಿದೆ. ದರೋಡೆಕೋರರು ಪರಾರಿಯಾಗಿದ್ದು, ಅಲ್ಲಿ ಸಿಕ್ಕ 5 ಲಕ್ಷ ರು. ಹಣವನ್ನು ಜನರು ಬ್ಯಾಂಕ್‌ಗೆ ಒಪ್ಪಿಸಿದ್ದಾರೆ. ದರೋಡೆ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಕಲ್ಲು ತೂರುವ ಹಾಗೂ ಇತರರು ವಿಡಿಯೋ ಮಾಡುವ ದೃಶ್ಯಗಳು ವೈರಲ್‌ ಆಗಿವೆ.

ಸ್ಥಳಕ್ಕೆ ತಕ್ಷಣವೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಎಎಸ್‌ಪಿ ಚಂದ್ರಕಾಂತ ಪೂಜಾರಿ ಹಾಗೂ ಡಿಎಸ್‌ಪಿ ಶಿವನಗೌಡ ಪಾಟೀಲ್‌ ಧಾವಿಸಿದ್ದು, ಬೆರಳಚ್ಚು ತಜ್ಞರು, ಶ್ವಾನ ದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ನಾಲ್ಕು ತಂಡಗಳನ್ನು ರಚಿಸಿದ್ದು ಆದಷ್ಟು ಬೇಗ ಪತ್ತೆ ಮಾಡಲಾಗುತ್ತದೆ ಎಂದು ಪೊಲೀಸ್‌ ವರಿಷ್ಠರು ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಕಲಬುರಗಿ ವಲಯ ಐಜಿಪಿ ಅಜಯ ಹಿಲೋರಿ ಭೇಟಿ ನೀಡಿದರು.

ಭತ್ರತಾ ಲೋಪ

ಭಾರಿ ಪ್ರಮಾಣದ ಹಣ ಸಾಗಾಣಿಕೆ ವೇಳೆ ಕನಿಷ್ಠ ಭದ್ರತಾ ವ್ಯವಸ್ಥೆಯೂ ಇಲ್ಲಿರಲಿಲ್ಲ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬ್ಯಾಂಕ್‌ ಆವರಣದಲ್ಲಿ ಬ್ಯಾಂಕ್‌ ಭದ್ರತಾ ಸಿಬ್ಬಂದಿ ಸಮ್ಮುಖದಲ್ಲಿ ಮತ್ತು ವಾಹನಕ್ಕೆ ನಿಯೋಜಿತ ಶಸ್ತ್ರಸಜ್ಜಿತ ಗನ್‌ಮ್ಯಾನ್‌ ಭದ್ರತೆಯಲ್ಲಿ ಹಣ ಸಾಗಿಸಬೇಕಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ಬ್ಯಾಂಕ್‌ ಹೊರಾಂಗಣದಲ್ಲಿ ಅದೂ ಮುಖ್ಯ ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸಿ, ಭದ್ರತಾ ಸಿಬ್ಬಂದಿಯೂ ಇಲ್ಲದೆ ಹಣ ವಾಹನಕ್ಕೆ ಸಾಗಿಸುತ್ತಿದ್ದದ್ದು ಅದರಲ್ಲೂ ವಾಹನ ಚಾಲಕ ಆ ಸಂದರ್ಭದಲ್ಲಿ ಇಲ್ಲಿರದಿದ್ದದ್ದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.

ವಾಹನ ಚಾಲಕ ಇಲ್ಲಿನ ಹಳ್ಳದಕೇರಿ ನಿವಾಸಿ ರಾಜಶೇಖರ ಅಲ್ಲೇಕೆ ಇರಲಿಲ್ಲ, ಗನ್‌ಮ್ಯಾನ್‌ ಅರ್ಜುನ್‌ ಸಹ ಕರ್ತವ್ಯಕ್ಕೆ ಬಂದಿರಲಿಲ್ಲ, ಲೂಟಿಕೋರರು ಹಣ ದೋಚುತ್ತಿದ್ದ ಸಂದರ್ಭ ಪೆಟ್ಟಿಗೆ ಬೀಗ ತೆರೆದೇ ಇದ್ದದ್ದು ಪೊಲೀಸರ ಅನುಮಾನ ಮತ್ತು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಮಾಡಿದೆ.