ಸಾರಾಂಶ
ನನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡಲಾಗುತ್ತಿದ್ದು, ಕೆಲವರು ತಮ್ಮ ಮಾನ ಉಳಿಸಿಕೊಳ್ಳಲು ವಾಮಮಾರ್ಗ ಹಿಡಿದಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಬೆಂಗಳೂರು : ನನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡಲಾಗುತ್ತಿದ್ದು, ಕೆಲವರು ತಮ್ಮ ಮಾನ ಉಳಿಸಿಕೊಳ್ಳಲು ವಾಮಮಾರ್ಗ ಹಿಡಿದಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮಾಧ್ಯಮದಲ್ಲಿ ಬಂದಿರುವುದೆಲ್ಲ ಅಂತೆ-ಕಂತೆಗಳು. ಅದು ನೆಗೆಟಿವ್ ನೆರೇಟಿವ್ ಸೃಷ್ಟಿಸಲು ಮಾಡಿರುವ ಒಂದು ಷಡ್ಯಂತ್ರದ ಭಾಗ. ಎಫ್ಎಸ್ಎಲ್‌ಗೆ ವಿಡಿಯೋ ಕಳುಹಿಸಿಲ್ಲ. ತನಿಖೆಯೇ ಆಗಿಲ್ಲ. ಡಿ.19ರ ರಾತ್ರಿ ಖಾನಾಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಅದರಲ್ಲಿ ನನ್ನ ಮೇಲೆ ಹಲ್ಲೆ ಮಾಡಿದವರ ವಿವರ ನೀಡಿದ್ದೇನೆ. ಹಲ್ಲೆಗೆ ಕುಮ್ಮಕ್ಕು ಕೊಟ್ಟವರ ಮಾಹಿತಿಯನ್ನೂ ಕೊಟ್ಟಿದ್ದೇನೆ. ಈವರೆಗೆ ಎಫ್ಐಆರ್ ಮಾಡಿಲ್ಲ. ದೇಶದಲ್ಲಿ ನನಗೊಂದು, ಬೇರೆಯವರಿಗೆ ಒಂದು ಸಂವಿಧಾನ ಮತ್ತು ಕಾನೂನಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ವಿರುದ್ಧ ಕೊಟ್ಟ ದೂರು ಕ್ಷಣ ಮಾತ್ರದಲ್ಲಿ ಎಫ್ಐಆರ್ ಆಗುತ್ತದೆ. ನಾನು ಕೊಟ್ಟ ದೂರು ಎಫ್ಐಆರ್ ಆಗುವುದಿಲ್ಲ ಎಂದಾದರೆ ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಡ ಎಂದರು.
ಇವರು ನಡೆಸುವ ತನಿಖೆ ಪ್ರಾಮಾಣಿಕವಾಗಿರಲಿದೆ ಎಂಬುದಾಗಿ ಹೇಗೆ ಭಾವಿಸಲಾಗುತ್ತದೆ? ಮುಖಭಂಗವಾಗುವುದನ್ನು ತಪ್ಪಿಸಲು ಸರ್ಕಾರದಲ್ಲಿರುವ ಕೆಲವರು ಅಡ್ಡದಾರಿ ಹಿಡಿದಿದ್ದಾರೆ. ತನಿಖೆಯ ಹಂತದಲ್ಲಿ ಎಲ್ಲವನ್ನೂ ವಿವರವಾಗಿ ಹೇಳಲಾಗುವುದಿಲ್ಲ. ನಾನೇನು ಹೇಳಬೇಕೋ ಅದನ್ನು ಸಭಾಪತಿಯವರಿಗೆ ಹೇಳಿದ್ದೇನೆ. ಸಭಾಪತಿಗಳು ದಾಖಲೆಗಳನ್ನು ಪರಿಶೀಲಿಸಿಯೇ ರೂಲಿಂಗ್ ಕೊಟ್ಟಿದ್ದಾರೆ. ಆ ರೂಲಿಂಗ್ ಪ್ರಶ್ನಿಸಿದರೆ ಅದು ಸಂವಿಧಾನವನ್ನು ಪ್ರಶ್ನಿಸಿದಂತೆ ಎಂದು ಹೇಳಿದರು.
ಪೊಲೀಸರು ಒತ್ತಡಕ್ಕೊಳಗಾಗಿದ್ದು, ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಡಿಜಿಪಿ- ಐಜಿಪಿಗೆ ದೂರು ಕೊಟ್ಟಿದ್ದೇನೆ. 20 ವರ್ಷ ಶಾಸಕನಾಗಿ, 2 ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗಲೂ ವಿಧಾನಪರಿಷತ್ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ದೂರಿಗೆ ಈ ರೀತಿಯಾದರೆ, ಜನಸಾಮಾನ್ಯರ ದೂರಿನ ಪರಿಸ್ಥಿತಿ ಏನು ಎಂದು ಬೇಸರ ವ್ಯಕ್ತಪಡಿಸಿದರು.
- ನನ್ನ ದೂರಿಗೆ ಈವರೆಗೆ ಎಫ್‌ಐಆರ್ ಆಗಿಲ್ಲ
- ಮಾಜಿ ಸಚಿವನ ದೂರಿಗೇ ಹೀಗಾದರೆ ಹೇಗೆ?
- ಇನ್ನು ಜನಸಾಮಾನ್ಯರ ಸ್ಥಿತಿಯೇನು?: ರವಿ