ಸಿದ್ದು ರಾಜೀನಾಮೆ ಫಿಕ್ಸಾಗಿದೆ, ಹುಡುಗಾಟಕ್ಕೆ ಹೇಳ್ತಿಲ್ಲ: ಬಿವೈವಿ

| Published : Nov 06 2024, 11:56 PM IST

ಸಿದ್ದು ರಾಜೀನಾಮೆ ಫಿಕ್ಸಾಗಿದೆ, ಹುಡುಗಾಟಕ್ಕೆ ಹೇಳ್ತಿಲ್ಲ: ಬಿವೈವಿ
Share this Article
  • FB
  • TW
  • Linkdin
  • Email

ಸಾರಾಂಶ

ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ಹೀಗಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಹೂರ್ತ ಫಿಕ್ಸ್ ಮಾಡಿದೆ. ಇದನ್ನು ನಾನು ಹುಡುಗಾಟಕ್ಕೆ ಹೇಳುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ(ಶಿಗ್ಗಾಂವಿ)

ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ಹೀಗಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಹೂರ್ತ ಫಿಕ್ಸ್ ಮಾಡಿದೆ. ಇದನ್ನು ನಾನು ಹುಡುಗಾಟಕ್ಕೆ ಹೇಳುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬಂಕಾಪುರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ಸಿಗರೇ ಪಟ್ಟು ಹಿಡಿದಿದ್ದಾರೆ. ಅಧಿಕಾರದಿಂದ ಇಳಿಸುವ ಸಂಬಂಧ ಹೈಕಮಾಂಡ್‌ನಲ್ಲಿ ಚರ್ಚೆ ಆಗಿದ್ದು ನಮ್ಮ ಕಿವಿಗೆ ಬಿದ್ದಿದೆ. ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿಯೋದು ಖಚಿತ. ಬೇಕಿದ್ದರೆ ಮುಖ್ಯಮಂತ್ರಿ ಆಗಿ ಐದು ವರ್ಷ ಅವಧಿ ಪೂರ್ಣ ಮಾಡುತ್ತೇನೆಂದು ಸಿದ್ದರಾಮಯ್ಯ ಅವರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ಆರೋಪಿ ನಂಬರ್ ಒನ್. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಮುಖ್ಯಮಂತ್ರಿ ವಿಚಾರಣೆಗೆ ಹೋಗಿಯೂ ಬಂದಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ಮುಖ್ಯಮಂತ್ರಿಯ ಭಯ ಕಾಡುತ್ತಿದೆ. ಎಷ್ಟು ಬೇಗ ಅವರಿಗೆ ರಿಲೀಫ್‌ ಕೊಡಬೇಕು, ಬಿ ರಿಪೋರ್ಟ್ ಹಾಕಬೇಕು ಎಂಬ ನಿಟ್ಟಿನಲ್ಲಿ ಲೋಕಾಯುಕ್ತ ತನಿಖೆ ಸಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಲೋಕಾಯುಕ್ತದವರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಂಡರಿದ್ದಾರೆ. ಆದರೂ ಅವರಿಗೆ ಆತಂಕ ಕಾಡುತ್ತಿದೆ, ಅವರ ಗೌರವ ಬಟಾಬಯಲಾಗಿದೆ. ಪ್ರಾಮಾಣಿಕರು ಎಂದು ಬಿಂಬಿಸಿಕೊಳ್ಳುತ್ತಿದ್ದ ಅವರು ಈಗ ವಿಚಲಿತರಾದಂತೆ ನಡೆದುಕೊಳ್ಳುತ್ತಿದ್ದಾರೆ. ಎಷ್ಟು ಬೇಗ ಕ್ಲೀನ್ ಚಿಟ್ ಸಿಗುತ್ತೆ ಅಂತ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಲೋಕಾಯುಕ್ತ ಪೊಲೀಸರ ಪ್ರಶ್ನೆಗೆ ಏನು ಉತ್ತರ ಕೊಡಬೇಕು ಎಂಬುದು ಮೊದಲೇ ನಿರ್ಧಾರವಾಗಿದೆ. ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಮುಡಾ ಗಂಡಾಂತರದಿಂದ ಪಾರಾಗಲು ಸಾಧ್ಯವಿಲ್ಲ. ಇಷ್ಟೊತ್ತಿಗಾಗಲೇ ಪ್ರಕರಣವನ್ನು ಅವರು ಸಿಬಿಐ ತನಿಖೆಗೆ ಕೊಡಬೇಕಿತ್ತು ಎಂದರು.