ರಾಜ್ಯ ಕಾಂಗ್ರೆಸ್ಸನ್ನು ಕಾಡುತ್ತಿರುವ ಅಧಿಕಾರ ಹಸ್ತಾಂತರ ಹಾಗೂ ಸಚಿವ ಸಂಪುಟ ವಿಸ್ತರಣೆ ಬಗೆಗಿನ ಗೊಂದಲವನ್ನು ಹೈಕಮಾಂಡ್‌ನೊಂದಿಗೆ ಚರ್ಚಿಸಿ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನವರಿ ಎರಡನೇ ವಾರ ಅಂದರೆ ಜ. 7ರ ನಂತರ ದೆಹಲಿಗೆ ತೆರಳುವ ಸಾಧ್ಯತೆಯಿದೆ.
- ಸಂಪುಟ ವಿಸ್ತರಣೆ, ಅಧಿಕಾರ ಹಸ್ತಾಂತರ ಚರ್ಚೆ?- ಫಾರಿನ್ ಟೂರ್ ಬಳಿಕ ರಾಹುಲ್ ಗೊಂದಲ ನಿವಾರಣೆ?
- ಕುರ್ಚಿ ಕಸರತ್ತು--
ಕುರ್ಚಿ-ಸಂಪುಟ ಸರ್ಕಸ್- ನಿನ್ನೆ ದೆಹಲಿಯಲ್ಲಿ ನಡೆದ ಸಿಡಬ್ಲ್ಯುಸಿ ಸಭೆಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ
- ಅವಕಾಶ ಸಿಕ್ಕರೆ ಸಭೆ ಬಳಿಕ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುವ ಇರಾದೆ ಇತ್ತು- ಆದರೆ ಸಿದ್ದರಾಮಯ್ಯಗೆ ರಾಹುಲ್ ಕೆಲಕಾಲ ಸಿಕ್ಕರೂ ನಡೆಯದ ಈ ಕುರಿತ ಚರ್ಚೆ
- ಶೀಘ್ರದಲ್ಲೇ ರಾಹುಲ್ ಗಾಂಧಿ ವಿದೇಶಕ್ಕೆ, ಅವರು ಜ.7ರ ವೇಳೆಗೆ ದೆಹಲಿಗೆ ವಾಪಸ್- ಇದಾದ ನಂತರ ಡಿಕೆಶಿ, ಸಿದ್ದು ದಿಲ್ಲಿಗೆ, ರಾಜ್ಯ ವಿದ್ಯಮಾನಗಳ ಬಗ್ಗೆ ಗಹನ ಚರ್ಚೆ
---ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯ ಕಾಂಗ್ರೆಸ್ಸನ್ನು ಕಾಡುತ್ತಿರುವ ಅಧಿಕಾರ ಹಸ್ತಾಂತರ ಹಾಗೂ ಸಚಿವ ಸಂಪುಟ ವಿಸ್ತರಣೆ ಬಗೆಗಿನ ಗೊಂದಲವನ್ನು ಹೈಕಮಾಂಡ್‌ನೊಂದಿಗೆ ಚರ್ಚಿಸಿ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನವರಿ ಎರಡನೇ ವಾರ ಅಂದರೆ ಜ. 7ರ ನಂತರ ದೆಹಲಿಗೆ ತೆರಳುವ ಸಾಧ್ಯತೆಯಿದೆ.
ಏಕೆಂದರೆ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಮತ್ತೆ ವಿದೇಶಕ್ಕೆ ತೆರಳಲಿದ್ದು, ಜ. 7ರ ನಂತರ ಸ್ವದೇಶಕ್ಕೆ ಮರಳಲಿದ್ದಾರೆ. ವಿದೇಶದಿಂದ ಮರಳಿದ ನಂತರ ಅವರು ರಾಜ್ಯ ಕಾಂಗ್ರೆಸ್ಸನ್ನು ಕಾಡುತ್ತಿರುವ ಗೊಂದಲ ನಿವಾರಣೆಗೆ ಕೈ ಹಾಕುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ದೆಹಲಿಗೆ ತೆರಳುವ ಸಾಧ್ಯತೆಯಿದೆ ಎನ್ನಲಾಗಿದೆ.ಈ ದೆಹಲಿ ಭೇಟಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್‌ನಿಂದ ಸ್ಪಷ್ಟತೆ ಪಡೆಯುವ ಸಾಧ್ಯತೆಯಿದೆ. ಶನಿವಾರ ದೆಹಲಿಯಲ್ಲಿ ನಡೆದ ಸಿಡಬ್ಯ್ಲುಸಿ ಸಭೆ ಸಂದರ್ಭದಲ್ಲಿ ಅವಕಾಶ ದೊರೆತರೆ ಈ ಬಗ್ಗೆ ಚರ್ಚಿಸುವ ಇರಾದೆ ಸಿಎಂ ಅವರಿಗೆ ಇತ್ತು. ಆದರೆ, ಈ ಸಭೆ ಕೇವಲ ಮನರೇಗಾ ವಿಚಾರವಾಗಿ ಮಾತ್ರ ನಡೆದಿದ್ದು, ರಾಹುಲ್- ಸಿದ್ದರಾಮಯ್ಯ ಕೆಲ ಕಾಲ ಮಾತನಾಡಿದ್ದರೂ ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಯಾವ ವಿಚಾರವೂ ಚರ್ಚೆಯಾಗಿಲ್ಲ.
