ನನ್ನ ನಾಯಕತ್ವದಲ್ಲಿ ಚುನಾವಣೆ ನಡೆದಾಗ ಡಿಕೆ ಡಿಕೆ ಎಂದು ಕೂಗಿ - ಡಿಸಿಎಂ ಡಿಕೆಶಿ

| N/A | Published : Feb 22 2025, 11:50 AM IST

dk shivakumar

ಸಾರಾಂಶ

‘ನಾನು ಗಟ್ಟಿಯಾಗಿದ್ದು, ನಾನು ಎಲ್ಲೂ ಬಿಟ್ಟು ಹೋಗುವುದಿಲ್ಲ. ಇನ್ನೂ ಏಳೆಂಟು ವರ್ಷ ರಾಜಕೀಯದಲ್ಲಿರುತ್ತೇನೆ. ನಾನು ಮುಂದೆ ಚುನಾವಣೆಗೆ ಸ್ಪರ್ಧಿಸಿದಾಗ, ನನ್ನ ನಾಯಕತ್ವದಲ್ಲಿ ಚುನಾವಣೆ ನಡೆದಾಗ ನನ್ನ ಹೆಸರಿನ ಘೋಷಣೆಗಳನ್ನು ಕೂಗಿ’ ಎಂದು  ಡಿ.ಕೆ. ಶಿವಕುಮಾರ್‌ ಸರ್ಕಾರಿ ನೌಕರರಿಗೆ ಸೂಚಿಸಿದ್ದಾರೆ.

 ಬೆಂಗಳೂರು : ‘ನಾನು ಗಟ್ಟಿಯಾಗಿದ್ದು, ನಾನು ಎಲ್ಲೂ ಬಿಟ್ಟು ಹೋಗುವುದಿಲ್ಲ. ಇನ್ನೂ ಏಳೆಂಟು ವರ್ಷ ರಾಜಕೀಯದಲ್ಲಿರುತ್ತೇನೆ. ನಾನು ಮುಂದೆ ಚುನಾವಣೆಗೆ ಸ್ಪರ್ಧಿಸಿದಾಗ, ನನ್ನ ನಾಯಕತ್ವದಲ್ಲಿ ಚುನಾವಣೆ ನಡೆದಾಗ ನನ್ನ ಹೆಸರಿನ ಘೋಷಣೆಗಳನ್ನು ಕೂಗಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸರ್ಕಾರಿ ನೌಕರರಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳ ಬದಲಾವಣೆಯ ಚರ್ಚೆ ನಡೆಯುತ್ತಿರುವಾಗಲೇ ಡಿ.ಕೆ.ಶಿವಕುಮಾರ್‌ ಅವರ ಈ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಅರಮನೆ ಮೈದಾನದಲ್ಲಿ ಗುರುವಾರ ನಡೆದ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಮಾವೇಶದಲ್ಲಿ ಭಾಗಿಯಾಗಿ ಡಿ.ಕೆ. ಶಿವಕುಮಾರ್‌ ಮಾತನಾಡಿದರು. ಈ ವೇಳೆ ಹಳೇ ಪಿಂಚಣಿ ವ್ಯವಸ್ಥೆ ಜಾರಿ ಕುರಿತಂತೆ ಅವರು ಹೇಳಿಕೆ ನೀಡುತ್ತಿದ್ದಂತೆ, ಸರ್ಕಾರಿ ನೌಕರರು ಡಿಕೆ, ಡಿಕೆ ಎಂದು ಘೋಷಣೆ ಕೂಗಲಾರಂಭಿಸಿದರು. ಅದನ್ನು ನಗುತ್ತಲೇ ತಡೆದ ಡಿ.ಕೆ.ಶಿವಕುಮಾರ್‌, ‘ನಾನು ಮುಂದಿನ ಬಾರಿ ಚುನಾವಣೆಗೆ ನಿಂತಾಗ. ನನ್ನ ನಾಯಕತ್ವದಲ್ಲಿ ಚುನಾವಣೆ ನಡೆದಾಗ ನನ್ನ ಹೆಸರನ್ನು ಕೂಗಿ. ವಾಪಸ್‌ ವಿಧಾನಸೌಧಕ್ಕೆ ಕರೆತನ್ನಿ. ನಾನು ಇನ್ನೂ ಏಳೆಂಟು ವರ್ಷ ರಾಜಕೀಯದಲ್ಲಿ ಸಕ್ರಿಯನಾಗಿರುತ್ತೇನೆ ಹಾಗೂ ನಾನು ಇನ್ನೂ ಗಟ್ಟಿಯಾಗಿದ್ದೇನೆ. ನಿಮ್ಮ ಮೇಲೆ ನನಗೆ ನಂಬಿಕೆಯಿದೆ. ನನ್ನ ಮೇಲೆ ನಂಬಿಕೆಯಿಡಿ ಎಂದು ಹೇಳಿದರು. 

ಡಿಕೆಶಿ ನಾಯಕತ್ವದಲ್ಲೇ ಮುಂದಿನ ಚುನಾವಣೆ ಹೇಳಿಕೆಯಲ್ಲಿ ತಪ್ಪಿಲ್ಲ: ಪರಂ

 ಮುಂದಿನ ಚುನಾವಣೆ ನನ್ನ ನಾಯಕತ್ವದಲ್ಲೇ ನಡೆಯುತ್ತದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, 2028ರ ಚುನಾವಣೆಗೆ ಇನ್ನೂ ಮೂರು ವರ್ಷವಿದೆ. ಶಿವಕುಮಾರ್‌ ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತದೆ ಎಂದು ಹೇಳುವುದರಲ್ಲಿ ತಪ್ಪೇನೂ ಕಾಣುತ್ತಿಲ್ಲ. ರಾಜ್ಯ ಸಚಿವ ಸಂಪುಟಕ್ಕೆ ಸಂಬಂಧಿಸಿದ ವಿಚಾರ ಮುಖ್ಯಮಂತ್ರಿಯವರಿಗೆ ಬಿಟ್ಟದ್ದು. ಅವರು ಸಂಪುಟ ಪುನಾರಚನೆ ಮಾಡಬಹುದು, ಇಲ್ಲವೇ ಹಾಗೆಯೇ ಮುಂದುವರೆಸಬಹುದು ಎಂದರು.

ಬೆಂಗಳೂರಿನಲ್ಲಿ ಲಾಂಗ್ ಹಿಡಿದುಕೊಂಡು ಬೈಕ್ ವ್ಹೀಲಿಂಗ್ ನಡೆಸಿದ ಪುಂಡರ ಪುಂಡಾಟಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇಂಥ ಪ್ರಕರಣದಲ್ಲಿ ಯಾವ ಸೆಕ್ಷನ್ ಅಡಿ ಕೇಸ್ ಹಾಕಬೇಕು ಎಂಬುದನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.