ಸಿಎಂ ಕುರ್ಚಿಗಾಗಿ ಸಿದ್ದು, ಡಿಕೆಶಿ ಬಡಿದಾಟ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ

| Published : Dec 06 2024, 12:35 PM IST

BY vijayendraa

ಸಾರಾಂಶ

ಡಿಕೆಶಿ ಅವರಿಗೆ ಮುಖ್ಯಮಂತ್ರಿಯಾಗಬೇಕೆಂದು ಹಠ ಇದೆ. ಆದರೆ, ಶಾಸಕರ ಬಲವಿಲ್ಲ. ಹೇಗಾದರೂ ಮಾಡಿ ಸಿದ್ದರಾಮಯ್ಯನವರ ಮನಸ್ಸು ಗೆಲ್ಲಲು ಪ್ರಯತ್ನ ನಡೆಸಿದ್ದಾರೆ ಎಂದು ತಿವಿದರು.

ಲಿಂಗಸುಗೂರು/ಶಹಾಪುರ : ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಒಳ ಒಳಗೆ ಬೇಗುದಿ ಇದೆ. ಅದು ಯಾವ ಹಂತಕ್ಕೆ ತಲುಪುತ್ತದೆ ಎಂಬುದು ಬರುವ ದಿನಗಳಲ್ಲಿ ಹೊರಗೆ ಬರುತ್ತದೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಪರಿಸ್ಥಿತಿ ಬಿಗಡಾಯಿಸಲಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ 8-10 ಜನ ರೇಸ್‌ನಲ್ಲಿ ಇದ್ದಾರೆ. ಆದರೆ, ಸಿಎಂ ಕುರ್ಚಿ ಇರುವುದು ಒಂದೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಯಾದಗಿರಿ ಜಿಲ್ಲೆ ಶಹಾಪುರ ಹಾಗೂ ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ಗುರುವಾರ ವಕ್ಫ್‌ ಜನಾಂದೋಲನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಒಳ ಒಪ್ಪಂದ ಆಗಿದೆ, ಈಗ ಮಾತನಾಡಲ್ಲ ಎಂದು ಹೇಳಿದ್ದೇ ಡಿಕೆಶಿ. ಅವರಿಗೆ ಮುಖ್ಯಮಂತ್ರಿಯಾಗಬೇಕೆಂದು ಹಠ ಇದೆ. ಆದರೆ, ಶಾಸಕರ ಬಲವಿಲ್ಲ. ಹೇಗಾದರೂ ಮಾಡಿ ಸಿದ್ದರಾಮಯ್ಯನವರ ಮನಸ್ಸು ಗೆಲ್ಲಲು ಪ್ರಯತ್ನ ನಡೆಸಿದ್ದಾರೆ ಎಂದು ತಿವಿದರು.

ಇದೇ ವೇಳೆ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ವಿಜಯೇಂದ್ರ, ಒಂದು ಸಮುದಾಯದ ಓಲೈಕೆಗಾಗಿ ರೈತರ ಕಣ್ಣಲ್ಲಿ ನೀರು ಬರುವಂತೆ ಮಾಡುವುದು ಸರಿಯಲ್ಲ. ಅಧಿಕಾರದ ಮದದಿಂದ ರೈತರ ಕಣ್ಣಲ್ಲಿ ನೀರು ಬಂದರೆ ಸರ್ಕಾರಕ್ಕೆ ಶಾಪ ತಟ್ಟದೆ ಇರುತ್ತಾ ಎಂದು ವಾಗ್ದಾಳಿ ನಡೆಸಿದರು.

ರೈತರು, ದೇವಸ್ಥಾನ, ಮಠ-ಮಾನ್ಯಗಳ ಜಮೀನುಗಳ ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾಗಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್‌ ಅಹ್ಮದ್ ಅವರ ಕುಮ್ಮಕ್ಕು ಇದೆ. ಯಾವುದೇ ಜನಪರ ಹೋರಾಟ ಮಾಡದೆ ಅದೃಷ್ಟದ ಆಟದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾರೆ. ಅಲ್ಪಸಂಖ್ಯಾತರ ತುಷ್ಠಿಕರಣ ಮಾಡಲು ಮುಂದಾಗಿದ್ದಾರೆ. ರಾಜ್ಯದ ಜಿಲ್ಲಾಧಿಕಾರಿಗಳಿಗೆ ರಾತೋರಾತ್ರಿ ಪ್ರಭಾವ ಬೀರಿ ಸಾವಿರಾರು ವರ್ಷಗಳ ಇತಿಹಾಸ ಇರುವ ದೇವಸ್ಥಾನ, ಮಠ-ಮಂದಿರ, ರೈತರ ಜಮೀನುಗಳ ಪಹಣಿ ದಾಖಲೆಯಲ್ಲಿ ವಕ್ಫ್‌ ಹೆಸರು ನಮೂದು ಮಾಡಿದ್ದಾರೆ ಎಂದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿರಬಹುದು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ವಕ್ಫ್‌ ನೋಟಿಸ್ ನೀಡಿರುವುದರ ಪರಿಣಾಮ ಉಂಟಾಗುತ್ತದೆ. ರೈತರಿಗೆ ನೋಟಿಸ್ ನೀಡಿರುವ ಈ ಸರ್ಕಾರದ ಪಾಪದ ಕೊಡ ತುಂಬಿದೆ. ರೈತ ವಿರೋಧಿ ಸರ್ಕಾರ ಮುಂದಿನ ದಿನಗಳಲ್ಲಿ ನೆಲಕಚ್ಚಲಿದೆ ಎಂದು ಕಿಡಿ ಕಾರಿದರು.

ಗೊಂದಲ ಇರುವುದು ನಿಜ:

ಬಿಜೆಪಿಯಲ್ಲಿನ ಬಣಗಳ ಕುರಿತು ರಾಜ್ಯದ ಜನರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಇರುವುದು ಸತ್ಯ. ಪಕ್ಷದಲ್ಲಿನ ಗೊಂದಲವನ್ನು ಕೇಂದ್ರದ ವರಿಷ್ಠ ನಾಯಕರು ಬಗೆಹರಿಸುತ್ತಾರೆ ಎಂದು ಹೇಳಿದರು.