ಹೀಗಾಗಿ ಜನವರಿ ಎರಡನೇ ವಾರದ ನಂತರ ದೆಹಲಿಗೆ ಭೇಟಿ ನೀಡುವ ವೇಳೆ ಈ ಬಗ್ಗೆ ಸ್ಪಷ್ಟತೆ ಪಡೆಯುವ ಉದ್ದೇಶ ಮುಖ್ಯಮಂತ್ರಿಯವರಿಗೆ ಇದೆ.ಈ ನಡುವೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ನಿಂದ ಸ್ಪಷ್ಟತೆ ಪಡೆಯುವ ಉದ್ದೇಶವಿದ್ದು, ಈ ಬಗ್ಗೆ ಜ.7ರ ದೆಹಲಿ ಭೇಟಿ ವೇಳೆ ಅವರು ಈ ವಿಚಾರ ಪ್ರಸ್ತಾಪಿಸಲಿದ್ದಾರೆ.
ಬೆಳಗಾವಿ ವಿಧಾನಮಂಡಲ ಅಧಿವೇಶನದ ನಂತರ ಈ ಬಗ್ಗೆ ಹೈಕಮಾಂಡ್ ಅಧಿಕಾರ ಹಸ್ತಾಂತರ ವಿಚಾರದ ಬಗ್ಗೆ ತನ್ನ ನಿಲುವು ಸ್ಪಷ್ಟ ಪಡಿಸಲಿದೆ ಎನ್ನಲಾಗಿತ್ತು. ಆದರೆ, ಅಧಿವೇಶನದ ನಂತರವೂ ಹೈಕಮಾಂಡ್ ಈ ಬಗ್ಗೆ ಇನ್ನೂ ಯಾವುದೇ ನಿಲುವು ಪ್ರಕಟಿಸಿಲ್ಲ.ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂತಹ ಗೊಂದಲವನ್ನು ರಾಜ್ಯ ನಾಯಕರೇ ಬಗೆಹರಿಸಿಕೊಳ್ಳಬೇಕು ಎನ್ನುವ ಮೂಲಕ ಚರ್ಚೆಯ ದಿಕ್ಕು ಬದಲಿಸುವ ಪ್ರಯತ್ನ ಮಾಡಿದ್ದರು. ಹೀಗಾಗಿ ಈ ವಿಚಾರದ ಬಗ್ಗೆ ಹೈಕಮಾಂಡ್ ತನ್ನ ನಿಲುವನ್ನು ಸ್ಪಷ್ಟವಾಗಿ ಪ್ರಕಟಿಸಬೇಕು ಎಂಬುದು ಡಿ.ಕೆ. ಶಿವಕುಮಾರ್ ಬಣದ ಒತ್ತಾಯ.
ಈ ಗೊಂದಲ ಬಗೆಹರಿಯದೇ ಆಡಳಿತ ಹಾಗೂ ಪಕ್ಷ ಎರಡೂ ಸರಾಗವಾಗಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಈ ಬಗ್ಗೆ ಹೈಕಮಾಂಡ್ ಯಾವ ನಿಲುವು ಹೊಂದಿದೆ ಎಂಬುದು ಬಹಿರಂಗಪಡಿಸಲಿ ಎಂದು ಈ ಬಣ ಒತ್ತಡ ನಿರ್ಮಾಣ ಮಾಡತೊಡಗಿದೆ. ಹೀಗಾಗಿ, ಉಭಯ ನಾಯಕರು ಜನವರಿ ಎರಡನೇ ವಾರದಲ್ಲಿ ದೆಹಲಿಗೆ ಭೇಟಿ ನೀಡಿದರೆ ಹಾಗೂ ಹೈಕಮಾಂಡ್‌ನೊಂದಿಗೆ ಚರ್ಚೆ ಸಾಧ್ಯವಾದರೇ ರಾಜ್ಯ ಕಾಂಗ್ರೆಸ್ ಕಾಡುತ್ತಿರುವ ಗೊಂದಲಗಳಿಗೆ ಸ್ಪಷ್ಟತೆ ದೊರೆಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ.